ಖಟಕಚಿಂಚೋಳಿ: ಸುಲ್ತಾನಬಾದ್ ಗ್ರಾಮದ ರೈತ ರಮೇಶ ರಂಜೇರಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ತಮ್ಮ ತೋಟದಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬೆಳೆದಿದ್ದು ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಎರಡುವರೆ ಎಕರೆಯಲ್ಲಿ ಪಪ್ಪಾಯಿ ಬೆಳೆಸಿದ್ದಾರೆ. ಪ್ರತಿ ಎಕರೆಗೆ 900 ಸಸಿಗಳಂತೆ 2 ಸಾವಿರ ಸಸಿ ನೆಟ್ಟಿದ್ದಾರೆ. ನಾಟಿಗೆ ಮುಂಚೆ ಭೂಮಿಗೆ ಸಾಕಷ್ಟು ಕೊಟ್ಟಿಗೆ ಗೊಬ್ಬರ ನೀಡಿ, ಮಣ್ಣು ಹದಗೊಳಿಸಿ ನಾಟಿಗೆ ಸಿದ್ಧಪಡಿಸಿಕೊಂಡು, 6-8 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಿದ್ದಾರೆ.
’ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಕೆಯ ಬದಲು, ತಿಪ್ಪೆಗೊಬ್ಬರ , ಸಾವಯವ ಗೊಬ್ಬರ ಬಳಸಿರುವುದರಿಂದ ಖರ್ಚಿನ ಪ್ರಮಾಣವೂ ಕಡಿಮೆಯಾಯಿತು ಹಾಗೂ ಗುಣಮಟ್ಟದ ಇಳುವರಿ ಬರುತ್ತಿದೆ' ಎನ್ನುತ್ತಾರೆ ರೈತ ರಮೇಶ.
'ಪ್ರಾರಂಭಿಕ ಹಂತದಿಂದ ಇಲ್ಲಿಯವರೆಗೆ ಪಪ್ಪಾಯ ಬೆಳೆಗೆ ಸುಮಾರು ₹ 2 ಲಕ್ಷದವರೆಗೆ ಖರ್ಚು ವೆಚ್ಚ ಮಾಡಲಾಗಿದೆ. ಪ್ರತಿ ಕಾಯಿಯು 2 ರಿಂದ 3 ಕೆಜಿ ತೂಕ ಹೊಂದಿದೆ. ಈಗಾಗಲೇ ಪ್ರತಿ ಕೆಜಿಗೆ ₹11 ರಂತೆ ಮಾರಾಟ ಆಗುತ್ತಿದೆ. ಸದ್ಯ ಎರಡು ಬಾರಿ ಕಟಾವು ಮಾಡಿದ್ದು ₹1 ಲಕ್ಷ ಆದಾಯವಾಗಿದೆ. ಮುಂದೆ ಇನ್ನು 5-6 ಬಾರಿ ಕಟಾವು ಮಾಡಲಾಗುವುದು. ಇದರಿಂದ ₹ 5 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ’ ಎಂದು ರಮೇಶ ರಂಜೇರಿ ’ಪ್ರಜಾವಾಣಿ’ಗೆ ತಿಳಿಸಿದರು.
‘ಪಪ್ಪಾಯಿ ಬೆಳೆ ಲಾಭ ತಂದುಕೊಟ್ಟಿದೆ. ಮಿಶ್ರ ಬೇಸಾಯ ಮಾಡಿದ್ದು ಅನುಕೂಲವಾಗಿದೆ. ಎಲ್ಲ ಬೆಳೆಗಳಿಂದಲೂ ಆದಾಯ ಬಂದಿದೆ. ಕಬ್ಬು, ಇನ್ನಿತರ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ, ಪಪ್ಪಾಯಿಗೆ ಹೆಚ್ಚಿನ ನೀರು ಬೇಕಾಗುವುದಿಲ್ಲ ಎನ್ನುವುದು ನನ್ನ ಅನುಭವದ ಮಾತು’ ಎನ್ನುತ್ತಾರೆ.
ರೈತರು ಮಿಶ್ರ ಬೆಳೆಗೆ ಪ್ರಥಮ ಆದ್ಯತೆ ನೀಡಬೇಕು. ಕೃಷಿಯಲ್ಲಿ ಪ್ರಾಮಾಣಿಕತೆ, ಬೆಳೆದ ಬೆಳೆಗಳ ಬಗ್ಗೆ ನಂಬಿಕೆ ಮುಖ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದಾಗ ಲಾಭ ಗಳಿಸಲು ಸಾಧ್ಯವಿದೆ’ ಎನ್ನುತ್ತಾರೆ.
ಮಿಶ್ರ ಬೆಳೆ ಬೆಳೆಯುವುದರಿಂದ ರೈತರಿಗೆ ನಷ್ಟ ಉಂಟಾಗುವುದಿಲ್ಲ. ಒಂದಲ್ಲ ಒಂದು ಬೆಳೆಯಿಂದ ಲಾಭ ದೊರೆಯುವುದುರೇವಣಸಿದ್ಧ ಜಾಡರ್ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.