ADVERTISEMENT

ಯತ್ನಾಳ ಪುಢಾರಿಯಂತೆ ಮಾತನಾಡುವುದು ಶೋಭೆಯಲ್ಲ: ಬಸವರಾಜ ಧನ್ನೂರ

ಯತ್ನಾಳ ಹೇಳಿಕೆಗೆ ಖಂಡನೆ, ಕ್ಷಮೆಯಾಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:06 IST
Last Updated 26 ನವೆಂಬರ್ 2024, 13:06 IST
<div class="paragraphs"><p>ಬಸವರಾಜ ಧನ್ನೂರ</p></div>

ಬಸವರಾಜ ಧನ್ನೂರ

   

ಬೀದರ್‌: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಆಡಿರುವ ಮಾತುಗಳು ತೀವ್ರ ಖಂಡನಾರ್ಹನಾದದ್ದು. ಕೂಡಲೇ ಅವರು ಕ್ಷಮೆಯಾಚಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ವಕ್ಫ್‌ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು, ‘ರೈತರು ಜಾಗೃತರಾಗಿ ಹೋರಾಟಕ್ಕಿಳಿಯಬೇಕು. ಇಲ್ಲವಾದರೆ ಬಸವಣ್ಣನವರಂತೆ ಹೊಳ್ಯಾಗ ಜಿಗಿಬೇಕು. ಇಲ್ಲವಾದರೆ ಸಾಬ್ರಾಗಿ (ಮುಸ್ಲಿಂ)’ ಎಂದು ಹೇಳಿಕೆ ನೀಡಿದ್ದಾರೆ. ಯತ್ನಾಳ ಒಬ್ಬ ಪುಢಾರಿಯಂತೆ ಮಾತನಾಡಿರುವುದು ಅವರಿಗೆ ಶೋಭೆಯಲ್ಲ ಎಂದು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇತಿಹಾಸ ಅರಿತು ಮಾತನಾಡಬೇಕು. ಬಸವಣ್ಣನವರು ಮಾನವ ಕಲ್ಯಾಣಕ್ಕಾಗಿ ಕ್ರಾಂತಿ ಮಾಡಿದ್ದರು. ಅವರು ಹೊಳೆಯಲ್ಲಿ ಜಿಗಿದಿರಲಿಲ್ಲ. ಹಾಗೆ ಜಿಗಿದಿದ್ದರೆ ಯತ್ನಾಳ ಅವರ ತಂದೆ-ತಾಯಿ ಅವರಿಗೆ ಬಸವಣ್ಣನವರ ಹೆಸರು ಇಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಬಸವಣ್ಣ ಕ್ರಾಂತಿಯೋಗಿ, ಧೀರ ಪ್ರವಾದಿ. 12ನೇ ಶತಮಾನದಲ್ಲಿ ಶತ ಶತಮಾನಗಳ ಮೌಢ್ಯ, ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ, ಸಮಾನತೆ ಸಮಾಜ ನಿರ್ಮಿಸಿದ್ದರು. ಅವರು ಜನ್ಮವೆತ್ತ ಜಿಲ್ಲೆಯಲ್ಲೇ ಜನಿಸಿದ ಯತ್ನಾಳರು ಜೋಶ್‍ನಲ್ಲಿ ಬಸವಣ್ಣನವರ ಕುರಿತು ತಪ್ಪು ಸಂದೇಶ ಹೋಗುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

‘ಒಂದನ್ನಾಡಲು ಹೋಗಿ ಒಂಬತ್ತನ್ನಾಡುವ ಡಂಬಕರ ಮೆಚ್ಚ ನಮ್ಮ ಕೂಡಲಸಂಗಮದೇವ’ ಎಂದು ಬಸವಣ್ಣ ಹೇಳಿದ್ದಾರೆ. ಬಸವ ಧರ್ಮದವರೇ ಆದ ಯತ್ನಾಳ ಅವರಿಗೆ ನಾಲಿಗೆ ಹಿಡಿತ ತಪ್ಪಿದ, ಅರಿವಿಲ್ಲದ ಪುಢಾರಿಯಂತೆ ಮಾತನಾಡುವುದು ಶೋಭೆ ತರುವುದಿಲ್ಲ. ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿ, ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಕ್ಕೆ ಯತ್ನಾಳ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.