ADVERTISEMENT

ಬೀದರ್‌: ‘ಸಮಾಜ ಸುಧಾರಕ ಕನಕದಾಸರು’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 7:17 IST
Last Updated 19 ನವೆಂಬರ್ 2024, 7:17 IST
‘ಸಮಾಜ ಸುಧಾರಕ ಕನಕದಾಸರು’ ಪುಸ್ತಕ ಬರೆದ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಅವರು ಬೀದರ್‌ನಲ್ಲಿ ಸೋಮವಾರ ಸನ್ಮಾನಿಸಿದರು
‘ಸಮಾಜ ಸುಧಾರಕ ಕನಕದಾಸರು’ ಪುಸ್ತಕ ಬರೆದ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಅವರು ಬೀದರ್‌ನಲ್ಲಿ ಸೋಮವಾರ ಸನ್ಮಾನಿಸಿದರು   

ಬೀದರ್‌: ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಬರೆದಿರುವ ‘ಸಮಾಜ ಸುಧಾರಕ ಕನಕದಾಸರು’ ಪುಸ್ತಕವನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ಅವರು ನಗರದಲ್ಲಿ ಸೋಮವಾರ ಬಿಡುಗಡೆಗೊಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಆನಂತರ ಪುಸ್ತಕ ಬಿಡುಗಡೆಗೊಳಿಸಿದರು. 

‘ಭಕ್ತ ಶ್ರೇಷ್ಠ ಕನಕದಾಸರು ಕರ್ನಾಟಕದ ಮಹಾನ್ ಚೇತನ. ನೂರಾರು ಕೀರ್ತನೆಗಳನ್ನು ರಚಿಸಿ ಸಂಗೀತ, ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮೋಹನ ತರಂಗಿಣಿ, ನಳಚರಿತೆ, ಹರಿಭಕ್ತಿಸಾರ ಮತ್ತು ರಾಮಧಾನ್ಯ ಚರಿತೆ ಎಂಬ ಕಾವ್ಯಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ ಎಂದು ಡಾ. ಗಿರೀಶ ಬದೋಲೆ ಹೇಳಿದರು.

ADVERTISEMENT

ಕೀರ್ತನೆಗಳ ಮೂಲಕ ಸಮಾಜದಲ್ಲಿ ರೂಢಿಯಲ್ಲಿದ್ದ ಜಾತಿಯತೆ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿ ಉಂಟು ಮಾಡಿದ್ದಾರೆ. ಕನಕದಾಸರಂಥ ಮೇರುವ್ಯಕ್ತಿಯ ಸಾಧನೆಯನ್ನು ಮುಕ್ಕಣ್ಣ ಕರಿಗಾರ ಅವರು ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಕೆಲಸದ ನಡುವೆಯೂ ಮುಕ್ಕಣ್ಣ ಕರಿಗಾರ ಅವರು ಇದುವರೆಗೆ 48 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ‘ಸಮಾಜ ಸುಧಾರಕ ಕನಕದಾಸರು’ ಅವರ 49ನೆಯ ಕೃತಿಯಾಗಿದೆ. ಇನ್ನೂ ಹತ್ತಾರು ಕೃತಿಗಳು ಅವರಿಂದ ಹೊರಬರಲಿ ಎಂದು ಹಾರೈಸಿದರು.

ಎನ್.ಆರ್.ಎಲ್.ಎಮ್. ಯೋಜನೆಯ ಜಿಲ್ಲಾ ಕಾರ‍್ಯಕ್ರಮ ವ್ಯವಸ್ಥಾಪಕ ನಾಗೇಂದ್ರ ಧರಿ ಅವರು ಕನಕದಾಸರ ವ್ಯಕ್ತಿ ಚಿತ್ರಣವನ್ನು ಸುಂದರವಾಗಿ ತೆರೆದಿಟ್ಟರು. ಜಿಪಂ ಅಭಿವೃದ್ಧಿ ವಿಭಾಗದ ಸೂಪರಿಟೆಂಡೆಂಟ್‌ ಮುಹಮ್ಮದ್ ಬಶೀರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವರೂಪಾರಾಣಿ ಪ್ರಾರ್ಥನೆ ಮಾಡಿದರು. ಪ್ರವೀಣ ಸ್ವಾಮಿ ನಿರೂಪಿಸಿದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ,ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಪಂಚಾಯಿತಿ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ‍್ಯಪಾಲಕ ಎಂಜಿನಿಯರ್‌ ಶಿವಾಜಿ ಡೋಣಿ, ಸಹಾಯಕ ಕಾರ‍್ಯದರ್ಶಿಗಳಾದ ಬೀರೇಂದ್ರ ಸಿಂಗ್, ಜಯಪ್ರಕಾಶ ಚವಾಣ್‌ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.