ADVERTISEMENT

ಕನಿಷ್ಠ ಬೆಂಬಲ ಬೆಲೆ: ಕಾನೂನು ಜಾರಿಗೆ ಆಗ್ರಹ

22 ರಂದು ದೆಹಲಿಯಲ್ಲಿ ರೈತ ಮುಖಂಡರ ಸಭೆ: ಕುರುಬೂರ್ ಶಾಂತಕುಮಾರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:56 IST
Last Updated 11 ಜುಲೈ 2024, 12:56 IST
11ಕೆಟಿಸಿ1
11ಕೆಟಿಸಿ1   

ಬೀದರ್: ‘ಕೇಂದ್ರ ಸರ್ಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿ ದೇಶದಾದ್ಯಂತ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ಜು.22 ರಂದು ದೆಹಲಿಯಲ್ಲಿ ರೈತ ಮುಖಂಡರ ಸಭೆ ಆಯೋಜಿಸಲಾಗಿದೆ’ ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿ ಕುರಿತು ಈಗಾಗಲೇ ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯಂತೆ ಎಂಎಸ್‌ಪಿ ಖಾತರಿ ಕಾನೂನು ಜಾರಿಗೆ ತರಲು ಎರಡು ತಿಂಗಳ ಹಿಂದ ಸಮಿತಿ ರಚಿಸಲಾಗಿದೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ’ ಅಸಮಾಧಾನ ವ್ಯಕ್ತಪಡಿಸಿದರು.

‘ಸಕ್ಕರೆ ಕಾರ್ಖಾನೆಗಳು ಇಳುವರಿ ತೋರಿಸುವಲ್ಲಿ, ತೂಕದಲ್ಲಿ, ಉಪಉತ್ಪನ್ನಗಳ ಲಾಭ ಹಂಚಿಕೆಯಲ್ಲಿ, ಮೋಸ ಮಾಡುತ್ತಾ ರೈತರನ್ನ ವಂಚಿಸುತ್ತಿದ್ದಾರೆ. ಕಬ್ಬಿನ ಹಣ ಸರಿಯಾದ ಸಮಯಕ್ಕೆ ನೀಡದೆ ಅನ್ಯಾಯ ಮಾಡುತ್ತಿದ್ದು ಅವರ ಮೇಲೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ರೈತರು ಜಾಗೃತರಾಗಿ ಎಫ್ಆರ್‌ಪಿ ದರಕ್ಕಿಂತ ಹೆಚ್ಚು ಬೆಲೆ ನೀಡುವ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಬೇಕು. ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಹೊಸದಾಗಿ ಕಾರ್ಖಾನೆಗೆ ಕಬ್ಬು ಹಾಕುವ ರೈತರಿಗೆ ಕಬ್ಬಿನ ಬೀಜಕ್ಕಾಗಿ ₹8 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಸಾಗಾಣಿಕೆ ವೆಚ್ಚವನ್ನೂ ಕಾರ್ಖಾನೆಯವರೇ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

‘ಕಾಡು ಪ್ರಾಣಿಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿತನ ತೋರುತ್ತಿದ್ದಾರೆ. ತಕ್ಷಣ ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡಲೇ ರಾಜ್ಯಮಟ್ಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಬೆಳೆ ವಿಮೆ ಕಟ್ಟಿರುವ ರೈತರಿಗೆ ಪರಿಹಾರದ ಹಣ ನ್ಯಾಯಯುತವಾಗಿ ಬರುತ್ತಿಲ್ಲ. ವಿಮಾ ಕಂಪನಿಗಳು ರೈತರ ಕಣ್ಣಿಗೆ ಮಣ್ಣೆರಚುತ್ತಿವೆ. ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ನಕಲಿ ಕೀಟ ಕೀಟನಾಶಕ, ಮಾರಾಟ  ತಡೆಯಲು ಕಠಿಣ ಕಾನೂನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ತೆಲಂಗಾಣದ ಕಾಂಗ್ರೆಸ್ ಸರ್ಕಾರ ರೈತರಿಗೆ ವರ್ಷಕ್ಕೆ ಗೊಬ್ಬರ, ಬಿತ್ತನೆ ಬೀಜ ಖರೀದಿಸಲು ಎಕರೆಗೆ ₹15 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ. ರಾಜ್ಯದಲ್ಲಿ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಸಮ್ಮಾನ್ ಯೋಜನೆಯಲ್ಲಿ ರಾಜ್ಯ ಸರ್ಕಾರ ಕೂಡ ₹6 ಸಾವಿರ ನೀಡಲು ಮುಂದಾಗಬೇಕು. ಕೃಷಿ ಸಾಲದ ನೀತಿ ಬದಲಾಗಬೇಕು. ರೈತನ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ75 ಸಾಲ ನೀಡುವ ಯೋಜನೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಶಿವರಾಜ ಪಾಟೀಲ ಆದರೆ, ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.