ADVERTISEMENT

ಗಡಿಯಲ್ಲಿ ಕನ್ನಡ ಭಾಷೆಗೆ ಕುತ್ತು: ಹೊರಗೆ ಕನ್ನಡ ಬೋರ್ಡ್, ಒಳಗೆ ಇಂಗ್ಲಿಷ್ ಪಾಠ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 6:06 IST
Last Updated 2 ನವೆಂಬರ್ 2024, 6:06 IST
ಕನ್ನಡ ಬಾವುಟ
ಕನ್ನಡ ಬಾವುಟ   

ಔರಾದ್: ನಿಜಾಮ ಆಡಳಿತದಲ್ಲಿ ಹೊರಗೆ ಉರ್ದು ಭಾಷೆ ನಾಮಫಲಕ ಹಾಕಿ ಒಳಗೆ ಕನ್ನಡ ಕಲಿಸಿದ ಈ ನೆಲದಲ್ಲಿ ಈಗ ಹೊರಗೆ ಕನ್ನಡ ನಾಮಫಲಕ ಹಾಕಿ ಒಳಗೆ ಇಂಗ್ಲಿಷ್ ಕಲಿಸುವ ಶಾಲೆಗಳು ತಲೆ ಎತ್ತಿರುವುದು ಗಡಿ ಭಾಗದ ಕನ್ನಡಿಗರಲ್ಲಿ ಕಳವಳಕ್ಕೆ ಕಾರಣವಾಗಿದೆ.

ಪಾಲಕರ ಇಂಗ್ಲಿಷ್ ವ್ಯಾಮೋಹ ಹಾಗೂ ಸರ್ಕಾರದ ಕೆಲ ಕಠಿಣ ನಿಯಮಾವಳಿಯಿಂದ ಗಡಿ ಭಾಗದ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಶ್ರೀಮಂತರು ಹಾಗೂ ಉಳ್ಳವರ ಖಾಸಗಿ ಕನ್ನಡ ಶಾಲೆಗಳು ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತನೆಯಾದರೆ ಕನ್ನಡ ಉಳಿಸಿ ಬೆಳೆಸಬೇಕೆಂಬ ಉದ್ದೇಶ ಹೊಂದಿರುವ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ ಎಂದು ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಶೆಟಕಾರ್ ತಿಳಿಸಿದ್ದಾರೆ.

‘ಸರ್ಕಾರ ಕೂಡ ಕನ್ನಡ ನಿರ್ಲಕ್ಷಿಸಿ ಇಂಗ್ಲಿಷ್ ಶಾಲೆ ಪೋಷಿಸುತ್ತಿದೆ. ತಾಲ್ಲೂಕು ಸೇರಿದಂತೆ ವಿವಿಧೆಡೆ ಕನ್ನಡ ಶಾಲೆ ನಾಮಫಲಕ ಹಾಕಿ (ಕನ್ನಡ ಶಾಲೆ ಎಂದು ಅನುಮತಿ ಪಡೆದು) ಒಳಗೆ ಇಂಗ್ಲಿಷ್ ಮಾಧ್ಯಮ ಕಲಿಸಲಾಗುತ್ತಿದೆ. ಆದರೂ ಏನು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಗಡಿ ಭಾಗದಲ್ಲಿ ಮರಾಠಿ ಭಾಷಿಕರ ಸಂಖ್ಯೆಯೂ ಜಾಸ್ತಿ ಇದೆ. ಇವರೆಲ್ಲರೂ ಕನ್ನಡ ಕಲಿಯಲು ಉತ್ಸುಕರಾಗಿದ್ದಾರೆ. ಆದರೆ ಸಾಕಷ್ಟು ಊರುಗಳಲ್ಲಿ ಕನ್ನಡ ಶಾಲೆಗಳಿಲ್ಲ. ತಾಲ್ಲೂಕಿನ 13ಕ್ಕೂ ಹೆಚ್ಚು ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸುವ ಖಾಯಂ ಶಿಕ್ಷಕರಿಲ್ಲದಿರುವುದು ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ ಎಂದು ಇಲ್ಲಿಯ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಒಟ್ಟು 329 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 212ಕ್ಕೂ ಜಾಸ್ತಿ ಶಿಕ್ಷಕರ ಹುದ್ದೆ ಖಾಲಿ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಪಾಲಕರು ಖಾಸಗಿ ಶಾಲೆಗಳ ಕಡೆ ಮುಖ ಮಾಡುವಂತಾಗಿದೆ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ತಿಳಿಸಿದ್ದಾರೆ.

ತಾಲ್ಲೂಕಿನ ಚೊಂಡಿಮುಖೇಡ್ ಸೇರಿದಂತೆ ಗಡಿ ಭಾಗದ ಅನೇಕ ಗ್ರಾಮಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡರೂ ಅವರು ಈಗಲೂ ಕನ್ನಡಿಗರಾಗಿಯೇ ಉಳಿದಿದ್ದಾರೆ. ಆದರೆ ನಮ್ಮ ಮಕ್ಕಳು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾಗಿದ್ದಾರೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.