ಬೀದರ್: ನಗರದ ನೌಬಾದ್ ಸಮೀಪದ ಸರ್ವೇ ನಂಬರ್ 18ರಲ್ಲಿ 12 ಗುಂಟೆ ಜಮೀನು ಮಂಜೂರು ಮಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಬಿಡುಗಡೆಗೊಳಿಸಿದ್ದ ₹1.50 ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು, ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ ಹಾಗೂ ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರ ಕೂಲಿ ಕಾರ್ಮಿಕರ ಟ್ರಸ್ಟ್ ಆಗ್ರಹಿಸಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ರವೀಂದ್ರ ಕೊಳ್ಳೂರ್, ಪ್ರಧಾನ ಕಾರ್ಯದರ್ಶಿ ಬಾಲಾಜಿ ಔರಾದಕರ್, ಉಪಾಧ್ಯಕ್ಷ ಅಶೋಕ ಲಾಲಛಡಿ, ಕಾರ್ಯದರ್ಶಿ ಎಂ.ಡಿ. ಲೈಕೊದ್ದೀನ್, ಬೀದರ್ ತಾಲ್ಲೂಕು ಉಪಾಧ್ಯಕ್ಷ ರಾಮದಾಸ ಸಿಕಿಂದ್ರಾಪುರಕರ್, ಉಪಾಧ್ಯಕ್ಷ ರಾಜಕುಮಾರ ಮಾಳಗೆ, ಸದಸ್ಯ ಸಂಜು ಶಾಬಾದ ಅವರು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲೆಯ ಬಡ ಕಟ್ಟಡ ಕಾರ್ಮಿಕರಿಗೆ ಸಭೆ, ಸಮಾರಂಭ ಮತ್ತು ಇತರೆ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಸರ್ಕಾರ ಜಮೀನು ಮಂಜೂರು ಮಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ₹1.50 ಕೋಟಿ ನೀಡಿತ್ತು. ಆ ಅನುದಾನ ಎಲ್ಲಿಗೆ ಹೋಗಿದೆ. ಹಣ ಗುಳುಂ ಮಾಡಿದ್ದು, ಅದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.