ಬೀದರ್: ‘ಪಾರಂಪರಿಕ ತಾಣಗಳ ಸಂರಕ್ಷಣೆ ಅಗತ್ಯ’ ಎಂದು ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಭಾಗ್ಯವತಿ ಸೋಮಶೇಖರ ಹೇಳಿದರು.
ಇಲ್ಲಿಯ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐತಿಹಾಸಿಕ ಸ್ಮಾರಕಗಳು ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿವೆ. ಮುಂದಿನ ಪೀಳಿಗೆಗಾಗಿ ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಬೀದರ್ ಜಿಲ್ಲೆ, ಕರ್ನಾಟಕ ಹಾಗೂ ದೇಶದಲ್ಲಿ ಅನೇಕ ಅಪರೂಪದ ಪಾರಂಪರಿಕ ತಾಣಗಳಿವೆ. ಅನೇಕ ಸ್ಮಾರಕಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ತಿಳಿಸಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಿ.ಬಿ.ದೇವರಾಜ ಮಾತನಾಡಿ,‘ವಿಶ್ವ ಪಾರಂಪರಿಕ ಸಪ್ತಾಹವನ್ನು 1983 ರಿಂದಲೂ ವಿಶ್ವದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ಪರಂಪರೆ, ಐತಿಹಾಸಿಕ ಸ್ಮಾರಕಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ’ ಎಂದು ತಿಳಿಸಿದರು.
ದೇಶದ ಸಂಸ್ಕೃತಿ, ಪರಂಪರೆ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಇಲ್ಲಿಯ ಕಲೆ, ಉಡುಗೆ, ತೊಡುಗೆ, ಭಾಷೆ, ಹಬ್ಬ, ಹರಿದಿನ, ಜಾತ್ರೆಗಳಿಗೆ ವಿಶೇಷ ಮಹತ್ವ ಇದೆ ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ ಕಿವುಡೆ ಮಾತನಾಡಿದರು. ಪ್ರಾಚಾರ್ಯ ಪ್ರೊ.ವಿಜಯಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಡಾ.ಶಶಿಧರ ಪಾಟೀಲ ನಿರೂಪಿಸಿದರು.
ಮೈಸೂರಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸಂಚಾಲಿತ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.