ADVERTISEMENT

ಬಸವಕಲ್ಯಾಣ ಗೆದ್ದು ರಾಜ್ಯಕ್ಕೆ ಸಂದೇಶ ರವಾನೆ: ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ

ಉಪ ಚುನಾವಣೆಗೆ ಅಭ್ಯರ್ಥಿ ನಾಮಪತ್ರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 2:20 IST
Last Updated 26 ಮಾರ್ಚ್ 2021, 2:20 IST
ಬಸವಕಲ್ಯಾಣದಲ್ಲಿ ಗುರುವಾರ ಉಪ ಚುನಾವಣೆಯ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಜತೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಚುನಾವಣಾಧಿಕಾರಗಳ ಕಚೇರಿಗೆ ಬಂದರು
ಬಸವಕಲ್ಯಾಣದಲ್ಲಿ ಗುರುವಾರ ಉಪ ಚುನಾವಣೆಯ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಜತೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಚುನಾವಣಾಧಿಕಾರಗಳ ಕಚೇರಿಗೆ ಬಂದರು   

ಬಸವಕಲ್ಯಾಣ: ‘ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ಕಾರ್ಯಕ್ಷೇತ್ರವಾದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ನಮ್ಮ ಪಕ್ಷ ಬಲಿಷ್ಠವಾಗಿದೆ ಎಂಬ ಸಂದೇಶ ರಾಜ್ಯಕ್ಕೆ ರವಾನಿಸುವ ಉದ್ದೇಶವಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಈ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈ ಕ್ಷೇತ್ರದಲ್ಲಿ ಬಿಜೆಪಿ ಒಂದು ಸಲ ಮಾತ್ರ ಗೆದ್ದಿದ್ದು, 7 ಸಲ ಜನತಾದಳ ಹಾಗೂ ಜಾತ್ಯತೀತ ಜನತಾದಳದ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಈ ಭದ್ರಕೋಟೆ ಕಾಯ್ದುಕೊಳ್ಳುವ ಉದ್ದೇಶದಿಂದ ಪಕ್ಷ ಈ ಕಡೆ ಹೆಚ್ಚಿನ ಗಮನ ನೀಡಲಿದೆ. ಎಲ್ಲ ಕಡೆ ಶಕ್ತಿ ವ್ಯಯಿಸುವುದಕ್ಕಿಂತ ಒಂದೇ ಕಡೆ ಎಲ್ಲ ಶಕ್ತಿ ಕೇಂದ್ರೀಕರಿಸಿ ಗೆದ್ದು ತೋರಿಸುವ ವಿಚಾರದಿಂದ ಮಸ್ಕಿ, ಬೆಳಗಾವಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ’ ಎಂದರು.

ADVERTISEMENT

‘ನಾನು ಇಲ್ಲಿ 15 ದಿನಗಳವರೆಗೆ ಠಿಕಾಣಿ ಹೂಡಿ ಪಕ್ಷದ ಅಭ್ಯರ್ಥಿ ಯಸ್ರಬ್ ಅಲಿ ಅವರನ್ನು ಗೆಲ್ಲಿಸುತ್ತೇನೆ. 2006 ಹಾಗೂ 2014ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬೀದರ್ ಜಿಲ್ಲೆ ಹಾಗೂ ಬಸವಕಲ್ಯಾಣಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ. ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಜಿಲ್ಲೆಯಲ್ಲಿ ಮೂರು ಸಲ ಗ್ರಾಮ ವಾಸ್ತವ್ಯ ನಡೆಸಿದ್ದು, ಬಸವಕಲ್ಯಾಣ ತಾಲ್ಲೂಕಿನ ಕಟ್ಟಕಡೆಯ ಗ್ರಾಮ ಹಾಗೂ ಸಂಪೂರ್ಣವಾಗಿ ಮರಾಠಿಗರು ವಾಸಿಸುವ ಉಜಳಂಬದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೇನೆ. ಈ ಕಾರಣ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಹಾಗೂ ಬಿಜೆಪಿಗೆ ತಕ್ಕ ಪಾಠ ಕಲಿಸಿ ಜೆಡಿಎಸ್ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಶಾಸಕರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ್ ನಾಡಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರೆ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ನಗರ ಘಟಕದ ಅಧ್ಯಕ್ಷ ಸುಶೀಲ ಆವಸ್ಥಿ, ಪ್ರವಕ್ತಾ ಆಕಾಶ ಖಂಡಾಳೆ, ತುಕಾರಾಮ ಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ, ರಾಜೀವ ಸುಗೂರೆ, ಸತೀಶ ರಾಂಪುರೆ, ಶಿವಪುತ್ರ ಮಾಳಗೆ ಉಪಸ್ಥಿತರಿದ್ದರು.

ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ

ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರೊಂದಿಗೆ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದ ನಂತರ ಅನುಭವ ಮಂಟಪ ಹಾಗೂ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶಿವಾಜಿ ಪಾರ್ಕ್, ಅಂಬೇಡ್ಕರ್ ವೃತ್ತ, ರಾಜಾ ಬಾಗಸವಾರ ದರ್ಗಾ, ಬಡೇಶಾ ದರ್ಗಾಗಳಿಗೂ ಭೇಟಿ ನೀಡಿದರು.

ಅವರು ರಾಷ್ಟ್ರೀಯ ಹೆದ್ದಾರಿ ಮೂಲಕ ಇಲ್ಲಿಗೆ ಬಂದಾಗ ನಗರದ ಪ್ರವೇಶ ದ್ವಾರದ ಹತ್ತಿರ ಸಸ್ತಾಪುರ ಬಂಗ್ಲಾ ಬಳಿ ಸ್ವಾಗತಿಸಿಕೊಂಡು ಬೈಕ್ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ಕರೆತರಲಾಯಿತು. ಸಂಜೆ ಕೋಟೆಯಿಂದ ಸಭಾ ಸ್ಥಳವಾದ ಅಕ್ಕಮಹಾದೇವಿ ಕಾಲೇಜು ಆವರಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅಭ್ಯರ್ಥಿಪರ ಪ್ರಚಾರ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.