ADVERTISEMENT

ನೂತನ ಕೃಷಿ ಪದ್ಧತಿ: ರೈತನಿಗೆ ವರವಾದ ಬಹುಬೆಳೆ ಕಾಯಕ

ಕಾಶ್ಮೀರಿ ಆ್ಯಪಲ್, ಬಾರೆಕಾಯಿ ಬೆಳೆದು 2 ಲಕ್ಷ ಆದಾಯ ಪಡೆದ ನಿವೃತ್ತ ಪ್ರಾಚಾರ್ಯ ಬಿರಾದಾರ

ಬಸವರಾಜ ಎಸ್.ಪ್ರಭಾ
Published 10 ಫೆಬ್ರುವರಿ 2023, 19:30 IST
Last Updated 10 ಫೆಬ್ರುವರಿ 2023, 19:30 IST
ಭಾಲ್ಕಿ ತಾಲ್ಲೂಕಿನ ಕದಲಾಬಾದ ಗ್ರಾಮದ ರೈತ ಆರ್‌.ಎಸ್‌.ಬಿರಾದಾರ ಅವರು ತಮ್ಮ ಹೊಲದಲ್ಲಿ ಬೆಳೆದಿರುವ ಕಾಶ್ಮೀರಿ ಆ್ಯಪಲ್ ಬಾರೆಕಾಯಿ ಪ್ರದರ್ಶಿಸುತ್ತಿರುವುದು
ಭಾಲ್ಕಿ ತಾಲ್ಲೂಕಿನ ಕದಲಾಬಾದ ಗ್ರಾಮದ ರೈತ ಆರ್‌.ಎಸ್‌.ಬಿರಾದಾರ ಅವರು ತಮ್ಮ ಹೊಲದಲ್ಲಿ ಬೆಳೆದಿರುವ ಕಾಶ್ಮೀರಿ ಆ್ಯಪಲ್ ಬಾರೆಕಾಯಿ ಪ್ರದರ್ಶಿಸುತ್ತಿರುವುದು   

ಭಾಲ್ಕಿ: ತಾಲ್ಲೂಕಿನ ಕದಲಾಬಾದ ಗ್ರಾಮದ ರೈತ, ನಿವೃತ್ತ ಪ್ರಾಚಾರ್ಯ ಆರ್‌.ಎಸ್‌.ಬಿರಾದಾರ ಅವರು ತಮ್ಮ 2.10 ಎಕರೆಯಲ್ಲಿ ಕಾಶ್ಮೀರಿ ಆ್ಯಪಲ್ ಬಾರೆಕಾಯಿ ಬೆಳೆದು ನೂತನ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಕಾಯಕವನ್ನು ಇಷ್ಟಪಟ್ಟು ಮಾಡಿದಲ್ಲಿ ಯಾವತ್ತೂ ಅನ್ನದಾತರು ನಷ್ಟ ಅನುಭವಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಮತ್ತೊಮ್ಮೆ ಸಿದ್ಧಮಾಡಿ ತೋರಿಸಿದ್ದಾರೆ.

ನನಗೆ ಒಟ್ಟು 35 ಎಕರೆ ಹೊಲವಿದೆ. ಅದರಲ್ಲಿ 2.10 ಎಕರೆಯಲ್ಲಿ ಸೀತಾಫಲ, 5 ಎಕರೆ ಕಬ್ಬು, 2.10 ಎಕರೆಯಲ್ಲಿ ಕಾಶ್ಮೀರಿ ಆ್ಯಪಲ್ ಬಾರೆಕಾಯಿ ಬೆಳೆಯುತ್ತಿದ್ದು, ಉಳಿದಂತೆ ಮಳೆಯಾಶ್ರಿತ ಬೆಳೆಗಳಾದ ಸೋಯಾಬಿನ್‌, ಹೆಸರು, ಉದ್ದು, ತೊಗರಿ, ಕಡಲೆ ಬೆಳೆಯುತ್ತಿದ್ದೇನೆ.

ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಇತರ ಕಾರಣಗಳಿಂದ ಅನೇಕ ಸಾರಿ ಮಳೆಯಾಶ್ರಿತ ಬೆಳೆಗಳಿಂದ ಅಧಿಕ ಇಳುವರಿ, ಲಾಭ ಪಡೆಯಲು ಸಾಧ್ಯವಾಗುತ್ತಿದ್ದಿಲ್ಲ. ಪ್ರಾಚಾರ್ಯ ವೃತ್ತಿಯಿಂದ ನಿವೃತ್ತನಾದ ಬಳಿಕ ಹೇಗಾದರೂ ಮಾಡಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವ ಬೆಳೆಗಳನ್ನು ಬೆಳೆಯಬೇಕು ಎಂದು ಯೋಚಿಸುತ್ತಿರುವಾಗಲೇ ತಲೆಗೆ ಹೊಳೆದದ್ದು ಯೂಟ್ಯೂಬ್‌ನಲ್ಲಿ ನೋಡಿದ ಕಾಶ್ಮೀರಿ ಆ್ಯಪಲ್ ಬಾರೆಕಾಯಿ ಎಂದು ಈ ಬೆಳೆ ಬೆಳೆಯಲು ಕಾರಣವಾದ ಹಿನ್ನೆಲೆಯನ್ನು ಅನ್ನದಾತ ಆರ್‌.ಎಸ್‌.ಬಿರಾದಾರ ಬಿಚ್ಚಿಟ್ಟರು.

ADVERTISEMENT

ಒಂದಕ್ಕೆ ₹40 ರಂತೆ ಒಟ್ಟು 800 ಕೃಷಿ ಮಾಡಿದ ಕಾಶ್ಮೀರಿ ಆ್ಯಪಲ್ ಬಾರೆಕಾಯಿ ಗಿಡಗಳನ್ನು ಕಲ್ಕತ್ತಾದಿಂದ ತರಿಸಿದ್ದೇನೆ. ಸಾಲಿನಿಂದ ಸಾಲಿಗೆ 14, ಗಿಡದಿಂದ ಗಿಡಕ್ಕೆ 8 ಅಡಿ ಅಂತರದಲ್ಲಿ ಬೆಳೆಯಲಾಗಿದೆ. ಕೇವಲ ಎರಡು ದಿನ ಮತ್ತು ₹2000 ಖರ್ಚಿನಲ್ಲಿ 800 ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ಒಂದು ಸಾರಿ ನೆಟ್ಟರೆ ಸುಮಾರು 15 ವರ್ಷದವರೆಗೆ ಬೆಳೆ ಪಡೆಯಬಹುದು. ಹನಿ ನೀರಾವರಿ ಪದ್ಧತಿ ಅಳಡಿಸಿಕೊಂಡಿದ್ದೇನೆ. 8 ತಿಂಗಳಲ್ಲಿಯೇ ಬೆಳೆದ ಪ್ರತಿ ಗಿಡದಿಂದ 5 ರಿಂದ 10 ಕೆ.ಜಿ ಇಳುವರಿ ಬಂದಿದೆ. ಹಾಗಾಗಿ, ಲಾಗೋಡಿ ತೆಗೆದು ಸುಮಾರು 2 ಲಕ್ಷ ನಿವ್ವಳ ಆದಾಯ ದೊರೆತಿದೆ. ಮುಂದಿನ ವರ್ಷ ಪ್ರತಿ ಎಕರೆಗೆ ಕನಿಷ್ಠ 3 ಲಕ್ಷ ಆದಾಯ ಪಡೆಯುವ ಗುರಿ ಹೊಂದಿದ್ದೇನೆ ಎನ್ನುತ್ತಾರೆ ಬಿರಾದಾರ ಅವರು.

ರೈತರು ಕೃಷಿ ಕಾರ್ಯವನ್ನು ಲಾಭದಾಯಕವಾಗಿಸಲು, ಕಡಿಮೆ ನೀರು, ಖರ್ಚು, ಸಮಯದಲ್ಲಿ ಹೆಚ್ಚಿನ ಲಾಭ ಪಡೆಯಲು ಬಹುಬೆಳೆ ಪದ್ಧತಿಯತ್ತ ಮುಖ ಮಾಡಬೇಕು. ತೋಟಗಾರಿಕೆ ಬೆಳೆಗಳಿಂದ ಉತ್ತಮ ಆದಾಯ ಲಭಿಸುತ್ತದೆ ಎಂದು ಇತರ ಅನ್ನದಾತರಿಗೆ ಸಲಹೆ ನೀಡುತ್ತಾರೆ.

***

ಕೃಷಿಯಲ್ಲಿ ಲಾಭ ಪಡೆಯಲು ಅನ್ನದಾತರು ನವೀನ, ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಬೇಡಿಕೆಯುಳ್ಳ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು.
ಆರ್‌.ಎಸ್‌.ಬಿರಾದರ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.