ಬಸವಕಲ್ಯಾಣ (ಬೀದರ್): ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ನಗರ ಸಜ್ಜಾಗಿದೆ. ನಗರದೆಲ್ಲೆಡೆ ಬಿಜೆಪಿ ಧ್ವಜ ಮತ್ತು ಕಟೌಟ್ ಗಳು ರಾರಾಜಿಸುತ್ತಿವೆ. ಕೇಸರಿ ಬಣ್ಣದ ಬಟ್ಟೆಯ ಸ್ವಾಗತ ಕಮಾನುಗಳಿಂದ ರಸ್ತೆಗಳು ಕೇಸರಿಮಯವಾಗಿವೆ.
ನಗರದ ರಥ ಮೈದಾನದಲ್ಲಿ ಬಹಿರಂಗ ಸಭೆಗಾಗಿ ಬೃಹತ್ ಮಂಟಪ ಮತ್ತು ವೇದಿಕೆ ಸಿದ್ಧಗೊಂಡಿದೆ. ಎದುರಲ್ಲಿ ಅರಮನೆ ಶೈಲಿಯ ಮಹಾದ್ವಾರ ಕಂಗೊಳಿಸುತ್ತಿದೆ. ಇಲ್ಲಿಯೇ ಸಮೀಪದಲ್ಲಿರುವ ಅಕ್ಕ ಮಹಾದೇವಿ ಕಾಲೇಜಿನ ಆವರಣದಲ್ಲಿ ಎಲ್ಲರ ಊಟದ ವ್ಯವಸ್ಥೆಗಾಗಿ ಶಾಮಿಯಾನಾ ಹಾಕಲಾಗಿದೆ.
ಸಸ್ತಾಪುರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಮುಖ್ಯ ರಸ್ತೆಯ ಮಧ್ಯದ ದ್ವಿಭಾಜಕದಲ್ಲಿನ ಪ್ರತಿ ವಿದ್ಯುತ್ ಕಂಬಗಳಿಗೆ ಕಟೌಟ್ ಕಟ್ಟಲಾಗಿದೆ. ರಸ್ತೆಯ ಪಕ್ಕದಲ್ಲಿ ಎರಡೂ ಕಡೆ ಕಟ್ಟಿಗೆಯ ಕೋಲುಗಳನ್ನು ಅಳವಡಿಸಿ ಬಿಜೆಪಿ ಧ್ವಜಗಳನ್ನು ಕಟ್ಟಲಾಗಿದೆ. ಡಾ.ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಅಲ್ಲಲ್ಲಿ ಅಂತರ ಬಿಟ್ಟು ಕಮಾನುಗಳನ್ನು ನಿರ್ಮಿಸಲಾಗಿದೆ. ತ್ರಿಪುರಾಂತದ ಬಿಜೆಪಿ ಕಚೇರಿ ಮತ್ತಿತರೆಡೆ ಅಮಿತ್ ಶಾ ಹಾಗೂ ಇತರರ ಭಾವಚಿತ್ರಗಳಿರುವ ದೊಡ್ಡ ದೊಡ್ಡ ಬಲೂನ್ ಗಳನ್ನು ಕಟ್ಟಲಾಗಿದೆ.
ಬೀದರ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.10 ಗಂಟೆಗೆ ನಗರದಲ್ಲಿನ ಕ್ರೀಡಾಂಗಣದಲ್ಲಿನ ಹೆಲಿಪ್ಯಾಡ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುವರು. ನಂತರ ಅನುಭವ ಮಂಟಪದಲ್ಲಿ ಯಾತ್ರೆ ಉದ್ಘಾಟಿಸುವರು. ಅದಾದಮೇಲೆ ವಾಹನದ ಮೂಲಕ ರಥ ಮೈದಾನಕ್ಕೆ ಹೋಗುವರು. ಅಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ ಖೂಬಾ, ಪಶು ಸಂಗೋಪನಾ ಸಚಿವ ಪ್ರಭು ಚವಾಣ್, ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ.
‘ಕಾರ್ಯಕ್ರಮದಲ್ಲಿ 60 ಸಾವಿರ ಜನರು ಪಾಲ್ಗೊಳ್ಲುವ ನಿರೀಕ್ಷೆ ಇದೆ' ಎಂದು ಶಾಸಕ ಶರಣು ಸಲಗರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.