ADVERTISEMENT

ಬೀದರ್‌ | ಪತ್ರಿಕಾ ಭವನ ನಿರ್ವಹಣ ಸಮಿತಿಯಿಂದ ಅವ್ಯವಹಾರ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:23 IST
Last Updated 20 ಜೂನ್ 2024, 7:23 IST
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರು ಬೀದರ್‌ನಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರು ಬೀದರ್‌ನಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಜಿಲ್ಲಾ ಪತ್ರಿಕಾ ಭವನದ ನಿರ್ವಹಣ ಸಮಿತಿಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದ್ದು, ಅದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕರಂಜಿ, ಕಾರ್ಯದರ್ಶಿಗಳಾದ ಶ್ರೀಕಾಂತ್ ಬಿರಾದಾರ್, ಪೃಥ್ವಿ ಎಸ್., ಹಿರಿಯ ಪತ್ರಕರ್ತ ಮಾರುತಿ ಬಾವಿದೊಡ್ಡಿ, ಪತ್ರಕರ್ತರಾದ ಅನಿಲ್‌ ಕಮಠಾಣೆ, ಸೋಮನಾಥ ಬಿರಾದಾರ ಅವರು ನಗರದಲ್ಲಿ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ಏಕಪಕ್ಷೀಯವಾಗಿ ರಚಿಸಲಾಗಿದೆ. ಬಹುಸಂಖ್ಯಾತ ಪತ್ರಕರ್ತರನ್ನು ದೂರವಿಟ್ಟು ಕೆಲವೇ ಆಯ್ದ ಪತ್ರಕರ್ತರನ್ನು, ಅದರಲ್ಲೂ ರಾಜಕೀಯದಲ್ಲಿ ಸಕ್ರೀಯರಾಗಿರುವವರನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಗೌಪ್ಯ ಸಭೆ ಕರೆದು ನಿರ್ವಹಣಾ ಸಮಿತಿ ರಚಿಸಲಾಗಿದೆ. ನಿರ್ವಹಣಾ ಸಮಿತಿ ರಚಿಸಿದಾಗಿನಿಂದ ಈವರೆಗೆ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ADVERTISEMENT

ಪತ್ರಿಕಾ ಭವನದ ನಿರ್ವಹಣಾ ಸಮಿತಿ ಸದಸ್ಯರೇ ಪತ್ರಿಕಾ ಭವನದ ಪೀಠೋಪಕರಣಗಳು, ಸೌಂಡ್ ಬಾಕ್ಸ್, ಟೀನ್ ಶೆಡ್ ಖರೀದಿಸುವ ನೆಪದಲ್ಲಿ ತಾವೇ ಗುತ್ತಿಗೆದಾರರಾಗಿರುವುದು ಕಂಡು ಬಂದಿದೆ. ಲಕ್ಷಾಂತರ ರೂಪಾಯಿ ಪೀಠೋಪಕರಣಗಳನ್ನು ಖರೀದಿಸಲಾಗಿದೆ. ಆದರೆ, ಒಂದೇ ಒಂದು ಖರೀದಿಗೆ ಟೆಂಡರ್ ಕರೆದಿಲ್ಲ. ಪತ್ರಿಕಾ ಭವನದ ಹೆಸರಲ್ಲಿರುವ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳದೇ ನಗದು ವ್ಯವಹಾರ ನಡೆಸಲಾಗಿದೆ. ನಿತ್ಯ ಪತ್ರಿಕಾಗೋಷ್ಠಿಯಿಂದ ಬರುವ ಹಣ ನಗದು ರೂಪದಲ್ಲಿ ಇಡಲಾಗುತ್ತಿದೆ. ಅಕ್ರಮಕ್ಕೆ ರಹದಾರಿಯಾಗಿದೆ ಎಂದು ತಿಳಿಸಿದರು.

ನಿರ್ವಹಣಾ ಸಮಿತಿ ಸದಸ್ಯ ಪತ್ರಕರ್ತರು ಏಕಪಕ್ಷೀಯವಾಗಿ ಪತ್ರಿಕಾ ಭವನದ ಹಣ ಖರ್ಚು ಮಾಡುತ್ತಿದ್ದಾರೆ. ಈವರೆಗೆ ಅಂದಾಜು ₹15 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದ್ದು, ಇತರೆ ಪತ್ರಕರ್ತರನ್ನು ದೂರ ಇಡಲಾಗಿದೆ. ಪತ್ರಿಕಾ ಭವನದ ನಿಗರಾಣಿ ಹೆಸರಲ್ಲಿ ಶಿವಕುಮಾರ್ ಸ್ವಾಮಿ ಅವರನ್ನು ನೇಮಕ ಮಾಡಿ ಮಾಸಿಕ ₹10 ಸಾವಿರ ಸಂಬಳ ನಿಗದಿ ಮಾಡಲಾಗಿದೆ. ತಿಂಗಳಿಗೆ ಇಷ್ಟೊಂದು ಭಾರಿ ಮೊತ್ತದ ಹಣ ಸರಿದೂಗಿಸಲು ಸಾಧ್ಯವೇ? ಪತ್ರಿಕಾ ಭವನಕ್ಕೆ ಬರುವ ಆದಾಯಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಲು ನಿರ್ವಹಣಾ ಸಮಿತಿ ಸದಸ್ಯರು ಮುಂದಾಗಿರುವುದು ವಿಚಿತ್ರವಾಗಿದೆ ಎಂದು ತಿಳಿಸಿದ್ದಾರೆ.

ಹಾಲಿ ನಿರ್ವಹಣಾ ಸಮಿತಿ ತಕ್ಷಣ ರದ್ದುಪಡಿಸಬೇಕು. ನೂತನ ನಿರ್ವಹಣಾ ಸಮಿತಿ ರಚಿಸಲು ಪತ್ರಕರ್ತರ ಸಭೆ ಕರೆಯಬೇಕು. ಹಾಲಿ ನಿರ್ವಹಣಾ ಸಮಿತಿ ಅವಧಿಯಲ್ಲಿ ನಡೆದ ಎಲ್ಲ ಖರೀದಿ, ವ್ಯವಹಾರಗಳ ಸಮಗ್ರ ತನಿಖೆ ನಡೆಸಬೇಕು. ಪತ್ರಕರ್ತರ ಸಭೆ ಕರೆದು ಲೆಕ್ಕ- ಪತ್ರ ಬಹಿರಂಗಪಡಿಸಬೇಕು. ಶಿವಕುಮಾರ್ ಸ್ವಾಮಿ ನೇಮಕ ಅನಗತ್ಯವಾಗಿದ್ದು, ತಕ್ಷಣ ರದ್ದುಪಡಿಸಬೇಕು. ಜಿಲ್ಲಾ ವಾರ್ತಾ ಇಲಾಖೆ ಅಧೀನದಿಂದಲೇ ಪತ್ರಿಕಾ ಭವನದ ನಿರ್ವಹಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.