ADVERTISEMENT

ನಿಮ್ಮ ನಾಯಕರ ಹೆಸರು ಹೇಳಲು ನಾಚಿಕೆಯೇ?: ಖಂಡ್ರೆಗೆ ಭಗವಂತ ಖೂಬಾ ತಿರುಗೇಟು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 15:57 IST
Last Updated 19 ಆಗಸ್ಟ್ 2023, 15:57 IST
ಈಶ್ವರ ಖಂಡ್ರೆ, ಭಗವಂತ ಖೂಬಾ
ಈಶ್ವರ ಖಂಡ್ರೆ, ಭಗವಂತ ಖೂಬಾ   

ಬೀದರ್: ‘ನಾನು ಪ್ರಧಾನಿ ನರೇಂದ್ರ ಮೋದಿ ಅವರ ಗಾಳಿಯಲ್ಲೇ ಗೆದ್ದಿರುವೆ. ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದ ನಿಮಗೆ ನಿಮ್ಮ ನಾಯಕರ ಹೆಸರು ಹೇಳಲು ನಾಚಿಕೆಯೇ?’

ಹೀಗೆಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಪ್ರಶ್ನಿಸಿದ್ದಾರೆ.

‘ಗಾಳಿಯಲ್ಲಿ ಬಂದವರು ಗಾಳಿಯಲ್ಲೇ ಹೋಗುತ್ತಾರೆ ಎನ್ನುವ ಹೇಳಿಕೆ ಕೊಡುವ ಮೂಲಕ ಖಂಡ್ರೆ ಅವರು ತಮ್ಮ ಅಹಂಕಾರ ಹಾಗೂ ದರ್ಪದ ವ್ಯಕ್ತಿತ್ವವನ್ನು ಮತ್ತೊಮ್ಮೆ ತೋರಿದ್ದಾರೆ. ಇತರರನ್ನು ಕನಿಷ್ಠ ಎಂದು ಭಾವಿಸುವುದು ಕಾಂಗ್ರೆಸ್ ಸಂಸ್ಕೃತಿ. ವಂಶ ಪರಂಪರೆಯಿಂದ ಬಂದವರು ನಮ್ಮಂಥ ಕಾರ್ಯಕರ್ತನ ಹಂತದಿಂದ ಬೆಳೆದ ವ್ಯಕ್ತಿಯನ್ನು ಕೀಳಾಗಿ ನೋಡುವುದು ಸಹಜ’ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

ADVERTISEMENT

‘ಮೋದಿ ನನ್ನ ನಾಯಕರು. ನನ್ನ ಹೆಮ್ಮೆ. ಸಂಸದನಾಗಿ ಅವರ ಆಶಯದಂತೆ ಜನರ ಕಷ್ಟ–ಸುಖಕ್ಕೆ ಸ್ಪಂದಿಸುತ್ತಿದ್ದೇನೆ. ಓಲೈಕೆ ರಾಜಕಾರಣ ಮಾಡಿಲ್ಲ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇನೆ. ‘ಪಪ್ಪು’ ನಿಮ್ಮ ಪಕ್ಷದ ನಾಯಕ. ನೀವು ವೋಟ್ ಬ್ಯಾಂಕ್ ರಾಜಕಾರಣ, ಹಣ ಹಾಗೂ ದಬ್ಬಾಳಿಕೆಯಿಂದ ಗೆಲ್ಲುತ್ತೀರಿ’ ಎಂದು ಟೀಕಿಸಿದ್ದಾರೆ.

‘ನಾನು ಹೋಗುವುದು ಭ್ರಷ್ಟರಿಗೆ, ಸ್ವಜನ ಪಕ್ಷಪಾತಿಗಳಿಗೆ ಹಾಗೂ ಓಲೈಕೆ ರಾಜಕಾರಣ ಮಾಡುವವರಿಗೆ ಬೇಕಾಗಿರುವ ವಿಷಯವೇ ಆಗಿದೆ’ ಎಂದು ಹೇಳಿದ್ದಾರೆ.

‘ಖಂಡ್ರೆ ಅವರೇ, ನಿಮ್ಮಂತೆ ತಂದೆ, ಅಣ್ಣ ಹಾಕಿದ ರಾಜಕೀಯ ಬುನಾದಿ ಮೇಲೆ ಬೆಳೆದಿಲ್ಲ. ಗೂಂಡಾಗಿರಿ, ಶೋಷಣೆ, ದಬ್ಬಾಳಿಕೆ ಮಾಡಿ ರಾಜಕೀಯಕ್ಕೆ ಬಂದಿಲ್ಲ. ನನಗೆ ನೇರವಾಗಿ ವೇದಿಕೆ ಮೇಲೆ ಸ್ಥಳ ಸಿಕ್ಕಿಲ್ಲ. 3 ದಶಕಗಳ ಪಕ್ಷ ನಿಷ್ಠೆ, ಜನರ ಪ್ರೀತಿಯಿಂದ ಸಂಸದ ಸ್ಥಾನ ದೊರಕಿದೆ’ ಎಂದು ಹೇಳಿದ್ದಾರೆ.

‘ನಾನು ಬಂದಿರುವುದು ಪಾರಂಪರಿಕ ರಾಜಕಾರಣ ಮಾಡುವುದಕ್ಕಲ್ಲ. ನಿಮ್ಮ ತಂದೆ, ಅಣ್ಣ, ಈಗ ನೀವು, ಮುಂದೆ ನಿಮ್ಮ ಮಗ... ಹೀಗೆ ನಿಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರಬೇಕು. ಏಕೆ, ನಿಮ್ಮ ಪಕ್ಷದ ಕಾರ್ಯಕರ್ತರಿಗೆ ನಾಯಕರಾಗುವ ಯೋಗ್ಯತೆ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಇನ್ನೆಷ್ಟು ದಿನ ನೀವೇ ರಾಜಕಾರಣದಲ್ಲಿರುತ್ತೀರಿ?’

‘ಇನ್ನೆಷ್ಟು ದಿನ ನಿಮ್ಮ ಕುಟುಂಬವೇ ರಾಜಕಾರಣ ಮಾಡಬೇಕು? ನಿಮ್ಮ ಪಕ್ಷದ ಕಾರ್ಯಕರ್ತರು ಕೇವಲ ನಿಮಗಾಗಿ ದುಡಿಯಬೇಕೆ? ಅವರೇನು ಗುಲಾಮರೇ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕೇಳಿದ್ದಾರೆ. ‘ರಾಜಕಾರಣ ಜನಸೇವೆ ಎಂದು ಭಾವಿಸಿದ್ದೇನೆ. ಎಷ್ಟು ಕಾಲ ಎನ್ನುವುದು ಮುಖ್ಯವಲ್ಲ ಎಷ್ಟರ ಮಟ್ಟಿಗೆ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎನ್ನುವುದು ಮುಖ್ಯ. ರಾಜಕೀಯದಲ್ಲಿ ಎಷ್ಟೇ ಕಾಲ ಸೇವೆ ಮಾಡಿದರೂ ಬಿಡುವಾಗ ನನ್ನ ಸೇವೆಯ ಗುರುತು ಹಾಗೂ ಆದರ್ಶ ಬಿಟ್ಟು ಹೋಗುವೆ. ಅಧಿಕಾರಕ್ಕೆ ಜೋತು ಬೀಳುವವ ನಾನಲ್ಲ. ಅಧಿಕಾರ ಮಕ್ಕಳಿಗೆ ಹಸ್ತಾಂತರಿಸುವ ಸೀಮಿತ ರಾಜಕಾರಣ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ‘ಖಂಡ್ರೆ ಅವರ ಕೆಟ್ಟ ಸಂಸ್ಕೃತಿಯನ್ನು ಧಿಕ್ಕರಿಸುತ್ತೇನೆ. ಟೀಕೆ ಟಿಪ್ಪಣಿಗೆ ಕುಗ್ಗದೆ ಜನ ಸೇವೆ ಮುಂದುವರಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.