ಬೀದರ್: ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾ ಅವರೆ, ತೊಗರಿ, ಉದ್ದು, ಹೆಸರು ಹಾಗೂ ಇತರೆ ಬೆಳೆಗಳಿಗೆ ಬಸವನ (ಶಂಖದ) ಹುಳು ಬಾಧೆ ಕಂಡು ಬಂದಿದ್ದು ರೈತರಿಗೆ ಆತಂಕ ಮೂಡಿಸಿದೆ. ರೈತರು ಕೆಳಗೆ ಸೂಚಿಸಿದಂತೆ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ ತಿಳಿಸಿದ್ದಾರೆ.
ಬಸವನ ಹುಳುಗಳು ಬೆಳೆಯುತ್ತಿರುವ ಗಿಡದ ಎಲೆ, ದೇಟು, ಕಾಂಡ ಹಾಗೂ ಕಾಂಡದ ತೊಗಟೆ ಕೆರೆದು ತಿನ್ನುವುದು. ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿ ಇವುಗಳ ಬಾಧೆ ಕಾಣಬಹುದು. ಮಳೆಗಾಲದಲ್ಲಿ ನೀರಿನ ಮೂಲದ ಸುತ್ತಮುತ್ತ ಹೊಲದಲ್ಲಿರುವ ನಡೆದಾಡಲು ಬಳಸುವ ಕಟ್ಟೆಗಳು, ಓಡಾಡುವ ಸ್ಥಳ, ಕಳೆ ಕಸಗಳು ಈ ಪೀಡೆಯ ಅಡಗು ತಾಣಗಳಾಗಿವೆ.
ಶಂಖದ ಹುಳು ತನ್ನ ಜೀವಿತಾವಧಿಯಲ್ಲಿ 100 ರಿಂದ 500 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿದೆ. 3 ರಿಂದ 5 ಸೆಂ.ಮೀ ಆಳದಲ್ಲಿ ಭೂಮಿಯ ಒಳಗೆ ಇಟ್ಟು ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತದೆ. ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೆಯಿಂದ ಮರಿಗಳು ಹೊರ ಬಂದು ಜೀವಿಸುವುದನ್ನು ನೋಡುತ್ತದೆ. ಇಲ್ಲದಿದ್ದಲ್ಲಿ ಸುಪ್ತಾವಸ್ಥೆಗೆ ಹೋಗುತ್ತವೆ. ಬಸವನ ಹುಳು ಹತೋಟಿಗೆ ನಿರ್ಲಕ್ಷ್ಯ ವಹಿಸಿದಲ್ಲಿ ಸಂಪೂರ್ಣ ಬೆಳೆ ನಾಶವಾಗಿ ಮರು ಬಿತ್ತನೆ ಮಾಡುವ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆಯಿದೆ. ಆದರಿಂದ ಕೃಷಿ ಇಲಾಖೆ ಸೂಚಿಸಿದಂತೆ ರೈತರು ಮುತುವರ್ಜಿ, ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಪೀಡೆಗೆ ಆಸರೆಯಾಗುವ ಅಡಗು ತಾಣಗಳಾದ ಹುಲ್ಲು, ಕಸ ಕಡ್ಡಿ ಮುಂತಾದವುಗಳನ್ನು ತೆಗೆದು ಸ್ವಚ್ಚವಾಗಿಡಬೇಕು. ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪು ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂಡುತ್ತವೆ. ಅದನ್ನು ಸುಡಬೇಕು. ಹೊಲದ ನಡೆದಾಡುವ ಕಟ್ಟೆ ಅಥವಾ ಅರಣಿಯ ಆರಂಭದಲ್ಲಿ (ಗಡಿಗುಂಟ) ಹರಳು (ದಪ್ಪ) ಉಪ್ಪು ಸುರಿಯಬೇಕು.
ಸಂಜೆ ಅಥವಾ ಬೆಳಗಿನ ಸಮಯದಲ್ಲಿ ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆ ಹಾಕಿ ಬಸವನ ಹುಳುಗಳ ಮೇಲೆ ಉಪ್ಪು ಹಾಕುವುದರಿಂದ ನಾಶಪಡಿಸಬಹುದು. ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿಚೀಲ ಹರಡಿ ಅಥವಾ ಕೊಳೆತ ಕಸದ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳಗಳ ಮೇಲೆ ಬ್ಲಿಚಿಂಗ್ ಪುಡಿ (8 ರಿಂದ 10 ಕಿ.ಗ್ರಾ ಪ್ರತಿ ಎಕರೆಗೆ) ಧೂಳಿಕರಿಸಿ ನಾಶಪಡಿಸಬಹುದು.
ಮೆಟಾಲ್ಡಿಹೈಡ್ (ಶೇ 2.5) ಮಾತ್ರೆಗಳನ್ನು ಎಕರೆಗೆ 2 ಕಿ.ಗ್ರಾಂ ನಂತೆ ಹೊಲದಲ್ಲಿ ಎರಚಬೇಕು. ಬಸವನ ಹುಳಗಳು ಈ ಮಾತ್ರೆಗಳಿಗೆ ಆಕರ್ಷಿತವಾಗಿ ಸಾಯುತ್ತವೆ. ಅಕ್ಕಿ ಅಥವಾ ಗೋಧಿ ತೌಡು 10 ಕೆ.ಜಿ., 5 ಕೆ.ಜಿ. ಬೆಲ್ಲ ಮತ್ತು ತಕ್ಕ ಮಟ್ಟಿಗೆ ನೀರನ್ನು (6ರಿಂದ75 ಲೀ) ಬೆರೆಸಿ 36 ಗಂಟೆ ಮುಚ್ಚಿ ಇಡಬೇಕು. ಮಾರನೇ ದಿನ ಸಂಜೆ ಮಿಥೋಮಿಲ್ 40 ಎಸ್.ಪಿ ಕೀಟನಾಶಕವನ್ನು (250 ಗ್ರಾಂ) ಮಿಶ್ರಣ ಮಾಡಿ ಸಂಜೆ 5 ಗಂಟೆಯ ನಂತರ ಹೊಲದ ಸುತ್ತ ಅಂಚಿನಲ್ಲಿ ಅಥವಾ ಸಾಲುಗಳಲ್ಲಿ ಹಾಕಬೇಕು ಎಂದು ತಿಳಿಸಿದ್ದಾರೆ.
ಸತ್ತ ಹುಳುಗಳನ್ನು ಮರುದಿನವೇ ಆರಿಸಿ 3 ಅಡಿ ಆಳದ ಗುಂಡಿಯಲ್ಲಿ ಹೂಳಬೇಕು. ಈ ರೀತಿ ಮಾಡುವುದರಿಂದ ಸತ್ತ ಹುಳುವಿನ ಹೊಟ್ಟೆಯಲ್ಲಿರುವ ಮೊಟ್ಟೆಗಳನ್ನು ನಾಶ ಮಾಡಿದಂತಾಗುತ್ತದೆ. ಮಿಥೋಮಿಲ್ ವಿಷಪಾಶಾಣವನ್ನು ಬಳಸಿದ ಯಾವುದೇ ಬೆಳೆಗಳಲ್ಲಿ ಇತರೆ ಸಾಕು ಪ್ರಾಣಿಗಳು ಹಾಗೂ ಜಾನುವಾರುಗಳು ಈ ವಿಷಪಾಷಾಣದ ತುಣುಕುಗಳನ್ನು ತಿನ್ನದಂತೆ ಎಚ್ಚರ ವಹಿಸಬೇಕು. ಅನಂತರ ಮಣ್ಣಿನ ಪುಡಿ ಅಥವಾ ನೀರನ್ನು ಚೆಲ್ಲಿ ನಿಷ್ಕ್ರಿಯಗೊಳಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧೆಡೆ ಸೋಯಾಬಿನ್, ತೊಗರಿ, ಉದ್ದು ಹಾಗೂ ಹೆಸರು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ವಾರದ ಹಿಂದೆ ಬಿತ್ತನೆ ಕೈಗೊಂಡ ಜಮೀನಿನಲ್ಲಿ ಸದರಿ ಬೆಳೆಗಳ ಮೊಳಕೆ ಒಡೆಯುವ ಹಂತ ಹಾಗೂ ಎರಡು ಮೂರು ಎಲೆ ಬಂದಿರುವ ಹಂತ ಹುಳುವಿನ ಬಾಧೆ ಕಾಣಿಸಿದೆ. ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಸೋಯಾಬಿನ್ ಬೆಳೆಯಲಾಗುತ್ತದೆ ಎಂದಿದ್ದಾರೆ.
ಜಿಲ್ಲೆಯಲ್ಲಿ 1.80 ಲಕ್ಷ ಹೆಕ್ಟರ್ ಸೋಯಾಬಿನ್, 98 ಸಾವಿರ ಹೆಕ್ಟೇರ್ ತೊಗರಿ, 30 ಸಾವಿರ ಹೆಕ್ಟೇರ್ ಹೆಸರು, 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬೆಳೆಯಲಾಗುತ್ತಿದೆ. ಈ ಬೆಳೆಗಳು ಮುಂಗಾರು ಹಂಗಾಮಿನ ಶೇ. 90ರಷ್ಟು ಬೆಳೆ ವಿಸ್ತೀರ್ಣ ಹೊಂದಿರುತ್ತವೆ. ಔರಾದ್, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಬಸವನ ಹುಳುವಿನ ಬಾಧೆ ಕಂಡು ಬಂದಿದೆ. ಮೇಲೆ ತಿಳಿಸಿದಂತೆ ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಿದರೆ ಅವುಗಳನ್ನು ತಡೆಯಬಹುದು ಎಂದು ಸಲಹೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.