ಕಮಲನಗರ: ತಾಲ್ಲೂಕಿನ ಕೊರೆಕಲ ಗ್ರಾಮ ಪಂಚಾಯತ ವ್ಯಾಪ್ತಿಯ ಲಕ್ಷ್ಮಿನಗರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಕುಡಿಯುವ ನೀರಿನಲ್ಲಿ ಪ್ರತ್ಯಕ್ಷವಾದ ಕಪ್ಪೆ ಮರಿಗಳನ್ನು ಕಂಡು ಜನ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಪಿಡಿಒ ಶ್ರೀನಿವಾಸ ದೇಶಪಾಂಡೆ ಜನರಿಗೆ ಉಡಾಫೆ ಉತ್ತರ ನೀಡಿದರು.
ಸಾಮಾಜಿಕ ಹೋರಾಟಗಾರ ರತ್ನದೀಪ ಕಸ್ತೂರೆ ಮತ್ತು ಸುನಿಲ್ ಮಿತ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಮೇಲಧಿಖಾರಿಗಳು ಸ್ಥಳಕ್ಕೆ ಬರುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟುಹಿಡದಿದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಕುಡಿಯುವ ನೀರನ್ನು ಪರಿಶೀಲಿಸಿದರು. ಬಳಿಕ ಕೋರೆಕಲ್ ಪಿಡಿಒ ಶ್ರೀನಿವಾಸ ದೇಶಪಾಂಡೆ ಅವರನ್ನು ತರಾಟೆ ತೆಗೆದುಕೊಂಡರು.
ಬಳಿಕ ಲಕ್ಷ್ಮಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡು, ತಕ್ಷಣ ಈ ನೀರಿ ಖಾಲಿ ಮಾಡಿ ಶುದ್ಧ ನೀರು ಬರುವಂತೆ ಮಾಡಬೇಕು. ಚರಂಡಿಗಳನ್ನು ಏಕೆ ಸ್ವಚ್ಛ ಮಾಡಿಲ್ಲ. ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ನಳಗಳು ಒಡೆದಿವೆ. ನಿಂತ ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುತ್ತಿದೆ. ಆದರಿಂದಲೇ ಕಪ್ಪೆ ಮರಿಗಳು ಬರುತ್ತಿವೆ. ಹೀಗೆ ಇದ್ದರೆ ಹಾವುಗಳೂ ಕುಡಿಯುವ ನೀರಿನಲ್ಲಿ ಬರುವುದು ಕಷ್ಟವೇನ್ನಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ನಾನು ಮತ್ತೆ ಗ್ರಾಮಕ್ಕೆ ಭೇಟಿ ನೀಡಿದಾಗ ಎಲ್ಲವೂ ಸ್ವಚ್ಛವಾಗಿರಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಚ್ಚರಿಸಿದರು.
ಮುಖಂಡ ರತ್ನದೀಪ ಕಸ್ತೂರೆ ಮಾತನಾಡಿ, ‘ಕುಡಿಯುವ ನೀರಿನಲ್ಲಿ ಕಪ್ಪೆಮರಿಗಳು ಬಂದಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನೀರು ನಿಂತು ದುರ್ವಾಸನೆ ಹರಡಿದೆ. ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಅವ್ಯವಸ್ಥೆಗೆ ನೇರ ಹೊಣೆಯಾದ ಪಿಡಿಒ ಅವರನ್ನು ಅಮಾನತು ಮಡಬೇಕು’ ಎಂದು ತಹಶೀಲ್ದಾರ್‌ಗೆ ಮನವಿ ಮಾಡಿದರು.
ಸ್ಥಳಕ್ಕೆ ಕಂದಾಯ ಕಂದಾಯ ನೀರಕ್ಷಕ ಶಶಿವಲಿಂಗ, ಕಮಲನಗರ ಸಿಪಿಐ ಅಮರಪ್ಪ ಶಿವಬಲ್, ಠಾಣಾಕುಶನೂರ ಎಸ್‌ಐ ಚಂದ್ರಕಾಂತ ಸ್ವಾಮಿ, ಎಎಸ್ಐ ಅನೀಲಕುಮಾರ, ಪೊಲೀಸ್ ಸಿಬ್ಬಂದಿ ಉಮಕಾಂತ, ಕಮಲನಗರ ಮಹಾದೇವ ಭೇಟಿ ನೀಡಿದರು.
ಪ್ರಕಾಶ ಕಾಂಬಳೆ, ಅಭಿಷೇಕ ಮಾನಕರೆ, ಗ್ರಾಮಸ್ಥರಾದ ಅನಿಲ ಸಾಬರೆ, ಕೆರಬಾ ಮಾನೆ, ಶೇಶೀಕಲಾ, ವಿದ್ಯಾವತಿ,
ಪದ್ಮಿನಿಬಾಯಿ, ಶಾಂತಾಬಾಯಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.