ADVERTISEMENT

ಬೀದರ್‌ ಜಿಲ್ಲೆಯಲ್ಲಿ ಶೇ 80 ಕನ್ನಡ ಅನುಷ್ಠಾನ– ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 10:49 IST
Last Updated 15 ಜುಲೈ 2024, 10:49 IST
<div class="paragraphs"><p>ಬೀದರ್‌ನ ಜಿಲ್ಲಾಡಳಿತ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದರು</p></div>

ಬೀದರ್‌ನ ಜಿಲ್ಲಾಡಳಿತ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದರು

   

ಪ್ರಜಾವಾಣಿ ಚಿತ್ರ

ಬೀದರ್‌: ‘ಬೀದರ್‌ ಜಿಲ್ಲೆಯಲ್ಲಿ ಶೇ 80ರಷ್ಟು ಕನ್ನಡ ಅನುಷ್ಠಾನಗೊಂಡಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ADVERTISEMENT

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಕನ್ನಡ ಅನುಷ್ಠಾನ ಕುರಿತ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೆಲವು ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಕನ್ನಡ ಅನುಷ್ಠಾನಗೊಂಡಿದೆ. ಅವುಗಳಿಗೆ ಹೋಲಿಸಿದರೆ ಬೀದರ್‌ ಜಿಲ್ಲೆಯಲ್ಲಿ ಉತ್ತಮ ಪ್ರಗತಿಯಾಗಿದೆ. 2021ರಲ್ಲಿ ಕೊನೆಯ ಬಾರಿಗೆ ಜಿಲ್ಲೆಯಲ್ಲಿ ಪ್ರಾಧಿಕಾರದ ಅಂದಿನ ಅಧ್ಯಕ್ಷ ಟಿ.ಎಸ್‌. ನಾಗಾಭರಣ, ಕಾರ್ಯದರ್ಶಿ ಮುರಳಿಧರನ್‌ ಅವರು ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದರು. ಕೋವಿಡ್‌, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸೇರಿದಂತೆ ಇನ್ನಿತರ ಕಾರಣಗಳಿಂದ ಆನಂತರ ಸಭೆ ನಡೆದಿರಲಿಲ್ಲ. 2021ರ ಸಭೆಯ ನಡಾವಳಿಗಳನ್ನು ಪರಿಶೀಲಿಸಿದಾಗ ಜಿಲ್ಲೆಯಲ್ಲಿ ಶೇ 80ರಷ್ಟು ಪ್ರಗತಿಯಾಗಿರುವುದು ಗಮನಕ್ಕೆ ಬಂದಿದೆ. ಇನ್ನುಳಿದ ಶೇ 20ರಷ್ಟು ಅನುಷ್ಠಾನಕ್ಕೆ ಬರಬೇಕಿದೆ ಎಂದರು.

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆಯಲ್ಲೂ ಪ್ರಗತಿಯಾಗಿದೆ. ಆದರೆ, ನೂರಕ್ಕೆ ನೂರು ಆಗಿಲ್ಲ. ಕೆಲವು ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅನುಷ್ಠಾನ ಸಾಧ್ಯ. ಏಕೆಂದರೆ ಎಲ್ಲದರ ಸಂರಚನೆ ಒಂದೇ ರೀತಿ ಇರುವುದಿಲ್ಲ ಎಂದು ಹೇಳಿದರು.

ಭಾಲ್ಕಿ ಮಠದಲ್ಲಿ ಚನ್ನಬಸವ ಪಟ್ಟದ್ದೇವರು ತೆಲುಗು, ಮರಾಠಿ ಭಾಷೆಗಳ ಪ್ರಭಾವದ ನಡುವೆ ಗಡಿಯಲ್ಲಿ ಕನ್ನಡವನ್ನು ಹೇಗೆ ಬೆಳೆಸಿದರು ಎನ್ನುವುದನ್ನು ಅಲ್ಲಿಗೆ ಭೇಟಿ ಕೊಟ್ಟು ತಿಳಿದುಕೊಂಡಿದ್ದೇನೆ. ಜಿಲ್ಲೆಯ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಚರ್ಚಿಸಿ ವಾಸ್ತವ ಪರಿಸ್ಥಿತಿ ಅರಿತುಕೊಳ್ಳುವ ಕೆಲಸ ಮಾಡಿದ್ದೇನೆ. ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದ ಸಮಸ್ಯೆ ಬೀದರ್‌ ಜಿಲ್ಲೆಗೆ ಸೀಮಿತವಾಗಿಲ್ಲ. ಇಡೀ ರಾಜ್ಯದ ಸಮಸ್ಯೆ ಇದು. ಕನ್ನಡದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ, ಶಿಕ್ಷಕರಿಲ್ಲ. ಅಧಿಕಾರಿಗಳು ಅಲ್ಲಿಗೆ ಭೇಟಿ ಕೊಡುವುದಿಲ್ಲ. ಇದು ರಾಜ್ಯದ ಎಲ್ಲ ಕಡೆಗಳಲ್ಲಿ ಇದೆ ಎಂದು ತಿಳಿಸಿದರು.

ಗಡಿ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ. ಈ ಕಡೆ, ಆ ಕಡೆ ಇಲ್ಲದೆ ಕೆಲವರು ತಬ್ಬಲಿಗಳಾಗಿದ್ದಾರೆ. ಏಕೀಕರಣದ ನಂತರ ಜನರು ಅವರದಲ್ಲದ ತಪ್ಪಿಗೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಗಡಿಯಲ್ಲಿ ವಾಸಿಸುತ್ತಿರುವವರಿಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಟ್ಟಿರುವ ಸಂವಿಧಾನದ ಕಲಂ 371(ಜೆ) ವಿಶೇಷ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಗಡಿ ಜಿಲ್ಲೆ ಬೀದರ್‌ನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ಗಡಿ ಭಾಗದಲ್ಲಿ ವಾಸಿಸುತ್ತಿರುವವರಿಗೆ ಅದರ ಪ್ರಯೋಜನವಾಗಿಲ್ಲ. ಸರ್ಕಾರ ಅವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದರು.

ಕನ್ನಡದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಷ್ಟು ಶಕ್ತಿ ಕನ್ನಡ ಪ್ರಾಧಿಕಾರಕ್ಕಿಲ್ಲ. ಆದರೆ, ನಮ್ಮ ಇತಿಮಿತಿಯಲ್ಲಿ ಏನಾಗುತ್ತದೆಯೋ ಅದನ್ನು ಮಾಡುತ್ತೇವೆ. ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಜರಿದ್ದರು.

‘ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿ ಅಸಾಧ್ಯ’

‘ಸರೋಜಿನಿ ಮಹಿಷಿ ವರದಿ ಬಂದು 50 ವರ್ಷಗಳಾಗಿವೆ. ಈಗ ಸಾಕಷ್ಟು ಬದಲಾಗಿದೆ. ಅದರಲ್ಲಿರುವ ಬಹುತೇಕ ಅಂಶಗಳನ್ನು ಈಗ ಜಾರಿಗೆ ತರಲು ಸಾಧ್ಯವಿಲ್ಲ. ನನ್ನ ಪ್ರಕಾರ, 14 ಅಂಶಗಳು ಮುಖ್ಯವಾದವು’ ಎಂದು ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಮಹಿಷಿ ವರದಿ ಪ್ರಕಾರ, ‘ಸಿ’ ಮತ್ತು ‘ಡಿ’ ಗ್ರುಪ್‌ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಿಡಬೇಕೆಂದು ಹೇಳುತ್ತದೆ. ಆದರೆ, ನ್ಯಾಯಾಲಯದಲ್ಲಿ ಇದು ನಿಲ್ಲುವುದಿಲ್ಲ. ಪ್ರತಿಯೊಬ್ಬ ಭಾರತೀಯ ಯಾವುದೇ ರಾಜ್ಯದಲ್ಲಿ ಕೆಲಸ ಮಾಡುವ ಹಕ್ಕು ಹೊಂದಿದ್ದಾನೆ. ಅವನನ್ನು ತಡೆಯಲು ಆಗುವುದಿಲ್ಲ ಎಂದು ಹೇಳಿದರು.

ಶೇ 100ರ ಬದಲು ಶೇ 80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು. ಅನ್ಯ ಭಾಷಿಕರಿಗೆ ಶೇ 20ರಷ್ಟು ಮೀಸಲಿಡಬೇಕು. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಸರ್ಕಾರ ಕನ್ನಡ ಭಾಷೆಯ ಕುರಿತಂತೆ ಗಂಭೀರವಾಗದಿದ್ದರೆ ಬರುವ ದಿನಗಳಲ್ಲಿ ಕನ್ನಡ ಆಡು ಭಾಷೆ ಆಗಿ ಉಳಿಯಬಹುದು.
– ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.