ADVERTISEMENT

ಬೀದರ್‌ | ಜುಲೈ 7ರಂದು ಜೈ ಜಗನ್ನಾಥ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:12 IST
Last Updated 4 ಜುಲೈ 2024, 15:12 IST
ಜೈ ಜಗನ್ನಾಥ ರಥೋತ್ಸವ ಮಹೋತ್ಸವ ಸಮಿತಿ ಪ್ರಮುಖರು ಬೀದರ್‌ನಲ್ಲಿ ಗುರುವಾರ ರಥಯಾತ್ರೆಯ ಕಿರು ಪೋಸ್ಟರ್‌, ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು
ಜೈ ಜಗನ್ನಾಥ ರಥೋತ್ಸವ ಮಹೋತ್ಸವ ಸಮಿತಿ ಪ್ರಮುಖರು ಬೀದರ್‌ನಲ್ಲಿ ಗುರುವಾರ ರಥಯಾತ್ರೆಯ ಕಿರು ಪೋಸ್ಟರ್‌, ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು   

ಬೀದರ್‌: ‘ಜುಲೈ 7ರಂದು ನಗರದಲ್ಲಿ ಜೈ ಜಗನ್ನಾಥ ರಥಯಾತ್ರೆ ನಡೆಯಲಿದ್ದು, ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ರಥೋತ್ಸವ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣನ್‌ ಸಾಳೆ ತಿಳಿಸಿದರು.

ಅಂದು ಬೆಳಿಗ್ಗೆ 11.30ಕ್ಕೆ ನಗರದ ರಾಂಪೂರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ಮಂದಿರದಿಂದ ರಥಯಾತ್ರೆ ಆರಂಭವಾಗಲಿದೆ. ಬಿ.ವಿ. ಭೂಮರಡ್ಡಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗವಾನ್‌ ಮಹಾವೀರ ವೃತ್ತ, ಭಗತ್‌ ಸಿಂಗ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಚಿಕ್ಕಪೇಟೆ ರಿಂಗ್‌ರೋಡ್‌ ನಿಂದ ಜಗನ್ನಾಥ ಮಂದಿರ ತಲುಪಲಿದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.‌

ರಥಯಾತ್ರೆ ಹಾದು ಹೋಗುವ ಮಾರ್ಗದುದ್ದಕ್ಕೂ ಪುಣೆಯ ಕಲಾವಿದರು ವಿಶೇಷ ರೀತಿಯಲ್ಲಿ ರಂಗೋಲಿ ಬಿಡಿಸುವರು. ಪ್ರಮುಖ ವೃತ್ತಗಳಲ್ಲಿ ನಗರದ ವ್ಯಾಪಾರಸ್ಥರು, ಭಕ್ತಾದಿಗಳು ಪಾನೀಯ ಮತ್ತು ಪ್ರಸಾದ ವಿತರಿಸುವರು. ರಥಯಾತ್ರೆಯಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಮೂರ್ತಿಗಳ ಮೆರವಣಿಗೆ ಮಾಡಲಾಗುವುದು. ಹೋದ ಸಲ ರಥ ಹೈದರಾಬಾದ್‌ ನಿಂದ ತರಿಸಲಾಗಿತ್ತು. ಈ ಸಲ ಬೀದರ್‌ನಲ್ಲಿಯೇ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ರಥ ಸಂಪೂರ್ಣ ಹೈಡ್ರಾಲಿಕ್‌ ವ್ಯವಸ್ಥೆ ಹೊಂದಿದೆ. ನಿಧಾನ ಗತಿಯಲ್ಲಿ ಒಂದೇ ವೇಗದಲ್ಲಿ ಚಲಿಸಲಿದೆ. ರಥಯಾತ್ರೆ ನಂತರ ಜೈ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಒಡಿಶಾದ ಪುರಿ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ರಥಯಾತ್ರೆ ನಡೆಯುತಿದ್ದು, ಅದರ ಅಂಗವಾಗಿ ನಗರದಲ್ಲಿ ರಥಯಾತ್ರೆ ನಡೆಸಲಾಗುತ್ತಿದೆ. ಜಿಲ್ಲೆ ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.

ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ಅಧ್ಯಕ್ಷ ನೀಲೇಶ ದೇಶಮುಖ ಮಾತನಾಡಿ, ಅಶ್ವಾರೂಢನಾದ ಜಗನ್ನಾಥನನ್ನು ಜಿಲ್ಲೆಯ ಜನತೆ ಕಣ್ತುಂಬ ನೋಡಿ, ರಥ ಎಳೆದು ಅವರ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. 

ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಕಾರ್ಯಕ್ರಮದ ಉಸ್ತುವಾರಿ ವೀರಶೆಟ್ಟಿ ಮಣಗೆ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್ ಕಾರ್ಯದರ್ಶಿ ಶಿವರಾಮ ಜೋಶಿ, ಕಾರ್ಯಕ್ರಮದ ಸಂಯೋಜಕ ರಾಜಕುಮಾರ ಅಳ್ಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.