ADVERTISEMENT

ಬೀದರ್‌: ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯ ಕೊರತೆ

ಚಂದ್ರಕಾಂತ ಮಸಾನಿ
Published 12 ಸೆಪ್ಟೆಂಬರ್ 2021, 19:30 IST
Last Updated 12 ಸೆಪ್ಟೆಂಬರ್ 2021, 19:30 IST
ಬೀದರ್‌ನ ಜನವಾಡ ರಸ್ತೆಯ ‍ಪೆಟ್ರೋಲ್‌ ಬಂಕ್‌ನಲ್ಲಿರುವ ಏರ್‌ ಮಷಿನ್
ಬೀದರ್‌ನ ಜನವಾಡ ರಸ್ತೆಯ ‍ಪೆಟ್ರೋಲ್‌ ಬಂಕ್‌ನಲ್ಲಿರುವ ಏರ್‌ ಮಷಿನ್   

ಬೀದರ್‌: ಇಂದು ಪ್ರತಿಯೊಬ್ಬರ ಮನೆಯಲ್ಲಿ ಒಂದಿಲ್ಲೊಂದು ವಾಹನ ಇದ್ದೇ ಇದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಹಾಕಿಸಿಕೊಳ್ಳಲು ಹೋಗುವ ಗ್ರಾಹಕರಿಗೆ ಬಂಕ್‌ಗಳಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕು ಎನ್ನುವ ಮಾಹಿತಿಯೇ ಇಲ್ಲ. ಹೀಗಾಗಿ ಬಹುತೇಕ ಬಂಕ್‌ ಮಾಲೀಕರು ಹಣ ಉಳಿತಾಯ ಮಾಡಲು ಬಂಕ್‌ಗಳಲ್ಲಿ ಸೌಲಭ್ಯಗಳನ್ನೇ ಕಲ್ಪಿಸಿಲ್ಲ.

ಬಂಕ್‌ ಆವರಣದಲ್ಲಿ ಕಡ್ಡಾಯವಾಗಿ ಅಗ್ನಿ ನಂದಕ, ಮರಳು ಇಡಬೇಕು. ಬೈಕ್‌, ಕಾರುಗಳಿಗೆ ಸ್ಥಳದಲ್ಲೇ ಟೈರ್‌ಗಳಲ್ಲಿ ಗಾಳಿ ತುಂಬಿಸಲು ಏರ್‌ ಸರ್ವಿಸ್‌ ಕೊಡಬೇಕು ಎನ್ನುವ ನಿಯಮ ಇದೆ. ಜಿಲ್ಲೆಯ ಶೇಕಡ 90ರಷ್ಟು ಬಂಕ್‌ಗಳು ಗ್ರಾಹಕರಿಗೆ ಸಕಲ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿವೆ.

ಬಂಕ್‌ಗಳಲ್ಲಿ ನಿಯಮಾನುಸಾರ ಸೌಲಭ್ಯಗಳನ್ನು ಕಲ್ಪಿಸಿಕೊಡುವ ದಿಸೆಯಲ್ಲಿ ಬೀದರ್ ಜಿಲ್ಲಾಡಳಿತ 10 ವರ್ಷಗಳ ಅವಧಿಯಲ್ಲಿ ಒಂದು ಸಭೆಯನ್ನೂ ನಡೆಸಿಲ್ಲ. ಹೀಗಾಗಿ ಬಂಕ್‌ ಮಾಲೀಕರು ಸಹ ಗಂಭೀರವಾಗಿಲ್ಲ. ಒಟ್ಟಾರೆ ಗ್ರಾಹಕರೇ ತೊಂದರೆ ಅನುಭವಿಸಬೇಕಾಗಿದೆ.

ADVERTISEMENT

ಕೆಲ ಬಂಕ್‌ಗಳಲ್ಲಿ ಮಾಲೀಕರೇ ಪಂಕ್ಚರ್‌ ತೆಗೆಯುವ ವ್ಯಕ್ತಿಗಳಿಗೆ ಜಾಗ ಬಾಡಿಗೆ ಕೊಟ್ಟಿದ್ದಾರೆ. ಅವರು ಏರ್‌ ಕಾಂಪ್ರೆಸರ್ ಇಟ್ಟು ವ್ಯವಹಾರ ಮಾಡುತ್ತಿದ್ದಾರೆ. ಬೈಕ್‌ ಚಕ್ರಗಳಿಗೆ ಗಾಳಿ ತುಂಬಲು ₹ 10 ಹಾಗೂ ಕಾರುಗಳಿಗೆ ₹ 20 ಪಡೆಯುತ್ತಿದ್ದಾರೆ.

ನೆಲದಡಿಯಲ್ಲಿ ಇರುವ ಟ್ಯಾಂಕ್ ಹಾಗೂ ಪೈಪ್ ಲೈನ್ ಸೋರಿಕೆ ಆಗುತ್ತಿದೆಯೇ ಎನ್ನುವ ಕುರಿತು ಕನಿಷ್ಠ ಏಳು ವರ್ಷಕ್ಕೊಮ್ಮೆ ಪರಿಶೀಲಿಸಬೇಕು. ತಿಂಗಳಿಗೆ ಮುನ್ನೂರು ಕಿಲೋಲೀಟರ್ ಗಿಂತ ಹೆಚ್ಚು ಮಾರಾಟ ಮಾಡುವ ಬಂಕ್‌ಗಳಲ್ಲಿ ತೈಲ ಕಂಪೆನಿಗಳು ಎರಡು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು.ಪ್ರಸ್ತುತ ಇದಾವುದೂ ನಡೆಯುತ್ತಿಲ್ಲ.

‘ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ತುಂಬಿ ಗ್ರಾಹಕರಿಗೆ ಮೋಸ ಮಾಡುತ್ತಿರುವ ದೂರುಗಳು ಬರುತ್ತಲೇ ಇವೆ. ಜಿಲ್ಲಾಡಳಿತ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ’ ಎಂದು ಗ್ರಾಹಕ ಇಮ್ರಾನ್‌ಅಲಿ ಹೇಳುತ್ತಾರೆ.

ಚಿಟಗುಪ್ಪದಲ್ಲಿ ಮೂರು, ತಾಲ್ಲೂಕಿನ ಬೆಳಕೇರಾದಲ್ಲಿ ಒಂದು, ನಿರ್ಣಾದಲ್ಲಿ ಎರಡು, ಮನ್ನಾಎಖ್ಖೆಳ್ಳಿಯಲ್ಲಿ ಎರಡು, ಮಂಗಲಗಿಯಲ್ಲಿ ಒಂದು ಪೆಟ್ರೋಲ್ ಬಂಕ್ ಗಳು ಇದ್ದರೂ ವಾಹನಗಳಿಗೆ ಗಾಳಿ ತುಂಬಿಸುವ ವ್ಯವಸ್ಥೆ ಇಲ್ಲ. ತೋರಿಕೆಗೆ ಮಾತ್ರ ‌ಯಂತ್ರ ಇಡಲಾಗಿದೆ. ನಿರ್ಣಾದ ಬಂಕ್‌ಗೆ ಮೇಲ್ಛಾವಣಿಯೇ ಇಲ್ಲ. ಬಸವಕಲ್ಯಾಣ, ಭಾಲ್ಕಿ, ಹುಲಸೂರ ತಾಲ್ಲೂಕಿನ ಅನೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯಗಳಲ್ಲೇ ಇಲ್ಲ. .

ಹುಮನಾಬಾದ್ ಪಟ್ಟಣದ ಹೊರ ವಲಯದ ಚಿದ್ರಿ ಪೆಟ್ರೋಲ್ ಬಂಕ್‌ನಲ್ಲಿ ಮೇಲ್ಛಾವಣಿ ನಿರ್ಮಿಸಲಾಗಿದೆ.
ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಉಚಿತವಾಗಿ ಏರ್ ಸೌಲಭ್ಯ ಒದಗಿಸಲಾಗಿದೆ. ಮಳೆ ಬಂದರೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಪೆಟ್ರೋಲ್ ಬಂಕ್ ಮಾಲೀಕ ವಸಂತಕುಮಾರ್ ಚಿದ್ರಿ.

‘ಪೆಟ್ರೋಲ್‌ ಬಂಕ್‌ ಮಾಲೀಕರು ಗ್ರಾಹಕರಿಗೆ ಸೌಲಭ್ಯ ಒದಗಿಸಲು ಹಿಂದೇಟು ಹಾಕುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಶೀಘ್ರದಲ್ಲೇ ಬಂಕ್ ಮಾಲೀಕರ ಸಭೆ ಕರೆದು ತಿಳಿವಳಿಕೆ ನೀಡಲಾಗುವುದು. ಆದರೂ ‌ಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಬಿ. ಬಾಬುರೆಡ್ಡಿ ಹೇಳುತ್ತಾರೆ.

ಗ್ರಾಹಕರು ವಹಿಸಬೇಕಾದ ಎಚ್ಚರಿಕೆಗಳು

1. ಪೆಟ್ರೋಲ್ ಅಥವಾ ಡೀಸೆಲ್‌ ಹಾಕಿಸಿಕೊಳ್ಳುವ ಮೊದಲು ಇಂಧನ ಮೀಟರ್‌ನಲ್ಲಿ ಪೆಟ್ರೋಲ್ ಅಥವಾ ಡೀಸೆಲ್‌ ರೀಡಿಂಗ್ ಸೊನ್ನೆ ಇದೆಯೇ ಎನ್ನುವುದನ್ನು ಪರಿಶೀಲಿಸಬೇಕು. ರೀಡಿಂಗ್ ಸೊನ್ನೆ ಇಲ್ಲದಿದ್ದರೆ ಅದನ್ನು ಸೊನ್ನೆ ಮಾಡುವಂತೆ ತೈಲ ಹಾಕುವವರಿಗೆ ಸೂಚಿಸಬೇಕು.
2. ನಿಗದಿತ ಬೆಲೆಯ ಪೆಟ್ರೋಲ್ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಗ್ರಾಹಕರು ₹ 100, ₹ 200 ಅಥವಾ ₹ 500 ಪೆಟ್ರೋಲ್, ಡೀಸೆಲ್ ಹಾಕಿಸುವುದರಿಂದ ಕೆಲವು ಪೆಟ್ರೋಲ್ ಬಂಕ್'ನವರು ಈ ಮೊತ್ತಕ್ಕೆ ಕಡಿಮೆ ಇಂಧನ ಬರುವಂತೆ ಮಾಡಿರುತ್ತಾರೆ. ವಂಚನೆಯಿಂದ ತಪ್ಪಿಸಿಕೊಳ್ಳಲು ಲೀಟರ್ ಲೆಕ್ಕದಲ್ಲಿ ಇಂಧನ ತುಂಬಿಸುವುದು ಒಳ್ಳೆಯದು.
3.ರಿಮೋಟ್ ಕಂಟ್ರೋಲ್'ನಿಂದ ಕಾರ್ಯ ನಿರ್ವಹಿಸುವ ಸಾಧನದಿಂದ ಅನೇಕ ಬಾರಿ ಪೆಟ್ರೋಲ್ ಬಂಕ್ ಮಾಲೀಕರು ಇಂಧನ ಮೀಟರ್ ಹಾಳು ಮಾಡುವ ಸಾಧ್ಯತೆ ಇರುತ್ತದೆ. ಬಂಕ್‌ನಲ್ಲಿ ಅಳವಡಿಸಿದ ಸಾಧನ ನೋಡಬೇಕು.
4. ಪೆಟ್ರೋಲ್ ಬಂಕ್‌ ಕಾರ್ಮಿಕರು ಪೆಟ್ರೋಲ್ ಪೈಪ್ ತೆಗೆಯುವುದು ಹಾಗೂ ಮುಚ್ಚುವುದು ಮಾಡಿದರೆ ಎಚ್ಚರಿಕೆ ವಹಿಸಬೇಕು. ಕಾರಣ ಪೈಪ್ ಮೂಲಕ ಇಂಧನದ ಹರಿವು ಕಡಿಮೆಯಾಗುತ್ತದೆ. ಆದರೆ ಮೀಟರ್ ಚಾಲನೆಯಲ್ಲಿರುತ್ತದೆ.

ಮೂರು ಕಂಪನಿಗಳ 15 ಬಂಕ್‌

ಬೀದರ್‌ ಜಿಲ್ಲೆಯಲ್ಲಿ ಮೂರು ಕಂಪನಿಗಳ 15 ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಂಡಿಯಲ್‌ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ 58, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ 36 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ 21 ಬಂಕ್‌ಗಳು ಜಿಲ್ಲೆಯಲ್ಲಿ ಇವೆ. ರಿಲಾಯನ್ಸ್ ಕಂಪನಿಯ ಪೆಟ್ರೋಲ್‌ ಬಂಕ್‌ ಸಹ ಇವೆ.

ಇಂಡಿಯಲ್‌ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ 5, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ 6 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ 3 ಬಂಕ್‌ಗಳು ನಿರ್ಮಾಣದ ಹಂತದಲ್ಲಿವೆ.

ರಸ್ತೆ ಬದಿಗೆ ಬಾಟಲಿಗಳಲ್ಲಿ ಪೆಟ್ರೋಲ್ ಮಾರಾಟ

ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಬಹಿರಂಗವಾಗಿಯೇ ಪೆಟ್ರೋಲ್‌ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಪ್ರತಿ ಲೀಟರ್‌ಗೆ ಸಾಮಾನ್ಯ ಬೆಲೆಗಿಂತ ₹ 20 ಹೆಚ್ಚುವರಿಯಾಗಿ ಪಡೆಯಲಾಗುತ್ತಿದೆ.

ಬೀದರ್ ತಾಲ್ಲೂಕಿನ ಸಿಂಧೋಲ್‌, ಕಮಠಾಣಾ, ಅತಿವಾಳ, ಆಣದೂರ, ಔರಾದ್ ತಾಲ್ಲೂಕಿ ಜಮಗಿ, ಏಕಂಬಾ, ಬಲ್ಲೂರ್, ಧೂಪತಮಹಾಗಾಂವ, ಕಮಲನಗರ ತಾಲ್ಲೂಕಿನ ದಾಬಕಾ, ಮುರ್ಕಿ, ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ, ಹುಲಸೂರ ತಾಲ್ಲೂಕಿನ ಗೋರಟಾ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬಹಿರಂಗವಾಗಿಯೇ ಪೆಟ್ರೋಲ್‌ ಮಾರಾಟ ಮಾಡುವುದು ಆಗಾಗ ಕಂಡು ಬರುತ್ತದೆ.

ಜಿಲ್ಲೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳ ಬಂಕ್‌ಗಳು ಅಧಿಕ ಸಂಖ್ಯೆಯಲ್ಲಿವೆ. ಈ ಕಂಪನಿಗಳ ಅಧಿಕಾರಿಗಳು ಸರಿಯಾಗಿ ಮೇಲುಸ್ತುವಾರಿ ಮಾಡುತ್ತಿಲ್ಲ. ಅಧಿಕಾರಿಗಳು ಅಕ್ರಮ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಗೊತ್ತಿದ್ದು ಮೌನವಾಗಿದ್ದಾರೆ. ಹೀಗಾಗಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಅನೇಕ ಗ್ರಾಮಗಳಲ್ಲಿ ರಸ್ತೆ ಬದಿಗೆ ಬಾಟಲಿ ಹಾಗೂ ಡಬ್ಬಗಳಲ್ಲಿ ಪೆಟ್ರೋಲ್‌ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಪೆಟ್ರೋಲ್ ಅಕ್ರಮವಾಗಿ ಮಾರಾಟವಾಗುತ್ತಿದ್ದರೂ ಕೇಳುವವರೇ ಇಲ್ಲವಾಗಿದ್ದಾರೆ ಎನ್ನುತ್ತಾರೆ ಕಿಸಾನ್ ಸಭಾದ ಔರಾದ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಅಹಮ್ಮದ್.

ಪೂರಕ ಮಾಹಿತಿ: ವೀರೇಶ ಮಠಪತಿ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಗುಂಡು ಅತಿವಾಳ, ಬಸವಕುಮಾರ, ನಾಗೇಶ ಪ್ರಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.