ಬೀದರ್: 'ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಸಮಗ್ರ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವುದು' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಆಶ್ವಾಸನೆ ನೀಡಿದರು.
ನಗರದ ಬ್ರಿಮ್ಸ್ ನಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕರ ನೇಮಕಾತಿ, ಹೊರಗುತ್ತಿಗೆ ವೈದ್ಯರ ಹಾಗೂ ಸಿಬ್ಬಂದಿ ವೇತನ ಪಾವತಿ, ಕಟ್ಟಡ ದುರಸ್ತಿ, ಸುರಕ್ಷತೆ ಹಾಗೂ ಭದ್ರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ ಹಾಗೂ ತೆಲಂಗಾಣ ಗಡಿಭಾಗದ ಬೀದರ್ ಜಿಲ್ಲೆಯ ಎಲ್ಲ ರೋಗಿಗಳಿಗೆ ಅನುಕೂಲವಾಗಿರುವ ಬ್ರಿಮ್ಸ್ ನಲ್ಲಿ ಸಕಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
150 ಪದವಿ ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ಸೀಟಗಳ ಹೆಚ್ಚಳ, ಕಟ್ಟಡದ ಸ್ಥಿತಿಗತಿ, ಅಗತ್ಯ ಉಪಕರಣಗಳು, ಸಿಬ್ಬಂದಿ ವೇತನ, ಸ್ವಚ್ಛತೆ ಹಾಗೂ ಹಣಕಾಸಿನ ವ್ಯವಹಾರ ಕುರಿತು ಮಾಹಿತಿ ಪಡೆದ ಅವರು, ಖಾಲಿಯಿರುವ ತಜ್ಞ ವೈದ್ಯರ ಹುದ್ದೆಗೆ ಪ್ರಸ್ತಾವ ಕಳಿಸಿದರೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ಹಲವಾರು ತಿಂಗಳಿಂದ ಬಾಕಿಯಿರುವ ಹೊರಗುತ್ತಿಗೆ ವೈದ್ಯರ ಹಾಗೂ ಇತರೆ ಸಿಬ್ಬಂದಿ ವೇತನ ಪಾವತಿಸಲಾಗುವುದು. ಈ ವರ್ಷ ₹7 ಕೋಟಿ ಅನುದಾನ ವೇತನಕ್ಕೆ ಬಂದಿದೆ. ಇನ್ನು ₹4.5 ಕೋಟಿ ವೇತನ ಅನುದಾನ ಬೇಕಿದೆ ಎಂದು ಬ್ರಿಮ್ಸ್ ನಿರ್ದೇಶಕಿ ಡಾ..ಶಾಂತಲಾ ಕೌಜಲಗಿ ವಿವರಿಸಿದರು.
ಕಳೆದ 5 ವರ್ಷಗಳಲ್ಲಿ ಬ್ರಿಮ್ಸ್ ಗೆ ಸರ್ಕಾರದಿಂದ ನೀಡಲಾದ ಅನುದಾನದ ಕುರಿತು ವಿಚಾರಣೆ ನಡೆಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರಿಗೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಮಾತನಾಡಿ, ಬ್ರಿಮ್ಸ್ನ ಹೆಚ್ಚಿನ ಸುಧಾರಣೆ, ಉತ್ತಮ ಆರೋಗ್ಯ ಸೇವೆ ನೀಡಲು ವೈದ್ಯಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಹಾಗೂ ಕೆಕೆಆರ್‌ಡಿಬಿ ಅನುದಾನದಡಿ ಬ್ರಿಮ್ಸ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಪ್ರತಿದಿನ ಸ್ವಚ್ಚತೆ ಕಾಪಾಡುವಂತೆ ಸೂಚಿಸಿದರು.
ಕಟ್ಟಡವು ಅಲ್ಲಲ್ಲಿ ಸೋರುತ್ತಿರುವುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ ತಕ್ಷಣವೇ ದುರಸ್ತಿ ಮಾಡಬೇಕು. ಶೌಚಾಲಯ ನವೀಕರಣ ಹಾಗೂ ಆಧುನಿಕ ಪೈಪ್ ಲೈನ್ ಅಳವಡಿಸಬೇಕು. ಭದ್ರತೆ ಹೆಚ್ಚಿಸಬೇಕು ಎಂದು ಸೂಚಿಸಿದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ತಜ್ಞ ವೈದ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.