ಬೀದರ್: ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬೀದರ್ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ 18ನೇ ಶಕ್ತಿ ಸಂಭ್ರಮ ಹಾಗೂ ಮಹಿಳಾ ಅಂತರ ಕಾಲೇಜುಗಳ ಯುವಜನೋತ್ಸವದ ಎರಡನೇ ದಿನವಾದ ಬುಧವಾರ ವನಿತೆಯರು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಧಾರ್ಮಿಕ ಆಚರಣೆ, ಕಂದಾಚಾರ, ಮೂಢನಂಬಿಕೆ, ಜಾತೀಯತೆ, ರಾಜಕೀಯ ಪರಿಸ್ಥಿತಿಯ ವಾಸ್ತವತೆ ಬಿಚ್ಚಿಟ್ಟರು.
ನಾಟಕ, ನೃತ್ಯರೂಪಕದ ಮೂಲಕ ಸಾಮಾಜಿಕ ಪರಿಸ್ಥಿತಿಯನ್ನು ವಿವರಿಸಿದರು. ಮಿಮಿಕ್ರಿ ಮೂಲಕ ನಗೆಗಡಲಲ್ಲಿ ತೇಲಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ತೋರಿದರು. ಜಾನಪದ, ಜಾನಪದ ಆರ್ಕೆಸ್ಟ್ರಾ, ರಸಪ್ರಶ್ನೆ, ಪೇಟಿಂಗ್, ಏಕವ್ಯಕ್ತಿ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ರಾಜ್ಯದ ವಿವಿಧ ಕಾಲೇಜುಗಳಿಂದ ಬಂದಿದ್ದ ತಂಡಗಳ ಪ್ರದರ್ಶನ ಕಂಡು ಜನ ಚಪ್ಪಾಳೆ ಬಾರಿಸಿ ಹುರಿದುಂಬಿಸಿದರು. ಸಾಮಾಜಿಕ ಸನ್ನಿವೇಶಗಳಿಗೆ ಹಲವರ ಕಣ್ಣುಗಳು ಒದ್ದೆಯಾಗಿದ್ದವು. ಗುರುವಾರ ಯುವಜನೋತ್ಸವದ ಸಮಾರೋಪ ನಡೆಯಲಿದೆ. ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ.
ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿ, ಮಹಿಳೆಯರು ಅಬಲೆಯರಲ್ಲ ಸಬಲೆಯರು. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟು ದೊಡ್ಡ ಬದಲಾವಣೆಗೆ ಕಾರಣರಾಗಿದ್ದಾರೆ. ಪ್ರತಿಯೊಂದು ರಂಗದಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮಹಿಳೆಯರಿಗೆ ಶೇ 50ರಷ್ಟು ಮೀಸಲು ಕಲ್ಪಿಸಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಎಂದು ತಿಳಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್, ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ವಿಶ್ರಾಂತ ಕುಲಪತಿ ಬಿ.ಜಿ. ಮೂಲಿಮನಿ, ಪ್ರಾಂಶುಪಾಲ ಪ್ರೊ. ಮನೋಜಕುಮಾರ, ಪ್ರೊ. ವಿಷ್ಣು ಎಂ. ಶಿಂಧೆ, ಪ್ರೊ. ವಿದ್ಯಾ ಪಾಟೀಲ, ಪ್ರೊ.ಡಿ.ಎಂ. ಮದರಿ, ಪ್ರೊ.ಡಿ.ಬಿ.ಕಂಬಾರ, ಶಂಕರಗೌಡ ಎಸ್. ಸೋಮನಾಳ, ಎಚ್.ಎಂ. ಚಂದ್ರಶೇಖರ, ಮಹಿಳಾ ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.