ADVERTISEMENT

ಜನವಾಡ: ಕಾರ್ಮಿಕರ ಮಕ್ಕಳಿಗೆ ‘ಕೂಸಿನ ಮನೆ’ ಆಸರೆ

ಬೀದರ್ ತಾಲ್ಲೂಕಿನಲ್ಲಿ ಶೇ 56 ರಷ್ಟು ಮಹಿಳಾ ಕಾರ್ಮಿಕರು

ನಾಗೇಶ ಪ್ರಭಾ
Published 19 ಮೇ 2024, 5:13 IST
Last Updated 19 ಮೇ 2024, 5:13 IST
ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮದಲ್ಲಿ ಮಹಿಳಾ ಕಾರ್ಮಿಕರ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಶಿಶು ಆರೈಕೆದಾರರು
ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮದಲ್ಲಿ ಮಹಿಳಾ ಕಾರ್ಮಿಕರ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಶಿಶು ಆರೈಕೆದಾರರು   

ಜನವಾಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಮಹಿಳಾ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ.

ಗ್ರಾಮ ಪಂಚಾಯಿತಿಗೆ ಒಂದರಂತೆ ಬೀದರ್ ತಾಲ್ಲೂಕಿನಲ್ಲಿ ಆರಂಭಿಸಿರುವ 31 ಕೂಸಿನ ಮನೆಗಳು ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರ ಆರು ತಿಂಗಳಿಂದ ಮೂರು ವರ್ಷದ ಒಳಗಿನ ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡಿವೆ.

ಅಂಗನವಾಡಿ, ಶಾಲೆ, ಬಳಕೆಯಲ್ಲಿ ಇಲ್ಲದ ಸರ್ಕಾರಿ ಕಚೇರಿಗಳಲ್ಲಿ ನಾಲ್ಕು ತಿಂಗಳ ಹಿಂದೆ ಕೂಸಿನ ಮನೆ ಶುರು ಮಾಡಲಾಗಿದೆ. ಆರಂಭದಲ್ಲಿ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಕೂಸಿನ ಮನೆಗೆ ಬಂದಿರಲಿಲ್ಲ. ಪಂಚಾಯಿತಿ ಹಾಗೂ ಶಿಶು ಆರೈಕೆದಾರರ ಜಾಗೃತಿಯ ಫಲವಾಗಿ ಮಹಿಳಾ ಕಾರ್ಮಿಕರು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಲಾರಂಭಿಸಿದ್ದಾರೆ. ಪರಿಣಾಮವಾಗಿ, ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.

ADVERTISEMENT

ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮದ ಕೂಸಿನ ಮನೆಯಲ್ಲಿ ಪ್ರಾರಂಭದಲ್ಲಿ ಕಾರ್ಮಿಕರ ಐದು ಮಕ್ಕಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದರು. ಈಗ ಸಂಖ್ಯೆ 25ಕ್ಕೆ ಏರಿದೆ. ಜನವಾಡ, ಶ್ರೀಮಂಡಲ್, ಬಗದಲ್, ಸಿಂದೋಲ್, ಕಾಡವಾದ, ಚಿಟ್ಟಾ, ಬರೂರ, ಗಾದಗಿ ಗ್ರಾಮಗಳಲ್ಲೂ ಮಕ್ಕಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ.

ಬೀದರ್ ತಾಲ್ಲೂಕಿನ ಬಹುತೇಕ ಕೂಸಿನ ಮನೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಕೂಸಿನ ಮನೆಗಳಲ್ಲಿ ಸರಾಸರಿ 8 ರಿಂದ 15 ಮಕ್ಕಳು ಇದ್ದಾರೆ. ಮರಕಲ್ ಹಾಗೂ ಅಲಿಯಾಬಾದ್(ಜೆ) ಗ್ರಾಮಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ವಿರಳ ಇದೆ. ಹೀಗಾಗಿ ಅಲ್ಲಿ ಸಹಜವಾಗಿಯೇ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಹೇಳುತ್ತಾರೆ ಬೀದರ್ ತಾಲ್ಲೂಕು ಪಂಚಾಯಿತಿಯ ನರೇಗಾ ಸಹಾಯಕ ನಿರ್ದೇಶಕಿ ಲಕ್ಷ್ಮಿ ಬಿರಾದಾರ.

ಬೀದರ್ ತಾಲ್ಲೂಕಿನಲ್ಲಿ ಜಾಬ್ ಕಾರ್ಡ್ ಹೊಂದಿದ 46 ಸಾವಿರ ನರೇಗಾ ಕಾರ್ಮಿಕರು ಇದ್ದಾರೆ. ಇವರಲ್ಲಿ ಶೇ 56 ರಷ್ಟು ಮಹಿಳೆಯರು ಇದ್ದಾರೆ. ಮಹಿಳೆಯರಿಗೆ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಲು ಸಮಸ್ಯೆಯಾಗುತ್ತಿತ್ತು. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದವರು ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದರು. ಕೂಸಿನ ಮನೆಯಿಂದಾಗಿ ಅವರು ನೆಮ್ಮದಿಯಿಂದ ಕೆಲಸಕ್ಕೆ ಹೋಗುತ್ತಿದ್ದಾರೆ. ಕೂಸಿನ ಮನೆಯಲ್ಲಿ ತಮ್ಮ ಮಕ್ಕಳು ಸುರಕ್ಷಿತವಾಗಿರಲಿದ್ದಾರೆ ಎನ್ನುವ ವಿಶ್ವಾಸ ಅವರಲ್ಲಿ ಮೂಡಿದೆ ಎಂದು ಹೇಳುತ್ತಾರೆ.

ಕೂಸಿನ ಮನೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು, ತೊಟ್ಟಿಲು, ಹಾಸಿಗೆ, ಹೊದಿಕೆ, ಆಟ ಹಾಗೂ ಪಾಠದ ಪರಿಕರ ಕೊಡಲಾಗುತ್ತಿದೆ. ತಾಯಿಯ ಕಡೆಗೆ ಅವರ ಗಮನ ಹರಿಯದಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿ ಕೂಸಿನ ಮನೆಯಲ್ಲಿ ನಾಲ್ವರು ಶಿಶು ಆರೈಕೆದಾರರು ಇದ್ದಾರೆ ಎಂದು ತಿಳಿಸುತ್ತಾರೆ.

ಗೋಡೆ ಮೇಲೆ ಬಗೆ ಬಗೆಯ ಚಿತ್ರ

ಕೂಸಿನ ಮನೆಯ ಗೋಡೆಗಳು ಬಗೆ ಬಗೆಯ ಚಿತ್ರಗಳಿಂದಾಗಿ ಮಕ್ಕಳ ಚಿತ್ತ ತಮ್ಮತ್ತ ಸೆಳೆಯುತ್ತಿವೆ. ಗೋಡೆ ಮೇಲೆ ಛೋಟಾ ಭೀಮ್ ಮೀನು ಕಪ್ಪೆ ಚಿಟ್ಟೆ ಮರ ಹಣ್ಣು ಹಂಪಲುಗಳ ಚಿತ್ರಗಳಿವೆ. ಕನ್ನಡ ಹಿಂದಿ ಇಂಗ್ಲಿಷ್ ವರ್ಣಮಾಲೆ ನಾಣ್ಣುಡಿ ಹಾಗೂ ಜಾನಪದ ಗೀತೆಗಳೂ ಇಲ್ಲಿ ಸ್ಥಾನ ಪಡೆದುಕೊಂಡಿವೆ. ‘ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ ಕೂಸು ಕಂದಯ್ಯ ಒಳ ಹೊರಗ ಆಡಿದರ ಬೀಸಣಿಗೆ ಗಾಳಿ ಸುಳಿದಾವ' ಎಂಬಿತ್ಯಾದಿ ಜಾನಪದ ಗೀತೆಗಳು ಗಮನ ಸೆಳೆಯುತ್ತಿವೆ.

ಶಿಶು ಆರೈಕೆದಾರರಿಗೆ ಸಮವಸ್ತ್ರ

ಶ್ರೀಮಂಡಲ್ ಗ್ರಾಮದ ಕೂಸಿನ ಮನೆಯ ಶಿಶು ಆರೈಕೆದಾರರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ಸಮವಸ್ತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗಿದೆ. ಪಂಚಾಯಿತಿಯಿಂದ ಕೂಸಿನ ಮನೆಗೆ ಮಕ್ಕಳ ಆರೈಕೆಗೆ ಎಲ್ಲ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಕೇರ್ ಟೇಕರ್ ಆಶಾರಾಣಿ ಖಂಡ್ರೆ ತಿಳಿಸಿದರು. ಕೂಸಿನ ಮನೆ ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 4 ರ ವರೆಗೆ ಕಾರ್ಯ ನಿರ್ವಹಿಸಲಿದೆ. ಬೇಸಿಗೆಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ 25 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಕೂಸಿನ ಮನೆಗಳು ಪುಟ್ಟ ಮಕ್ಕಳು ಇರುವ ಮಹಿಳಾ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ನೆಮ್ಮದಿಯಿಂದ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿವೆ.
-ಲಕ್ಷ್ಮಿ ಬಿರಾದಾರ, ಬೀದರ್ ತಾ.ಪಂ ನರೇಗಾ ಸಹಾಯಕ ನಿರ್ದೇಶಕಿ
ಖಾತ್ರಿ ಯೋಜನೆಯ ಕೆಲಸಕ್ಕೆ ಹೋಗುವ ಮಹಿಳಾ ಕಾರ್ಮಿಕರು ಮನೆಗೆ ಮರಳುವವರಿಗೆ ಮಕ್ಕಳಿಗೆ ಕೂಸಿನ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಲಾಗುತ್ತಿದೆ.
-ಆಶಾರಾಣಿ ಖಂಡ್ರೆ ಶ್ರೀಮಂಡಲ್, ಕೂಸಿನ ಮನೆ ಕೇರ್ ಟೇಕರ್
ಕೂಸಿನ ಮನೆಯಿಂದಾಗಿ ನರೇಗಾ ಯೋಜನೆಯಡಿ ಕೆಲಸ ಮಾಡುವ ನಮ್ಮ ಮಕ್ಕಳ ಲಾಲನೆ- ಪಾಲನೆಯ ಚಿಂತೆ ದೂರವಾಗಿದೆ.
-ರೇಖಾ ಶ್ರೀಮಂಡಲ್, ಕಾರ್ಮಿಕ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.