ADVERTISEMENT

ಗ್ಯಾರಂಟಿ ಹಣ ಸಾಲದ ಖಾತೆಗೆ ಜಮಾ; ಕಬ್ಬಿನ ಹಣ ಅರ್ಧ ಬಾಕಿ

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧ್ಯಕ್ಷತೆಯ ಜನಸ್ಪಂದನ ಸಭೆಯಲ್ಲಿ ರೈತರ ಗೋಳು

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:06 IST
Last Updated 28 ಜೂನ್ 2024, 16:06 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಹವಾಲು ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್.ಚನ್ನಬಸವಣ್ಣ, ಉಪ ವಿಭಾಗಾಧಿಕಾರಿ ಪ್ರಕಾಶ ಕುದರಿ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಹವಾಲು ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್.ಚನ್ನಬಸವಣ್ಣ, ಉಪ ವಿಭಾಗಾಧಿಕಾರಿ ಪ್ರಕಾಶ ಕುದರಿ ಪಾಲ್ಗೊಂಡಿದ್ದರು   

ಬಸವಕಲ್ಯಾಣ: `ಅನ್ನಭಾಗ್ಯ, ವೃಧ್ಯಾಪ್ಯವೇತನ ಒಳಗೊಂಡು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ನೀಡುತ್ತಿರುವ ಹಣ ಬ್ಯಾಂಕ್‌ನವರು ಸಾಲದ ಖಾತೆಗೆ ಪಾವತಿಸಿಕೊಳ್ಳುತ್ತಿರುವ ಕಾರಣ ಬಡಜನರು, ರೈತರಿಗೆ ತೊಂದರೆ ಆಗುತ್ತಿದ್ದು ಇದನ್ನು ತಡೆಯಬೇಕು' ಎಂದು ರೈತ ಮುಖಂಡ ಚಂದ್ರಶೇಖರ ಜಮಖಂಡಿ ಆಗ್ರಹಿಸಿದ್ದಾರೆ.

ನಗರದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

`ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿರುವ ಹಣ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು. ಬೆಳೆ ನಾಶಪಡಿಸುತ್ತಿರುವ ಕಾಡು ಹಂದಿಗಳನ್ನು ನಿಯಂತ್ರಿಸಬೇಕು. ಬೆಳೆ ವಿಮೆಗಾಗಿ ನಡೆಸುವ ಸಮೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಬೇಕು' ಎಂದು ಸಹ ಅವರು ಒತ್ತಾಯಿಸಿದರು.

ADVERTISEMENT

`ತಾಲ್ಲೂಕಿನ ಅಟ್ಟೂರ್ ಕೆರೆ ಒಡೆದು ನೂರಾರು ಎಕರೆ ಜಮೀನಿನಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದ್ದು ಪರಿಹಾರ ಒದಗಿಸಬೇಕು' ಎಂದು ಗ್ರಾಮದ ರವಿ ಪಾಟೀಲ ಮನವಿ ಸಲ್ಲಿಸಿದರು.

`ಬಸವಕಲ್ಯಾಣ ನಗರದಲ್ಲಿ 14 ಶುದ್ಧ ನೀರಿನ ಘಟಕಗಳಿದ್ದು ಒಂದರಿಂದಲೂ ನೀರು ಸಿಗುತ್ತಿಲ್ಲ. ಆದ್ದರಿಂದ ಇವುಗಳನ್ನು ಆರಂಭಿಸಲು ಸಂಬಂಧಿತರಿಗೆ ಸೂಚಿಸಬೇಕು' ಎಂದು ಪ್ರಮುಖರಾದ ಆಕಾಶ ಖಂಡಾಳೆ, ಧನರಾಜ ರಾಜೋಳೆ ಕೇಳಿಕೊಂಡರು.

`ಜನಸ್ಪಂದನ ಸಭೆಯಲ್ಲಿ ಹಲವಾರು ಸಲ ಅರ್ಜಿ ಸಲ್ಲಿಸಿದರೂ ಸಂಬಂಧಿತ ಇಲಾಖೆಯವರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇನ್ನು ಮುಂದೆ ಹಾಗಾಗದಂತೆ ಕಾಳಜಿವಹಿಸಬೇಕು' ಎಂದು ಕಿಟ್ಟಾದ ಮಾರುತಿ ಫುಲೆ ವಿನಂತಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, `ಕಾನೂನಿನ ಪ್ರಕಾರ ಹಾಗೂ ಜಿಲ್ಲಾಡಳಿತದ ಆಧೀನದಲ್ಲಿನ ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು. ಅರಣ್ಯ ಪ್ರದೇಶದ ಜಮೀನು ಮಂಜೂರಿ ಮಾಡುವುದು ಅಥವಾ ಹಿಂದಕ್ಕೆ ಪಡೆಯುವುದು ಕಂದಾಯ ಇಲಾಖೆಗೆ ಒಳಪಟ್ಟಿದ್ದಲ್ಲ ಎಂಬುದು ಎಲ್ಲರಿಗೂ ತಿಳಿದಿರಲಿ. ಸಿ.ಫಾರಂ ನೀಡಿದ ಜಾಗದಲ್ಲಿ ಏನೇ ಮಾಡಬೇಕಾದರೂ ಕಂದಾಯ ಇಲಾಖೆಯವರ ಅನುಮತಿ ಪಡೆಯುವುದು ಕಡ್ಡಾಯ' ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್.ಚನ್ನಬಸವಣ್ಣ, ಉಪ ವಿಭಾಗಾಧಿಕಾರಿ ಪ್ರಕಾಶ ಕುದರಿ, ಡಿವೈಎಸ್ಪಿ ಜಿ.ಎಸ್.ನ್ಯಾಮಗೌಡ, ತಹಶೀಲ್ದಾರ್ ಶಾಂತಗೌಡ ಬಿರಾದಾರ, ನಗರಸಭೆ ಆಯುಕ್ತ ರಾಜೀವ ಬಣಕಾರ್, ಕೃಷಿ ಸಹಾಯಕ ನಿರ್ದೇಶಕ ಮಾರ್ತಂಡ ಮಚಕೂರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಸೀದಿ ಅತಿಕ್ರಮಣ ಸಮಸ್ಯೆ: ಸಭೆಗೆ ಆಗಮಿಸಿದ್ದ ಬಸವಕಲ್ಯಾಣದ ಕಮಾಲುದ್ದೀನ್ ನವಾಬ್ ಅವರ ಮಗ ಅಸರಾರ್ ಹುಸೇನ್ ಖಾನ್ ನವಾಬ್ ಅವರು ನಗರದ ಈಶ್ವರ ನಗರ ಓಣಿಯಲ್ಲಿನ ಮಸೀದಿ ತಮ್ಮದಾಗಿದ್ದು, ಅನ್ಯರು ಅತಿಕ್ರಮಿಸಿದ್ದಾರೆ ಎಂದು ದೂರು ನೀಡಿದರು.

ಸಭೆಯಲ್ಲಿ ಒಟ್ಟು 74 ಅಹವಾಲು ಸಲ್ಲಿಕೆಯಾಗಿವೆ. ಕೆಲವರು ಮೌಖಿಕವಾಗಿಯೂ ಸಮಸ್ಯೆ ತೋಡಿಕೊಂಡರು. ನಗರದ ನಿವಾಸಿಯೊಬ್ಬ ಕೆಲವರು ತಮ್ಮ ಹೆಸರಿನ ಪಡಿತರ ಚೀಟಿ ಬಳಕೆ ಮಾಡಿಕೊಂಡು ಯೋಜನೆಯ ಲಾಭ ಪಡೆದಿದ್ದಾರೆ ಎಂದು ದೂರು ಸಲ್ಲಿಸಿದರು.

ಮಹಿಳೆಯೊಬ್ಬಳು ತಮ್ಮ ಹೊಲವನ್ನು ಅನ್ಯರು ಅತಿಕ್ರಮಣ ಮಾಡಿಕೊಂಡಿದ್ದು ವಿಚಾರಿಸಿದರೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಎದುರು ಕಣ್ಣಿರೀಟ್ಟರು. ವೃದ್ಧರೊಬ್ಬರು ಒಬ್ಬ ಮಗನ ಜೊತೆಯಲ್ಲಿ ಸಭೆಗೆ ಬಂದು ಇನ್ನೊಬ್ಬ ಮಗ ಅನ್ನ ಹಾಕುತ್ತಿಲ್ಲ. ಹೊಲ ತಮ್ಮ ಹೆಸರಿಗೆ ಮಾಡಿಕೊಡುತ್ತಿಲ್ಲ ಎಂದು ದುಃಖಿತರಾಗಿ ಹೇಳಿದರು.

ಹೆಚ್ಚಿನವರು ವೈಯಕ್ತಿಕ ಸಮಸ್ಯೆಗಳ ಬಗ್ಗೆಯೇ ಅಹವಾಲು ಸಲ್ಲಿಸಿದರು. ವಿದ್ಯಾರ್ಥಿಯೊಬ್ಬ ಆಧಾರ್‌ ಕಾರ್ಡ್‌ನಲ್ಲಿನ ಜನ್ಮದಿನಾಂಕವನ್ನು ಒಂದು ಸಲ ತಿದ್ದಿದ್ದು ಮತ್ತೆ ತಪ್ಪಾಗಿರುವುದರಿಂದ ಮತ್ತೆ ತಿದ್ದಿ ಕೊಡಬೇಕು ಎಂದು ಆಗ್ರಹಿಸಿದ. ಆಧಾರ್ ಕಾರ್ಡ್‌ ದಲ್ಲಿನ ಜನ್ಮದಿನಾಂಕ ಒಂದು ಸಲ ಮಾತ್ರ ತಿದ್ದಲು ಅವಕಾಶವಿದೆ. ಆದರೂ ಈ ಬಗ್ಗೆ ಸಂಬಂಧಿತರೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಹವಾಲು ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್.ಚನ್ನಬಸವಣ್ಣ ಉಪ ವಿಭಾಗಾಧಿಕಾರಿ ಪ್ರಕಾಶ ಕುದರಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.