ಬೀದರ್‌ನಲ್ಲಿ ಸುಮಾರು 3 ಕಿ.ಮೀಗೂ ಹೆಚ್ಚು ವಿಸ್ತೀರ್ಣದಲ್ಲಿ ನೀರು ಸಾಗಬಹುದಾದ ಅಂಕುಡೊಂಕು ಸುರಂಗ ಮಾರ್ಗವಿದೆ. 2015ರಲ್ಲಿ ಅದರ ಉತ್ಖನನವಾದ ನಂತರ ಆ ಪ್ರದೇಶದಲ್ಲಿ ಜಲಮೂಲದಲ್ಲಿ ಆಗಿರುವ ಬದಲಾವಣೆ ಗಮನಾರ್ಹ.
ಕೋಟೆ ಕೊತ್ತಲ, ಝರಿಗಳ ನಾಡೆಂದೆ ಬೀದರ್ ಹೆಸರುವಾಸಿ. ಆದರೆ, ಇದರ ನೆಲದಾಳದಲ್ಲೊಂದು ವಿಸ್ಮಯವಿದೆ.
ಹದಿನೈದನೇ ಶತಮಾನದಲ್ಲಿ ಬಹಮನಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ನೀರಿನ ಸುರಂಗ ಮಾರ್ಗವೊಂದು ಈಗಲೂ ಸಕ್ರಿಯವಾಗಿದೆ. ಸುಮಾರು 60ರಿಂದ 70 ಅಡಿ ನೆಲದಾಳದಲ್ಲಿ ಅಂಕುಡೊಂಕಾದ ನೀರಿನ ಸುರಂಗವದು. ವರ್ಷದ ಎಲ್ಲಾ ದಿನಗಳಲ್ಲೂ ಸದಾ ಒಂದೇ ಮಟ್ಟದಲ್ಲಿ ಶುದ್ಧವಾದ ನೀರು ಅದರಲ್ಲಿ ಹರಿಯುತ್ತ ಇರುವುದು ವಿಶೇಷ.
ಬೀದರ್‌ನ ಅಲಿಯಾಬಾದ್, ನೌಬಾದ್, ಕೊಳಾರ ಪರಿಸರದಲ್ಲಿ ಸುಮಾರು 3 ಕಿ.ಮೀಗೂ ಹೆಚ್ಚು ವಿಸ್ತೀರ್ಣದಲ್ಲಿ ಈ ಸುರಂಗ ಹರಡಿಕೊಂಡಿದೆ. ಇದು ಬಹುತೇಕ ನೆಲದಲ್ಲಿ ಹೂತುಹೋಗಿತ್ತು. ಆದರೆ, 2015–16ರಲ್ಲಿ ಉತ್ಖನನ ಕಾರ್ಯ ಕೈಗೆತ್ತಿಕೊಂಡ ನಂತರ ‘ಕರೇಜ್’ ಏನೆಂಬುದು ಹೊರಜಗತ್ತಿಗೆ ಗೊತ್ತಾಯಿತು. ಜಿಲ್ಲಾಡಳಿತದ ಮೂಲಗಳ ಪ್ರಕಾರ, ಸುಮಾರು 13 ಸಾವಿರ ಮೆಟ್ರಿಕ್ ಟನ್ ತ್ಯಾಜ್ಯ, ಮಣ್ಣನ್ನು ‘ಕರೇಜ್’ನಿಂದ ಹೊರತೆಗೆಯಲಾಗಿದೆ. ಇದರಿಂದಾಗಿ ಅದರಲ್ಲಿ ನೀರು ಇನ್ನಷ್ಟು ಸರಾಗವಾಗಿ ಹರಿಯಲು ಆರಂಭಿಸಿದೆ. ಅನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕೂಡ ಹೆಚ್ಚಾಗಿದೆ. ಬತ್ತಿಹೋಗಿದ್ದ ಬಾವಿ, ಕೊಳವೆಬಾವಿಗಳಲ್ಲಿ ನೀರು ಚಿಮ್ಮಿದೆ. ನೂರಾರು ಅಡಿ ಆಳಕ್ಕೆ ಹೋಗಿದ್ದ ಬಾವಿಗಳಲ್ಲಿ ನೀರು ಸಾಕಷ್ಟು ಮೇಲೆ ಬಂದಿದೆ. ಇದನ್ನು ಸ್ವತಃ ಸ್ಥಳೀಯರು, ವಿಜ್ಞಾನಿಗಳೇ ದೃಢೀಕರಿಸಿದ್ದಾರೆ. ಈ ನೀರಿನಿಂದಲೇ ಈ ಭಾಗದ ಕೆಲವು ರೈತರು 365 ದಿನವೂ ಕೃಷಿ ಮಾಡುತ್ತಿದ್ದಾರೆ. ಕೆಲವು ರೈತರ ಹೊಲಗಳಲ್ಲಿ ಪ್ರಾಚೀನ ಬಾವಿಗಳಿದ್ದು, ಅವುಗಳು ‘ಕರೇಜ್’ನ ಭಾಗ ಎನ್ನುವುದು ಗೊತ್ತಾಗಿದೆ.
‘ಕರೇಜ್’ ನಿರ್ವಹಣೆಗೆ ಹಾಗೂ ಗಾಳಿ, ಬೆಳಕಿನ ವ್ಯವಸ್ಥೆಗೆ 27 ತೆರೆದ ಬಾವಿಗಳನ್ನು (ವೆಂಟ್ಸ್) ಬಹಮನಿ ಅರಸರ ಕಾಲದಲ್ಲೇ ಕಟ್ಟಿಸಲಾಗಿತ್ತು. ಈ ಪೈಕಿ ಏಳು ‘ವೆಂಟ್’ಗಳನ್ನು ಈಗ ಪತ್ತೆಹಚ್ಚಿ, ಅವುಗಳ ಸುತ್ತಲೂ ಗೋಡೆ ಕಟ್ಟಿ, ಗ್ರಿಲ್ ಅಳವಡಿಸಿ ರಕ್ಷಿಸಲಾಗಿದೆ. ‘ವೆಂಟ್ಸ್’ ಹಾಗೂ ‘ಕರೇಜ್’ ಹಾದು ಹೋಗಿರುವ 100 ಮೀಟರ್ ಸುತ್ತಮುತ್ತಲಿನ ಪ್ರದೇಶವನ್ನು ‘ಬಫರ್ ಜೋನ್’ ಎಂದು ಗುರುತಿಸಿ, ಕಲ್ಲುಗಳನ್ನು ನೆಡಲಾಗಿದೆ. ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
‘ಕರೇಜ್’ ಪ್ರಸ್ತಾಪ ಎಲ್ಲೆಲ್ಲಿ?
ಇರಾನ್‌ನಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇರುವುದರಿಂದ ಆ ದೇಶದಲ್ಲಿ ‘ಕನ್ವೇಯರ್ ಸಿಸ್ಟಂ’ ಮಾದರಿಯಲ್ಲಿ ಒಂದು ನೀರಿನ ಮೂಲ ಆಧರಿಸಿ ಆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲಿ ಬಿಟ್ಟರೆ ‘ಕರೇಜ್’ ವ್ಯವಸ್ಥೆ ಇರುವುದು ಬೀದರ್‌ನಲ್ಲಷ್ಟೆ. ಆದರೆ, ಬೀದರ್‌ನಲ್ಲಿರುವ ‘ಕರೇಜ್’ಗೆ ಹಲವು ನೀರಿನ ಮೂಲ, ಝರಿಗಳಿರುವುದು ವಿಶೇಷ. ಬಹಮನಿ ಸಾಮ್ರಾಜ್ಯದ ಆಳ್ವಿಕೆಯಲ್ಲಿ, ಅದರಲ್ಲೂ ಮಹಮೂದ್ ಗವಾನ್ ಕಾಲದಲ್ಲಿ ಇರಾನ್‌ನಿಂದ ಎಂಜಿನಿಯರ್‌ಗಳನ್ನು ಕರೆಸಿ, ಅವರ ಸಲಹೆ ಆಧರಿಸಿ ‘ಕರೇಜ್’ ಮಾಡಿಸಿದ್ದಾರೆ ಎಂಬ ಅಭಿಪ್ರಾಯಗಳಿವೆ. ‘ಕರೇಜ್’ಗಳು ಬಹಮನಿ ವಾಸ್ತುಶಿಲ್ಪದ ಪ್ರಕಾರ ಕೆತ್ತನೆ ಮಾಡಿರುವುದು ಅದನ್ನು ಪುಷ್ಟೀಕರಿಸುತ್ತವೆ ಎನ್ನುತ್ತಾರೆ ಇತಿಹಾಸಕಾರರು. ಬೀದರ್ ಮಣ್ಣಿನಲ್ಲಿ ‘ಲ್ಯಾಟ್ರೈಟ್’ ಅಂಶ ಹೆಚ್ಚಿಗೆ ಇರುವುದರಿಂದ ‘ಕರೇಜ್’ ಮಾಡಲು ಮುಖ್ಯ ಕಾರಣ ಎನ್ನುವುದು ಗೊತ್ತಾಗಿದೆ.
‘ಬೀದರ್ ನಗರದಲ್ಲಿ ಒಟ್ಟು ಏಳು ‘ಕರೇಜ್’ಗಳಿವೆ’ ಎಂದು ‘ಬೀದರ್ ಹಿಸ್ಟರಿ ಆ್ಯಂಡ್ ಇಟ್ಸ್ ಮಾನ್ಯುಮೆಂಟ್ಸ್’ ಪುಸ್ತಕದಲ್ಲಿ ದಖನ್ ಪ್ರಸ್ಥಭೂಮಿಯ ಇತಿಹಾಸಕಾರರೆಂದೆ ಹೆಸರಾಗಿರುವ ಇತಿಹಾಸಕಾರ ಗುಲಾಂ ಯಜದಾನಿ ಅವರು ದಾಖಲಿಸಿದ್ದಾರೆ. ಅಂದರೆ, ಬೀದರ್‌ನಲ್ಲಿ ಈಗ ಪತ್ತೆಯಾಗಿರುವುದು ಒಂದು ‘ಕರೇಜ್’ ಮಾತ್ರ. ಇನ್ನೂ ಆರು ‘ಕರೇಜ್’ಗಳು ಬೀದರ್ ನಗರದ ನೆಲದಾಳದಲ್ಲಿದ್ದು, ಅವುಗಳ ಶೋಧಕಾರ್ಯ ನಡೆಯಬೇಕಿದೆ. ಇತ್ತೀಚೆಗೆ ಹೈದರಾಬಾದ್‌ನ ಐಐಟಿ ತಂಡ ಕೂಡ ಭೇಟಿ ನೀಡಿ ಪರಿಶೀಲಿಸಿದೆ. ಇದರ ಬಗ್ಗೆ ಆಳವಾದ ಅಧ್ಯಯನ ಮುಂದುವರೆದಿದೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ‘ಕರೇಜ್’ನ ಸಂಪೂರ್ಣ ಜಾಲ ಪತ್ತೆಹಚ್ಚುವ ಕಾರ್ಯ ಭರದಿಂದ ನಡೆಯುತ್ತಿದೆ.
‘ಅಂತರ್ಜಲಾಶಯ’
‘ಕರೇಜ್’ಗೆ ‘ಅಂತರ್ಜಲಾಶಯ’ ಎಂದು ಹೆಸರಾಂತ ವಿಜ್ಞಾನಿ ಮಜೀದ್ ಲಭಾಫ್ ಖನೀಕಿ ಕರೆದಿದ್ದಾರೆ. ಇವರು ‘ಕರೇಜ್’ ಬಗ್ಗೆ ತಿಳಿದುಕೊಳ್ಳಲೆಂದೆ ಮೂರು ಸಲ ಬೀದರ್‌ಗೆ ಭೇಟಿ ನೀಡಿರುವುದು ವಿಶೇಷ. ಪ್ರಾಚೀನ ಜಲಮೂಲಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಯುನೆಸ್ಕೊ ಅಂಗ ಸಂಸ್ಥೆಯಾಗಿರುವ ‘ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಕನ್ನಟ್ಸ್ ಅಂಡ್ ಹಿಸ್ಟೋರಿಕ್ ಹೈಡ್ರಾಲಿಕ್ ಸ್ಟ್ರಕ್ಚರ್’ನಲ್ಲಿ ಖನೀಕಿ ಅವರು ವಿಜ್ಞಾನಿ ಆಗಿ ಕೆಲಸ ಮಾಡುತ್ತಿದ್ದಾರೆ.
ಈ ಸ್ಥಳವೀಗ ಆಕರ್ಷಣೀಯ ಕೇಂದ್ರವಾಗಿದ್ದು, ಅನೇಕ ಜನ ಇತಿಹಾಸಕಾರರು, ಜಲಮೂಲಗಳ ರಕ್ಷಣೆಗೆ ಕೆಲಸ ಮಾಡುತ್ತಿರುವವರು, ಐಎಎಸ್ ಅಧಿಕಾರಿಗಳು, ಪತ್ರಕರ್ತರು, ವಿಜ್ಞಾನಿಗಳು ಸೇರಿ ಹಲವರು ಭೇಟಿ ಕೊಟ್ಟಿದ್ದಾರೆ.
ಆಗಬೇಕಾದದ್ದೇನು?
2012ರಲ್ಲಿ ಮೊದಲ ಬಾರಿಗೆ ‘ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್’ ಇದರ ಸರ್ವೇ ಕಾರ್ಯ ನಡೆಸಿ, 2013ರಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತು. ಮುಳ್ಳು ಕಂಟಿ, ಪೊದೆ, ಮಣ್ಣಿನಿಂದ ಸಂಪೂರ್ಣ ಮರೆಯಾಗಿದ್ದ ‘ಕರೇಜ್’ನಲ್ಲಿ ಅನೇಕ ವಿಷಜಂತುಗಳು ಸೇರಿಕೊಂಡಿದ್ದವು. ಉತ್ಖನನ ಕಾರ್ಯ ಕೈಗೆತ್ತಿಕೊಳ್ಳಲು ಜಿಲ್ಲಾಡಳಿತ ಮುಂದಾದಾಗ ಕಾರ್ಮಿಕರು ಕೆಲಸ ನಿರ್ವಹಿಸಲು ನಿರಾಕರಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ವಿಶೇಷ ಕಾಳಜಿ ವಹಿಸಿ 2015ರಲ್ಲಿ ಗುತ್ತಿಗೆದಾರ ಅಬ್ದುಲ್ ಸಮದ್ ಎಂಬುವರ ಮನವೊಲಿಸಿದ್ದರು. 196 ಕಾರ್ಮಿಕರ ಸಹಾಯದಿಂದ ಸತತ 17 ತಿಂಗಳು ಕೆಲಸ ನಿರ್ವಹಿಸಿ 2.1 ಕಿ.ಮೀ ‘ಕರೇಜ್’ನಲ್ಲಿ ಸಂಗ್ರಹವಾಗಿದ್ದ ಹೂಳು ಹೊರತೆಗೆಸಿದರು. ಆ ಕೆಲಸ ಯಾವ ‘ಅಡ್ವೆಂಚರ್’ ಸಿನಿಮಾಕ್ಕಿಂತಲೂ ಕಡಿಮೆ ಇರಲಿಲ್ಲ. ಅವರ ಕೆಲಸಕ್ಕೆ ಬೀದರ್‌ನ ‘ಟೀಮ್ ಯುವ’ ಸದಸ್ಯರು ಕೂಡ ನೆರವಾಗಿದ್ದರು. ‘ಟೀಮ್ ಯುವ’ ಸದಸ್ಯರು ‘ಕರೇಜ್’ ಹಾದು ಹೋಗಿರುವ ಪ್ರದೇಶದ ಜನರಿಗೆ ತಿಳಿವಳಿಕೆ ಮೂಡಿಸಿ, ಅದರ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ.
‘ಮಳೆಗಾಲದಲ್ಲಿ ಪ್ರತಿದಿನ ‘ಕರೇಜ್’ ಮೂಲಕ 1.16 ಕೋಟಿ ಲೀಟರ್ ನೀರು ಹರಿದುಹೋಗುತ್ತದೆ. ಇನ್ನು, ಬೇಸಿಗೆಯಲ್ಲಿ ನಿತ್ಯ 33 ಲಕ್ಷ ಲೀಟರ್ ನೀರು ಹರಿಯುತ್ತದೆ. ಒಂದುವೇಳೆ ಈ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಮಳೆಯಾಶ್ರಿತ ಪ್ರದೇಶದ ರೈತರ ಜಮೀನಿಗೆ ನೀರು ಹರಿಸಬಹುದು. ಇಡೀ ಪ್ರದೇಶವನ್ನು ಹಸಿರುಮಯ ಮಾಡಬಹುದು. ಈ ಕಾರಣಕ್ಕಾಗಿ ಇದರ ಸಂರಕ್ಷಣೆ ಬಹಳ ಮುಖ್ಯ’ ಎನ್ನುತ್ತಾರೆ ‘ಟೀಮ್ ಯುವ’ ಸಂಯೋಜಕ ವಿನಯ್ ಮಾಳಗೆ.
‘ನಿರಂತರವಾಗಿ ಹರಿಯುವ ನೀರಿನ ಇಂತಹ ಮೂಲಗಳಿರುವುದು ಜಗತ್ತಿನ ಕೆಲವೇ ಭಾಗಗಳಲ್ಲಿ. ಅದರಲ್ಲಿ ಬೀದರ್ ಕೂಡ ಸೇರಿದೆ ಎಂದು ಸ್ವತಃ ವಿಜ್ಞಾನಿಗಳೇ ಹೇಳಿದ್ದಾರೆ. ಇದರ ಸಂರಕ್ಷಣೆ ಬಹಳ ಅತ್ಯಗತ್ಯ. ಇನ್ನುಳಿದ ‘ಕರೇಜ್’ಗಳ ಶೋಧ ಹಾಗೂ ಉತ್ಸಖನನ ಕಾರ್ಯವನ್ನು ಕೂಡ ಶೀಘ್ರ ಕೈಗೆತ್ತಿಕೊಳ್ಳಬೇಕು. ‘ಕರೇಜ್’ ಅನ್ನು ‘ಹೆರಿಟೇಜ್ ಸೈಟ್’ ಎಂದು ಗುರುತಿಸಿದರೆ ಬೀದರ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸ್ಥಾನ ಸಿಗುತ್ತದೆ. ನೀರು, ಪ್ರವಾಸೋದ್ಯಮ ಹಾಗೂ ಸುಸ್ಥಿರತೆ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಬಹಳ ಮಹತ್ವದ್ದು. ಮೇಲಿಂದ ಬೀದರ್‌ನಲ್ಲಿರುವ ಕೋಟೆ, ಮಹಮೂದ್ ಗವಾನ್ ಮದರಸಾ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಂರಕ್ಷಿತ ಸ್ಮಾರಕಗಳ ವ್ಯಾಪ್ತಿಗೆ ಸೇರಿವೆ. ಪ್ರವಾಸೋದ್ಯಮದ ದೃಷ್ಟಿಕೋನದಿಂದ ಬೀದರ್ ಜಿಲ್ಲೆಗೆ ವಿಪುಲ ಅವಕಾಶಗಳಿವೆ’ ಎನ್ನುವುದು ಅವರು ನೀಡುವ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.