ಕಮಲನಗರ: ಶಾಸಕ ಪ್ರಭು ಚವಾಣ್ ಅವರು ತಾಲ್ಲೂಕಿನ ಚಿಮ್ಮೇಗಾಂವ ವ್ಯಾಪ್ತಿಯಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಿಂದ ನಿರ್ಮಾಣಗೊಳ್ಳುತ್ತಿರುವ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
‘ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಒತ್ತಡ ತಂದು ನಿರಂತರವಾಗಿ ಪ್ರಯತ್ನಪಟ್ಟು ಔರಾದ್ (ಬಿ) ಕ್ಷೇತ್ರಕ್ಕೆ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರ ತಂದಿದ್ದೇನೆ. ಕೆಲಸ ಸರಿಯಾಗಿ ಆಗಬೇಕು. ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಕೆಲಸದಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ನೇರವಾಗಿ ನನ್ನನ್ನು ಭೇಟಿಯಾಗಬೇಕು. ಅದನ್ನು ಬಿಟ್ಟು ರೈತರನ್ನು ಏಕೆ ಸತಾಯಿಸುತ್ತಿದ್ದೀರಿ’ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದರು.
‘ಹೊಲಗಳಿಗೆ ತೆರಳಲು ಇದ್ದ ರಸ್ತೆಗಳನ್ನು ಮುಚ್ಚಿ ಹಾಕಿದ್ದು, ಪ್ರತಿದಿನ ನಮ್ಮ ಹೊಲಕ್ಕೆ ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಷ್ಟು ಸಲ ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ ಮತ್ತು ಜಮೀನು ನೀಡಿದ ಎಲ್ಲರಿಗೂ ಸಮಾನವಾಗಿ ಹಣ ಪಾವತಿಸದೇ ತಾರತಮ್ಯ ಮಾಡಲಾಗುತ್ತಿದೆ. ಕೇಳಲು ಹೋದರೆ ಸರಿಯಾಗಿ ಮಾತನಾಡುತ್ತಿಲ್ಲ’ ಎಂದು ರೈತರು ಶಾಸಕರ ಎದುರು ಸಮಸ್ಯೆ ಬಿಚ್ಚಿಟ್ಟರು.
ಇದರಿಂದ ಕೋಪಗೊಂಡ ಶಾಸಕರು,‘ರಸ್ತೆಗಳನ್ನೆಲ್ಲ ಮುಚ್ಚಿ ಹಾಕಿದರೆ ರೈತರು ಹೊಲಗಳಿಗೆ ಹೇಗೆ ಹೋಗಬೇಕು? ಕೂಡಲೇ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿಕೊಡಬೇಕು. ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುವುದು ಸಲ್ಲ. ನಿಯಮದಂತೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪರಿಹಾರ ಕಲ್ಪಿಸಬೇಕು. ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಹಶೀಲ್ದಾರರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ತಹಶೀಲ್ದಾರ್ ಅಮಿತ್ ಕುಲಕರ್ಣಿ, ನಿಗಮದ ಎಂಜಿನೀಯರ್ ಶಿವರಾಜ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಅನೀಲ ಬಿರಾದಾರ, ಧನಾಜಿ ರಾಠೋಡ, ಮಹಾದೇವ ಮಾಳಕಾರೆ, ಸಂಜು ಪಾಟೀಲ ಚಿಮ್ಮೇಗಾಂವ, ರಾಜಕುಮಾರ ಸೋನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.