ADVERTISEMENT

ಬೀದರ್‌ | ಕೃಷ್ಣನ ಪಲ್ಲಕ್ಕಿ ಮೆರವಣಿಗೆ: ವೇದಿಕೆ ಕಾರ್ಯಕ್ರಮ ನೀರಸ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 15:45 IST
Last Updated 26 ಆಗಸ್ಟ್ 2024, 15:45 IST
ಸಚಿವರಾದ ಈಶ್ವರ ಬಿ.ಖಂಡ್ರೆ, ರಹೀಂ ಖಾನ್‌ ಅವರು ಬೀದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷ್ಣನ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು
ಸಚಿವರಾದ ಈಶ್ವರ ಬಿ.ಖಂಡ್ರೆ, ರಹೀಂ ಖಾನ್‌ ಅವರು ಬೀದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷ್ಣನ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು   

ಬೀದರ್‌: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದಲ್ಲಿ ಸೋಮವಾರ ಶ್ರೀಕೃಷ್ಣನ ಪಲ್ಲಕ್ಕಿ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಮುಖ ಮಾರ್ಗಗಳ ಮೂಲಕ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದವರೆಗೆ ಶ್ರದ್ಧಾ, ಭಕ್ತಿಯಿಂದ ಕೃಷ್ಣನ ಭಕ್ತರು ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷ್ಣನ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪೌರಾಡಳಿತ ಸಚಿವ ರಹೀಂ ಖಾನ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್‌ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹಾಜರಿದ್ದರು.

ADVERTISEMENT

ಬಳಿಕ ನಗರದ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಸಚಿವರು ಆ ಕಡೆಗೆ ಸುಳಿಯಲಿಲ್ಲ. ಜಿಲ್ಲಾಧಿಕಾರಿ ಅವರು ಕೆಲವೇ ನಿಮಿಷಗಳಲ್ಲಿ ವೇದಿಕೆಗೆ ಬರುತ್ತಾರೆ ಎಂದು ನಿರೂಪಕರು ಹಲವು ಸಲ ಘೋಷಿಸಿದರೂ ಅವರು ಕೊನೆಯವರೆಗೆ ಬರಲೇ ಇಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇನ್ನು, ಸಭಾ ಭವನದಲ್ಲಿ ಜನರಿಗಿಂತ ಶಾಲಾ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅರ್ಧ ಸಭಾ ಭವನ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ನಾಟ್ಯಶ್ರೀ ನೃತ್ಯಾಲಯ, ನೂಪುರ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಿಕಂದರಬಾದ್‌ ಇಸ್ಕಾನ್‌ ದೇವಸ್ಥಾನದ ನಿರ್ದೇಶಕ ಕೃಷ್ಣ ಚೈತನ್ಯದಾಸ ಪ್ರಭು ಉಪನ್ಯಾಸ ನೀಡಿ,‘ಕೃಷ್ಣನ ಜೀವನ ನಮಗೆಲ್ಲರಿಗೂ ಆರ್ದಶವಾಗಿದೆ. ಅವರ ಬದುಕಿನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ಮುನ್ನಡೆಯಬೇಕು’ ಎಂದು ಹೇಳಿದರು.

ಭೂಮಿ ಮೇಲಿನ ಅನಾಚರ, ಅಧರ್ಮ ನೋಡಿ ಕೃಷ್ಣ ಹಲವು ಅವತಾರಗಳಲ್ಲಿ ಧರೆಗೆ ಬಂದು ದುಷ್ಟರನ್ನು ಸಂಹರಿಸಿ ಧರ್ಮ ಸ್ಥಾಪನೆ ಮಾಡಿದ್ದ. ಆತನ ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬೀದರ್‌ನಲ್ಲಿ ಕೃಷ್ಣನ ಪಲ್ಲಕ್ಕಿ ಮೆರವಣಿಗೆ ನಡೆಯಿತು

ಇಸ್ಕಾನ್ ದೇವಸ್ಥಾನದ ಪ್ರಮುಖ ನಿತೀಶ ದೇಶಮುಖ ಮಾತನಾಡಿ,‘ಮಾನವ ಕುಲ ಕೋಟಿಯ ಉದ್ಧಾರಕ್ಕೆ ಕೃಷ್ಣ ಈ ನೆಲದ ಮೇಲೆ ಹುಟ್ಟಿ ಬಂದಿದ್ದ. ಅವನ ಸಂದೇಶಗಳು ಶ್ರೇಷ್ಠವಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಕೃಷ್ಣ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಗನ್ನಾಥ, ಗೌರವ ಅಧ್ಯಕ್ಷ ರಾಮಕೃಷ್ಣ ಸಾಳೆ, ಜಗನ್ನಾಥ ದೇವಸ್ಥಾನದ ಪ್ರಮುಖರಾದ ಶಿವರಾಮ ಜೋಶಿ, ಪಾಂಡುರಂಗ ಮಹಾರಾಜ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಹಾಜರಿದ್ದರು. ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.