ADVERTISEMENT

ಗ್ರಾಮ ವಾಸ್ಯವ್ಯದಿಂದ ಅಧಿಕಾರಿಗಳಿಗೆ ಹೊಸ ಅನುಭವ: ಸಿಎಂ 

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 6:49 IST
Last Updated 28 ಜೂನ್ 2019, 6:49 IST
ಬೀದರ್ ಜಿಲ್ಲೆ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದರು.
ಬೀದರ್ ಜಿಲ್ಲೆ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದರು.   

ಬಸವಕಲ್ಯಾಣ (ಬೀದರ್ ಜಿಲ್ಲೆ):ತಾಲ್ಲೂಕಿನ ಉಜಳಂಬದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ಬೆಂಗಳೂರಿಗೆ ಪ್ರಯಾಣಿಸಿದರು.

ಮುಖ್ಯಮಂತ್ರಿಗಳ ಜನತಾ ದರ್ಶನ ಗುರುವಾರ ರಾತ್ರಿ 9.30ಕ್ಕೆ ಮುಗಿಯಿತು. ಶಾಲಾ ಮಕ್ಕಳು ಮತ್ತು ವಿವಿಧ ಕಲಾ ತಂಡಗಳಿಂದ ರಾತ್ರಿ 12 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಸಿಎಂ ಶಾಲಾ ಕೋಣೆಯಲ್ಲಿ ಮಲಗಿಕೊಂಡರು.

ಬೆಳಿಗ್ಗೆ 6.15 ಎದ್ದ ಅವರು ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ, ಶಾಸಕ ಬಿ.ನಾರಾಯಣರಾವ್ ಇದ್ದರು.ನಂತರ ಪೊಲೀಸ್ ಗೌರವ ಸ್ವೀಕರಿಸಿಕೊಂಡು ಬಸವಕಲ್ಯಾಣ ಮಾರ್ಗದ ಮೂಲಕ ಕಾರ್ ನಲ್ಲಿ ಬೀದರ್ ವಿಮಾನ ನಿಲ್ದಾಣಕ್ಕೆ ಹೋದರು.

ADVERTISEMENT

ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮದಂತೆ ಸಮೀಪದ ಧಾಮೂರಿ ಗ್ರಾಮಕ್ಕೆ ವಾಕಿಂಗ್ ಹೋಗಿ ಚಹಾ, ಬಿಸ್ಕಿಟ್ ಸೇವಿಸಬೇಕಿತ್ತು. ಆದರೆ ಅವರು ವಾಕಿಂಗ್ ಹೋಗಲಿಲ್ಲ. ಇದರಿಂದಾಗಿ ಅವರ ಬರುವಿಕೆಗೆ ಸಿದ್ದತೆ ಮಾಡಿಕೊಂಡಿದ್ದ ಧಾಮೂರಿ ಗ್ರಾಮಸ್ಥರು ನಿರಾಶೆಗೊಂಡರು. ಧಾಮೂರಿ ಚಿಕ್ಕ ಗ್ರಾಮವಾದರೂ ಚೊಕ್ಕದಾಗಿ ಸಿಂಗರಿಸಿಕೊಂಡು ಸಿಎಂ ಸ್ವಾಗತಕ್ಕೆ ಸಿದ್ದವಾಗಿತ್ತು. ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮಸ್ಥರು ಗುಂಪುಗೂಡಿದ್ದರು. ಬೆಳಿಗ್ಗೆಯೇ ಕೆಲ ಮುಖಂಡರು ಕೂಡ ಅಲ್ಲಿ ಹಾಜರಿದ್ದರು. ಸಿಎಂ ಬರಲಿಲ್ಲ ಆದ್ದರಿಂದ ತಯಾರಿಸಿದ್ದ ಚಹಾದೊಂದಿಗೆಬಿಸ್ಕಿಟ್ ಸವಿದಜನರು ಸೇವಿಸಿ ಮನೆಗಳಿಗೆ ಮರಳಿದರು.

ಗ್ರಾಮ ವಾಸ್ಯವ್ಯದಿಂದ ಅಧಿಕಾರಿಗಳಿಗೆ ಹೊಸ ಅನುಭವ: ಸಿಎಂ

ಉಜಳಂಬ: ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಅಧಿಕಾರಿಗಳಿಗೆ ಒಂದು ಹೊಸ ಅನುಭವ ಕೊಡುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯಿಂದ ಜಿಲ್ಲಾಧಿಕಾರಿವರೆಗಿನ ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಜನರ ಜೊತೆಗಿದ್ದು ತಾಳ್ಮೆಯಿಂದ ಜನರ ನೋವು ಆಲಿಸುವುದನ್ನು, ಜನರು ಬದಲಾವಣೆ ಆಗುವದನ್ನು ನಾನು ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕಾಣುತ್ತಿದ್ದೇನೆ ಎಂದು ಅವರು ತಿಳಿಸಿದರು.

ಜನತಾದರ್ಶನದಲ್ಲಿ ಹಾಗೂ ಅಹವಾಲು ಆಲಿಕೆಯಲ್ಲಿ ಅರ್ಜಿ ಸಲ್ಲಿಸಿದ ಜನರ ನೋವುಗಳಿಗೆ ಸ್ಪಂದಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ಸಾಮಾಜಿಕ ನ್ಯಾಯದ ಬಗ್ಗೆ ಚರ್ಚಿಸುವುದು ನಮ್ಮ ಕರ್ತವ್ಯ. ಗ್ರಾಮವಾಸ್ತವ್ಯ ಕಾರ್ಯಕ್ರಮ ರೂಪಿಸುವ ಮೂಲಕ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ತಿಳಿಸಿದರು.

ಫಲಾನುಭವಿಗಳಿಗೆ ಸವಲತ್ತು ವಿತರಣೆ

ಯಾದಗಿರಿ, ರಾಯಚೂರು ಹಾಗೂ ಬೀದರ್ಜಿಲ್ಲೆಗಳಲ್ಲಿ ಮಾಡಿದ ಗ್ರಾಮವಾಸ್ತವ್ಯದಲ್ಲಿ ಬಂದ ಮನವಿಗಳ ಪೈಕಿ ಆಯಾ ಪ್ರದೇಶಗಳ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳು ಕೆಲವು ಇವೆ. ಸಾವಿರಾರು ಜನರು ಕುಟುಂಬದಲ್ಲಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ನಾವು ಗಮನ ಕೊಡುತ್ತೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ತಾಯಿ ಹೃದಯದಿಂದ ಕೆಲಸ ಮಾಡಿರುವುದು ಕೂಡ ನಮ್ಮ ಬಲವಾಗಿದೆ. ಇಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ಕಚೇರಿಯಿಂದ ನೇರವಾಗಿ ಸೌಕರ್ಯ ಸಿಗಲಿದೆ ಎಂದು ತಿಳಿಸಿದರು.

2006ರಲ್ಲಿ ಇಷ್ಟು ದೊಡ್ಡಮಟ್ಟದ ಗ್ರಾಮವಾಸ್ತವ್ಯ ನಡೆದಿರಲಿಲ್ಲ. ಈ ಹಿಂದೆ ನಾವು ಹಳ್ಳಿಗೆ ಹೋಗೋದೇ ರಾತ್ರಿ 1 ಗಂಟೆಯಾಗುತ್ತಿತ್ತು. ಬರೀ ಅಧಿಕಾರಿಗಳೇ ಅರ್ಜಿ ಪಡೆಯುತ್ತಿದ್ದರು. ಈ ಹಿಂದೆ ನಡೆದ ಗ್ರಾಮವಾಸ್ತವ್ಯ ವೇಳೆ ಪರಿಹಾರ ಪಡೆದುಕೊಂಡವರು ಅದನ್ನು ಈಗಲೂ ನೆನಪಿಸುವುದು ಈಗ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದ ವೇಳೆ ಗೊತ್ತಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿಸುಮಾರು 4 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ.ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಸೂಚಿಸಲಾಗಿದೆ. ಉಳಿದ ಎಲ್ಲಾ ಮನವಿಗಳಿಗೆ ಕಾಲಮಿತಿಯ ಒಳಗಾಗಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ನುಡಿದರು.

ಬೀದರ್ನಗರದಲ್ಲಿ ಕನ್ನಡ ಭವನನಿರ್ಮಾಣಕ್ಕೆ₹1 ಕೋಟಿ,ತುಳಜಾಪುರ ಧಾರ್ಮಿಕ ಕ್ಷೇತ್ರದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ₹5 ಕೋಟಿ,ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು.ಕಾರಂಜಾ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲು ಮನವಿಗಳು ಬಂದಿದೆ. ಈ ಕುರಿತು ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ನಾಲ್ಕೈದು ತಿಂಗಳುಗಳ ಒಳಗಾಗಿ ಎಲ್ಲಾ 30 ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನಡೆಸಲಾಗುವುದು.ಈ ಎಲ್ಲ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗುವುದು ಮಾತ್ರವಲ್ಲದೆ ಎಲ್ಲಾ ಕಾಮಗಾರಿಗಳನ್ನು ತಕ್ಷಣ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಔರಾದ್ಕರ್ವರದಿ ಜಾರಿ ಕುರಿತಾಗಿ ಈಗಾಗಲೇ ಹಣಕಾಸು ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಲಾಗಿದೆ. ಈ ಕುರಿತು ಮುಂದಿನ ಹತ್ತು ಹದಿನೈದು ದಿನಗಳ ಒಳಗಾಗಿ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಡವಂಚಿ ಮಾದರಿಯಲ್ಲಿ ರಾಜ್ಯದ ಹಳ್ಳಿಗಳ ಅಭಿವೃದ್ಧಿ

ಮಹಾರಾಷ್ಟ್ರದ ಮರಾಠವಾಡ ವ್ಯಾಪ್ತಿಯ ಕಡವಂಚಿ ಗ್ರಾಮದ ಅಭಿವೃದ್ಧಿ ಮಾದರಿಯ ಮಹತ್ವಾಕಾಂಕ್ಷಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಕೂಡ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇಂತಹ ಬರಗಾಲದಲ್ಲೂ ಅಲ್ಲಿನ ಜನ ನೀರು ಉಳಿಸಿಕೊಂಡಿದ್ದಾರೆ‌. ಅವರ ಆದಾಯದ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ಅಂತಹ ವಾತಾವರಣವನ್ನು ಇಲ್ಲಿ ಕೂಡ ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು. ಗ್ರಾಮವಾಸ್ತವ್ಯ ಕಾರ್ಯಕ್ರಮ ಹೊರತುಪಡಿಸಿ ಹಲವಾರು ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇನೆ ಎಂದು ಅವರು ಘೋಷಿಸಿದರು.

ಬರೀ ಸರ್ಕಾರದಿಂದ ಕಾರ್ಯಕ್ರಮ ಕೊಟ್ಟರೆ ಆಗುವುದಿಲ್ಲ. ಜನರ ಪಾಲ್ಗೊಳ್ಳುವಿಕೆ ಕೂಡ ಮುಖ್ಯ. ರೈತರು ಕೃಷಿ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ವಿಷಯದಲ್ಲಿ ರೈತರಿಗೆ ಮಾದರಿಯಾಗಲಿ ಎನ್ನುವ ಕಾರಣಕ್ಕೆ ವಾರ್ತಾ ಇಲಾಖೆಯಿಂದ ಮಹಾರಾಷ್ಟ್ರದ ಮರಾಠವಾಡದ ಕಡವಂಚಿ ಹಳ್ಳಿಯ ಜಲಕ್ರಾಂತಿಯ ಚಿತ್ರಣದ ವಿಡಿಯೊವನ್ನು ತೋರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಯಾವ ಹಳ್ಳಿಯಲ್ಲಿ ನೂರು ಜನರ ಕೋ ಆಪರೇಟಿವ್ ಪಾರ್ಮ ಮಾಡಿಕೊಳ್ಳುತ್ತಾರೋ ಅವರಿಗೆ ಒಂದು ಕೋಟಿ ರೂ.ಗಳ ಸಬ್ಸಿಡಿಯನ್ನು ಸರಕಾರದಿಂದ ನೀಡುತ್ತಿದ್ದೇವೆ ಎಂದರು.

ಈ ವೇಳೆ ಸಚಿವರಾದ ಬಂಡೆಪ್ಪ ಖಾಶೆಂಪೂರ, ರಾಜಶೇಖರ ಪಾಟೀಲ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ನಾರಾಯಣರಾವ್ ಸೇರಿದಂತೆ ಹಲವುಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.