ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಹೊದಲೂರ, ತಡಕಲ್, ಖಜೂರಿ ಹಾಗೂ ಕಿಣ್ಣಿ ಸುಲ್ತಾನ ಗ್ರಾಮದಲ್ಲಿ ಸೋಮವಾರ ಪ್ರಚಾರ ಕೈಗೊಂಡರು.
ಸುಡುವ ಬಿಸಿಲಿನಲ್ಲಿ ಸ್ಥಳೀಯ ಮುಖಂಡರೊಂದಿಗೆ ಗ್ರಾಮದಲ್ಲಿ ಸಂಚರಿಸಿ ಮತಯಾಚಿಸಿದರು. ಆನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆ ದೇಶದ ಆಂತರಿಕ, ಬಾಹ್ಯ ರಕ್ಷಣೆಯ ಚುನಾವಣೆ ಆಗಿದೆ. ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ದೇಶದ ಎಲ್ಲಾ ಪ್ರಾಂತ, ಜನಾಂಗ, ಭಾಷೆಯವರು ಒಂದೇ ಸೂರಿನಡಿ ಬಂದು ವಿಶ್ವಕ್ಕೆ ನಮ್ಮ ಶಕ್ತಿ ತೋರಿಸುವ ಚುನಾವಣೆಯಾಗಿದೆ. ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿ ಮೋದಿಯವರನ್ನು ಮೂರನೇ ಸಲ ಪ್ರಧಾನಿ ಮಾಡಬೇಕು’ ಎಂದು ಕೋರಿದರು.
‘ಕಳೆದ ಹತ್ತು ವರ್ಷಗಳಲ್ಲಿ ಭಾರತವು ಆರ್ಥಿಕತೆಯಲ್ಲಿ, ಭದ್ರತೆಯಲ್ಲಿ, ಮಹಿಳೆಯರ ಸ್ವಾಭಿಮಾನ ಎತ್ತಿ ಹಿಡಿಯುವುದರಲ್ಲಿ, ಬಡವರ ಆರೋಗ್ಯ ಕಾಪಾಡುವುದರಲ್ಲಿ, ಯುವಕರಿಗೆ ಉದ್ಯೋಗ ಹಾಗೂ ದೇಶಭಕ್ತಿ ತುಂಬಲು ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡಿದೆ. ನಾನು ಸಂಸದನಾದ ಮೇಲೆ ಆಳಂದ ತಾಲ್ಲೂಕಿಗೆ ಹೆಚ್ಚಿನ ಅನುದಾನ ನೀಡಿ ರುವೆ. ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿರುವೆ’ ಎಂದರು.
ಕಲಬುರಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಮಾತನಾಡಿ, ‘ಮೋದಿಯವರ ಜೊತೆ ಇರುವ ಭಗವಂತ ಖೂಬಾ ಬೇಕು. ರಾಹುಲ್ ಗಾಂಧಿ ಜೊತೆಗಿರುವ ಖಂಡ್ರೆ ಬೇಡ. ಖಂಡ್ರೆ ಪರಿವಾರದವರ ಕೊಡುಗೆ ಏನೂ ಇಲ್ಲ’ ಎಂದು ಟೀಕಿಸಿದರು.
ಬಿಜೆಪಿ ಚುನಾವಣೆ ಉಸ್ತುವಾರಿ ಅಮರನಾಥ ಪಾಟೀಲ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಮುಖಂಡರಾದ ಬಸವರಾಜ ಆರ್ಯ, ಹಣಮಂತರಾವ ಮಾಲಾಜಿ, ಆನಂದ ಪಾಟೀಲ, ಸಿದ್ದು ಪಾಟೀಲ, ಮಹೇಶ ಸೂರೆ, ಸಂಜಯ ಮಿಸ್ಕಿನ್, ವಿಜಯಕುಮಾರ ಪಾಟೀಲ ಗಾದಗಿ, ಶರಣು ಕುಂಬಾರ, ಕಲ್ಯಾಣಪ್ಪ ಸಾಹುಕಾರ್, ಸಂಗಮೇಶ ಮೂರಮೆ, ಚಂದ್ರಶೇಖರ ಹಿರೇಮಠ, ಆದಿನಾಥ ಹೀರಾ, ಸಿದ್ದರಾಮ ವಾಘಮಾರೆ, ಶೀವಪ್ಪ ಘಂಟೆ, ಶಿವಪ್ಪ ವಾರೀಕ್, ಸುನಿಲ್ ಭಾವಿ, ನಾಗರಾಜ ಕೋರೆ, ಶಿವಪುತ್ರಪ್ಪ ಬೆಳ್ಳೆ, ಮೆಹಬೂಬ್ ಶೇಖ್ ತೇಲಾಕೂಣಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.