ADVERTISEMENT

ಹುಮನಾಬಾದ್ ಕ್ಷೇತ್ರ ಸ್ಥಿತಿ–ಗತಿ: ಕಾಂಗ್ರೆಸ್ ಹಣೆಯಲು ಬಿಜೆಪಿ, ಜೆಡಿಎಸ್ ರಣತಂತ್ರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 19:30 IST
Last Updated 11 ಫೆಬ್ರುವರಿ 2023, 19:30 IST
ಹುಮನಾಬಾದ್‌ ವಿಧಾನಸಭಾ ಕ್ಷೇತ್ರ
ಹುಮನಾಬಾದ್‌ ವಿಧಾನಸಭಾ ಕ್ಷೇತ್ರ   

ಹುಮನಾಬಾದ್: ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ದೊಡ್ಡ ಮಟ್ಟದಲ್ಲಿ ಹೋರಾಟ, ಪ್ರಚಾರ ನಡೆಸಿದರೂ ಈ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಯಿಂದ ಬಿಡಿಸಿಕೊಳ್ಳಲಾಗಿಲ್ಲ. ಹಾಲಿ ಶಾಸಕರ ಇಬ್ಬರು ಸಹೋದರರೂ ವಿಧಾನ ಪರಿಷತ್‌ ಸದಸ್ಯರಾಗಿರುವ ಕಾರಣ ಸಹಜವಾಗಿ ಕಾಂಗ್ರೆಸ್‌ ಬಲವಾಗಿ ಬೇರೂರಿದೆ.

ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಉಳಿದ ರಾಜಕೀಯ ಪಕ್ಷಗಳು ಹೊಸ ತಂತ್ರಗಾರಿಕೆ ರೂಪಿಸುತ್ತಿವೆ. ಕುಟುಂಬದಲ್ಲಿ ಬಿರುಕು ಮೂಡಿಸಿ ಅವರದ್ದೇ ಕುಟುಂಬದ ಸದಸ್ಯರೊಬ್ಬರನ್ನು ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸಿ, ತಮ್ಮ ಪಕ್ಷದ ಧ್ವಜ ಊರಲು ಪ್ರಯತ್ನ ನಡೆಸಿವೆ. ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಪಿ ಬಲ ಹೆಚ್ಚಿಸಿಕೊಳ್ಳಲು ಪಣತೊಟ್ಟಿವೆ.

ಹುಮನಾಬಾದ್‌ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರುವ ರಾಜಶೇಖರ ಪಾಟೀಲ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್‌ ದೊರೆಯಲಿದೆ ಎಂದು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ರಾಜಶೇಖರ ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ. ಫೈಜ್ ಅವರ ಹೆಸರು ಘೋಷಿಸಲಾಗಿದೆ. ಬಿಜೆಪಿ ಪ್ರಚಾರ ಆರಂಭಿಸಿದರೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಈವರೆಗೆ ಈ ಕ್ಷೇತ್ರಕ್ಕೆ ನಡೆದ 15 ಚುನಾವಣೆಗಳ ಪೈಕಿ ತಲಾ ಎರಡು ಬಾರಿ ಕಮ್ಯುನಿಸ್ಟ್ ಹಾಗೂ ಜೆಡಿಎಸ್ ಜಯಗಳಿಸಿವೆ. 1999ರಲ್ಲಿ ನಡೆದ ಚುನಾವಣೆಯಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಗೆದ್ದಿದೆ.

ಪಟ್ಟಣದ ಹೊರವಲಯದಲ್ಲಿನ ಕೆಲ ಕೆಮಿಕಲ್ ಫ್ಯಾಕ್ಟರಿಗಳು ಹೊರ ಬಿಡುತ್ತಿರುವ ವಿಷಗಾಳಿ, ಕೈಗಾರಿಕೆ ತ್ಯಾಜ್ಯ ಸಮಸ್ಯೆ, ಕಾರಂಜಾ ಹಿನ್ನೀರಿನಲ್ಲಿ ಮುಳುಗಿದ ಗ್ರಾಮಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ಜಟಿಲ ಸಮಸ್ಯೆಗಳನ್ನು ಮುಂದೆ ಮಾಡಿಕೊಂಡು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಬಿಜೆಪಿ ಹಾಗೂ ಜೆಡಿಎಸ್‌ ಸಿದ್ಧತೆ ನಡೆಸಿವೆ. ಇಂತಹ ಹತ್ತಾರು ಸಮಸ್ಯೆಗಳನ್ನು ರಾಜಶೇಖರ ಪಾಟೀಲ ಎದುರಿಸಬೇಕಾಗಿದೆ.

ಬಿಜೆಪಿ ಹರಸಾಹಸ

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಶಾಸಕ ರಾಜಶೇಖರ ಪಾಟೀಲ ಸೋದರ ಸಂಬಂಧಿ ಸಿದ್ದು ಪಾಟೀಲ ಹಾಗೂ ಮಾಜಿ ಶಾಸಕ ಸುಭಾಷ ಕಲ್ಲೂರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಸುಭಾಷ ಕಲ್ಲೂರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಹಾಲಿ ಅಧ್ಯಕ್ಷರಾಗಿದ್ದಾರೆ. 2018ರ ಚುನಾವಣೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದ ಕಲ್ಲೂರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಅವರು ಈ ಬಾರಿ ಮತ್ತೆ ಟಿಕೆಟ್‌ ದೊರೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಡಾ.ಸಿದ್ದು ಪಾಟೀಲ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಯುವಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾರೆ. ಬಿಜೆಪಿ ಯುವ ಕಾರ್ಯಕರ್ತರ ಪಡೆ ತೆರೆಮರೆಯಲ್ಲಿ ಇವರನ್ನೇ ಹೆಚ್ಚು ಇಷ್ಟ ಪಡುತ್ತಿದೆ. ಸಿದ್ದು ಪಾಟೀಲರಿಗೆ ಬಿಜೆಪಿ ಟಿಕೆಟ್ ಸಿಕ್ಕರೂ ಅಚ್ಚರಿ ಇಲ್ಲ.

2013ರ ಚುನಾವಣೆಯಲ್ಲಿ ಶಾಸಕ ರಾಜಶೇಖರ ಪಾಟೀಲ 64,694 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ನಸಿಮೋದ್ದಿನ್ ಪಟೇಲ್ 40,194 ಮತಗಳನ್ನು ಪಡೆದಿದ್ದರು. 2018ರ ಚುನಾವಣೆಯಲ್ಲಿ ರಾಜಶೇಖರ ಪಾಟೀಲ ಅವರು ಬಿಜೆಪಿ ವಿರುದ್ಧ 31,814 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಪ್ರತಿಸ್ಪರ್ಧಿ ಪಕ್ಷಗಳು ಹೊಸ ರಣನೀತಿ ಅನುಸರಿಸುತ್ತಿರುವ ಕಾರಣ ಗೌಡರು ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಹುಮನಾಬಾದ್ ವಿಧಾನಸಭಾ ಕ್ಷೇತ್ರ

ಹಾಲಿ ಶಾಸಕ (ಕಾಂಗ್ರೆಸ್ ): ರಾಜಶೇಖರ ಪಾಟೀಲ

ಮತದಾರರ ವಿವರ
ಪುರುಷರು- 1,21,884
ಮಹಿಳೆಯರು- 1,11,681
ತೃತೀಯ ಲಿಂಗಿಗಳು- 12
-----------------
ಒಟ್ಟು ಮತದಾರರು– 2,33,577

ಹಿಂದಿನ ಚುನಾವಣೆಗಳಲ್ಲಿ ಪಕ್ಷಗಳು ಪಡೆದ ಮತಗಳ ವಿವರ

ಪಕ್ಷಗಳು 2018 2013 2008
ಕಾಂಗ್ರೆಸ್ 74,945 64,694 49,603
ಬಿಜೆಪಿ 43,131 6,604 27,867
ಜೆಡಿಎಸ್ 34,280 40,194 25,883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.