ಬೀದರ್: ‘ನೆಲದಾಳದ ವಿಸ್ಮಯ’ವೆಂದೆ ಗುರುತಿಸಿಕೊಂಡಿರುವ ಇಲ್ಲಿನ ‘ಕರೇಜ್’ ಜೀರ್ಣೊದ್ಧಾರಕ್ಕೆ ಸಂಬಂಧಿಸಿದಂತೆ ಕೆಲಸಗಳು ಚುರುಕುನಿಂದ ನಡೆಯುತ್ತಿವೆ.
‘ಕರೇಜ್’ ಸಂರಕ್ಷಿಸಿ, ಜೀರ್ಣೊದ್ಧಾರಗೊಳಿಸಬೇಕೆಂಬ ಬೇಡಿಕೆಗೆ ಇದರೊಂದಿಗೆ ಇಂಬು ಸಿಕ್ಕಂತಾಗಿದೆ.
ಕರೇಜ್ ಹಾದು ಹೋಗಿರುವ ಮಾರ್ಗದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಹಾಗೂ ನಗರಸಭೆ ಜಂಟಿಯಾಗಿ ಸರ್ವೇ ನಡೆಸುತ್ತಿವೆ. ಹದ್ದು ಬಸ್ತು ಮಾಡಿ, ತಂತಿ ಬೇಲಿ ಅಳವಡಿಸಲಾಗುತ್ತಿದೆ. ಇನ್ನೊಂದೆಡೆ ಕರೇಜ್ ಸುತ್ತ ಬೆಳೆದು ನಿಂತಿರುವ ಮುಳ್ಳು, ಕಂಟಿ, ಪೊದೆ ತೆರವುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ. ದಟ್ಟವಾಗಿ ಬೆಳೆದಿದ್ದ ಪೊದೆಯಿಂದಾಗಿ ‘ಕರೇಜ್’ಗೆ ಹೋಗುವ ಮಾರ್ಗ ಮುಚ್ಚಿ ಹೋಗಿತ್ತು. ಬಹುತೇಕರಿಗೆ ಅದು ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ದಟ್ಟವಾದ ಪೊದೆಗಳಿಂದ ಅನೇಕ ವಿಷಜಂತುಗಳು ಸೇರಿಕೊಂಡಿದ್ದರಿಂದ ಜನ ವೀಕ್ಷಣೆಗೆ ಹಿಂದೇಟು ಹಾಕುತ್ತಿದ್ದರು. ಈಗ ಅದೆಲ್ಲ ತೆರವುಗೊಳಿಸಿರುವುದರಿಂದ ಸುಲಭವಾಗಿ ಹೋಗಿ ಬರಬಹುದಾಗಿದೆ.
ಬುಡಾ ಹಾಗೂ ನಗರಸಭೆಯ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯ ಕೈಗೊಂಡಿದ್ದು, ಇದಕ್ಕೆ ‘ಟೀಮ್ ಯುವ’ ಸಂಘಟನೆಯ ಸಹಕಾರವೂ ಪಡೆದುಕೊಳ್ಳಲಾಗಿದೆ.
‘ಕರೇಜ್’ ಜೀರ್ಣೊದ್ಧಾರಕ್ಕೆ ಈಗಾಗಲೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಬೀದರ್ ಹಾಗೂ ವಿಜಯಪುರ ಜಿಲ್ಲೆಯ ಕರೇಜ್‌ಗಳಿಗೆ ಇನ್ನಷ್ಟೇ ಬಜೆಟ್ ನಿಗದಿಯಾಗಿಬೇಕಿದೆ. ನಮ್ಮ ಕಡೆಯಿಂದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಬುಡಾ ಮತ್ತು ನಗರಸಭೆಯಿಂದ ಮಾರ್ಕಿಂಗ್ ಕೆಲಸ ನಡೆಯುತ್ತಿದೆ. ಎಲ್ಲೆಲ್ಲಿ ಅತಿಕ್ರಮಣವಾಗಿದೆ ಅದನ್ನು ಗುರುತಿಸಲಾಗುತ್ತಿದೆ. 2018ರ ಮುಂಚೆ ಯಾರ್‍ಯಾರು ಕಾನೂನುಬದ್ಧವಾಗಿ ಅನುಮತಿ ಪಡೆದು ಕಟ್ಟಡ ನಿರ್ಮಿಸಿದ್ದಾರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಅದಾದ ನಂತರ 10 ಮೀಟರ್ ಒಳಗೆ ಯಾರೇ ಕಟ್ಟಡ ನಿರ್ಮಿಸಿದರೂ ಅಂತಹವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಸತತ ಹಕ್ಕೊತ್ತಾಯದ ನಂತರ ಕರೇಜ್ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಂಡಿರುವುದಕ್ಕೆ ‘ಟೀಮ್ ಯುವ’ ಸಂಘಟನೆ ಸಂತಸ ವ್ಯಕ್ತಪಡಿಸಿದೆ. ಕರೇಜ್ ಪತ್ತೆ ಹಚ್ಚುವುದರಿಂದ ಅದರ ಸಂರಕ್ಷಣೆಗೆ ಆರಂಭದಿಂದಲೂ ಈ ಸಂಘಟನೆ ಸತತ ಕೆಲಸ ಮಾಡುತ್ತಿದೆ.
‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ವಿಶೇಷ ಮುತುವರ್ಜಿ ವಹಿಸಿ ಕರೇಜ್ ಜೀರ್ಣೊದ್ಧಾರಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಸದ್ಯ 10 ಮೀಟರ್ ಬಫರ್ ಜೋನ್ ಗುರುತಿಸಲಾಗುತ್ತಿದೆ. ಅದನ್ನು 30 ಮೀಟರ್‌ಗೆ ವಿಸ್ತರಿಸಬೇಕು’ ಎನ್ನುತ್ತಾರೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ‘ಟೀಮ್ ಯುವ’ ಸಂಯೋಜಕ ವಿನಯ್ ಮಾಳಗೆ.
‘ಅಂತರ್ಜಲ ಮತ್ತು ಪ್ರವಾಸೋದ್ಯಮಕ್ಕೆ ಕರೇಜ್ ಪೂರಕ ಎಂದು ಇಲ್ಲಿಗೆ ಭೇಟಿ ಕೊಟ್ಟಿರುವ ಅನೇಕ ತಜ್ಞರು ಮಾಹಿತಿ ಕೊಟ್ಟಿದ್ದಾರೆ. ಯುನೆಸ್ಕೊ ಮಾನದಂಡಗಳಿಗೆ ತಕ್ಕಂತೆ ಕೆಲಸ ನಿರ್ವಹಿಸಿದರೆ ಉತ್ತಮ. ಅದಕ್ಕಾಗಿ ತಜ್ಞರ ಅಭಿಪ್ರಾಯ ಆಧರಿಸಿಯೇ ಎಲ್ಲ ಕೆಲಸ ಮಾಡಬೇಕು. ಭವಿಷ್ಯದಲ್ಲಿ ಕರೇಜ್‌ಗೆ ಯಾವುದೇ ರೀತಿಯಿಂದ ಹಾನಿ ಆಗದ ರೀತಿಯಲ್ಲಿ ಯೋಜನೆ ರೂಪಿಸಬೇಕು. ಸತತವಾಗಿ ಹರಿಯುವ ಅದರ ನೀರಿನ ಸದ್ಬಳಕೆಗೂ ಚಿಂತನೆ ನಡೆಯಬೇಕಿದೆ. ಕರೇಜ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ. ಸಂಬಂಧಿಸಿದ ಸಂಸ್ಥೆಯವರು ಸ್ಥಳಕ್ಕೆ ಬಂದು, ಅದನ್ನು ಪರಿಶೀಲಿಸಿ ಮಾಡಿದರೆ ಉತ್ತಮ’ ಎಂದು ಹೇಳಿದ್ದಾರೆ.
ಬಜೆಟ್ ಬಿಡುಗಡೆಗೊಂಡ ನಂತರ ಏನೇನು ಅಭಿವೃದ್ಧಿ ಕೆಲಸಗಳಾಗಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ತಜ್ಞರು ಹಾಗೂ ಸ್ಥಳೀಯ ಎನ್‌ಜಿಒ ಸಹಕಾರ ಪಡೆಯಲಾಗುವುದುಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ‘ಕರೇಜ್’ ಹೊಂದಿದೆ. ಆದಕಾರಣ ಅದಕ್ಕನುಗುಣವಾಗಿಯೇ ಕೆಲಸ ಮಾಡಿದರೆ ಉತ್ತಮವಿನಯ್ ಮಾಳಗೆ ಸಂಯೋಜಕ ‘ಟೀಮ್ ಯುವ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.