ಬೀದರ್: ಜಿಲ್ಲೆಯ ಅಂಧ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
ತನ್ನ ಸುಮಧುರ ಕಂಠದಿಂದ ಅಸಂಖ್ಯ ಜನರ ಮನಗೆದ್ದಿರುವ ಸಂಗೀತ ಕಲಾವಿದ ನರಸಿಂಹಲು ಅವರನ್ನು ರಾಜ್ಯ ಸರ್ಕಾರವು ಪ್ರಶಸ್ತಿಗೆ ಆಯ್ಕೆ ಮಾಡಿ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದೆ.
ಜಾನಪದ, ತತ್ವಪದ, ಹಂತಿ ಪದ, ಮೊಹರಂ ಪದ, ಸುಗಮ ಸಂಗೀತದ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಾಡಿನ ಉದ್ದಗಲಕ್ಕೂ ನರಸಿಂಹಲು ನೀಡಿದ್ದಾರೆ. ಹುಟ್ಟಿನಿಂದಲೇ ತನ್ನೆರೆಡು ಕಣ್ಣು ಕಳೆದುಕೊಂಡಿರುವ ನರಸಿಂಹಲು ಕಳೆದ ಮೂರು ದಶಕಗಳಿಂದ ಸಂಗೀತದ ಮೂಲಕ ಬೆಳಕು ಹರಿಸುವ ಕೆಲಸ ಮಾಡಿದ್ದಾರೆ.
1963ರ ಜೂನ್ 15ರಂದು ಬೀದರ್ ತಾಲ್ಲೂಕಿನ ಸುಲ್ತಾನಪೂರದಲ್ಲಿ ಹುಟ್ಟಿರುವ ನರಸಿಂಹಲು ಅವರು ಓದಿ, ಬೆಳೆದದ್ದೆಲ್ಲ ಮೈಸೂರಿನಲ್ಲಿ. ಸದ್ಯ ಚಿಟ್ಟಾ ಸಮೀಪದ ಕೊಂಡೆ ಕಾಲೊನಿಯಲ್ಲಿ ನೆಲೆಸಿದ್ದಾರೆ. ಮೈಸೂರಿನಲ್ಲಿಯೇ ಮೆಟ್ರಿಕ್, ಪಿಯು ಓದು ಮುಗಿಸಿದರು. ಆನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಗೀತ ಪದವಿ ಪಡೆದರು. ಬಳಿಕ ಶಾಸ್ತ್ರೀಯ ಸಂಗೀತ ಕಲಿತರು. ಒಂದೊಂದೆ ಕಾರ್ಯಕ್ರಮಗಳ ಮೂಲಕ ಎಲ್ಲೆಡೆ ಹೆಸರು ಮಾಡಿದರು. ಆನಂತರ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಮೈಸೂರು ದಸರಾ, ಬೀದರ್ ಉತ್ಸವ, ಕಲ್ಯಾಣ ಕರ್ನಾಟಕ ಉತ್ಸವ ಸೇರಿದಂತೆ ಹಲವೆಡೆ ಸಂಗೀತದ ಕಂಪು ಹರಿಸಿದ್ದಾರೆ.
ಇವರ ಸಾಧನೆಗೆ ಪಂಡಿತ್ ಪುಟ್ಟರಾಜ ಗವಾಯಿ ಪ್ರಶಸ್ತಿ, ಜಿಲ್ಲಾಡಳಿತದ ರಾಜ್ಯೋತ್ಸವ ಪ್ರಶಸ್ತಿ, ವಿಶೇಷ ಚೇತನ ಪ್ರಶಸ್ತಿ, ಪಂಡಿತ್ ಪಂಚಾಕ್ಷರಿ ಗವಾಯಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿವೆ.
ಜೀವನದಲ್ಲಿ ಇದುವರೆಗೆ ಕಷ್ಟಪಟ್ಟು ಸಂಗೀತ ಕ್ಷೇತ್ರಕ್ಕೆ ದುಡಿದಿರುವುದಕ್ಕೆ ಸಾರ್ಥಕವೆನಿಸುತ್ತಿದೆ. ಸಂಗೀತವೇ ನನ್ನ ಜೀವನ ಉಸಿರು. ನನ್ನನ್ನು ನನ್ನ ಕಲೆಯ ಮೂಲಕವೇ ಜನ ಗುರುತಿಸಿ ಬೆಳೆಸಿದ್ದಾರೆ. ಈಗ ಸರ್ಕಾರವು ಗುರುತಿಸಿದೆ. ಇದರಿಂದಲೇ ನನ್ನ ಜೀವನ ನಡೆಯುತ್ತಿದೆ. ನನ್ನ ಮಕ್ಕಳು ಓದುತ್ತಿದ್ದಾರೆ ಎಂದು ನರಸಿಂಹಲು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಬಸವರಾಜ ಎಸ್. ಪ್ರಭಾ
ಭಾಲ್ಕಿ: ಸಮಾಜ ಸೇವೆ, ಹೋರಾಟದ ಮೂಲಕವೇ ಸಮಾಜದಲ್ಲಿ ಮನೆ ಮಾತಾಗಿರುವ ಹೀರಾಚಂದ್ ವಾಗ್ಮಾರೆ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಕೆ ಮಾಡಲಾಗಿದೆ.
95 ವರ್ಷ ವಯಸ್ಸಿನ ಹೀರಾಚಂದ್ ವಾಗ್ಮಾರೆ ಅವರು ಭಾಲ್ಕಿಯಲ್ಲಿ ಹುಟ್ಟಿ ಬೆಳೆದರು. ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡಿದ್ದಾರೆ. ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ, ಆನಂತರ ಭಾಲ್ಕಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾ, ಬಳಿಕ ಸತ್ಯನಿಕೇತನ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.
ಸಮಾಜವಾದಿ ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಆಗಿ ಕೆಲಸ ಮಾಡಿರುವ ವಾಘಮಾರೆ, 1972ರ ಬರಗಾಲದ ಸಮಯದಲ್ಲಿ ಜಿಲ್ಲೆಯಲ್ಲಿ ನೀರು, ಆಹಾರ ಹಾಗೂ ಮೇವಿನ ಸಮಸ್ಯೆ ಉದ್ಭವಿಸಿದಾಗ ಹೋರಾಟದ ನೇತೃತ್ವ ವಹಿಸಿದ್ದರು. ಭಾಲ್ಕಿ ಕ್ಷೇತ್ರದಿಂದಲೇ ಸಮಾಜವಾದಿ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸುಭಾಷ ಅಷ್ಟೂರೆ ವಿರುದ್ಧ ಪರಾಭವಗೊಂಡಿದ್ದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅನೇಕ ಹೋರಾಟಗಾರರೊಂದಿಗೆ ಇವರು ಜೈಲು ಸೇರಿದ್ದರು.
ಬೀದರ್: ಜಿಲ್ಲೆಯ ಚಿತ್ರ ಕಲಾವಿದ ಶ್ರೀಕಾಂತ ಬಿರಾದಾರ ಅವರನ್ನು ಸುವರ್ಣ ಸಂಭ್ರಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಔರಾದ್ ತಾಲ್ಲೂಕಿನ ಕೌಠಾ ಗ್ರಾಮದ ಶ್ರೀಕಾಂತ ಅವರು 36 ವರ್ಷಗಳಿಂದ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯದ ಹಲವೆಡೆ ಚಿತ್ರಕಲೆ ಮತ್ತು ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ.
ಜಿಲ್ಲೆ ಹಾಗೂ ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.