ಗುರುಪ್ರಸಾದ ಮೆಂಟೆ
ಹುಲಸೂರ: ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಸಿಬ್ಬಂದಿ ಕೊರತೆ, ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಹುಲಸೂರ ಸಮೀಪಲ್ಲಿರುವ ಮೇಹಕರ ಚಿಕಿತ್ಸಾಲಯದಲ್ಲಿ ವೈದ್ಯರು, ಪರಿವೀಕ್ಷಕರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ, ಕೃಷಿ ಕಾರ್ಮಿಕರಿಗೆ, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ ತಾಲ್ಲೂಕಿನಾದ್ಯಂತ ಹುದ್ದೆಗಳು ಖಾಲಿ ಖಾಲಿ ಉಳಿದಿವೆ.
ಸಾಯಗಾಂವ್ ಹೋಬಳಿಯಲ್ಲಿ 20 ಹಳ್ಳಿಗಳೂ ಬರುತ್ತವೆ. ದನಕರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪಶುಗಳ ಆರೋಗ್ಯ ತಪಾಸಣೆ ಮಾಡುವುದು ಅಸಾಧ್ಯವಾಗಿದೆ. ರೈತರ ಜೀವನಕ್ಕೆ ಆಧಾರವಾಗಿರುವ ಜಾನುವಾರುಗಳು ಮರಣ ಹೊಂದುತ್ತಿವೆ. ಆದ್ದರಿಂದ ಎಲ್ಲಾ ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಳ್ಳಿಗಳ ಸಂಖ್ಯೆ ಹೆಚ್ಚಾಗಿದ್ದು, ವೈದ್ಯರ ಕೊರತೆ ಇರುವುದರಿಂದ ಕೆಲಸ ಮಾಡುವುದು ಕಷ್ಟವಾಗಿದೆ. ಎಂದು ಪಶು ವೈದ್ಯಾಧಿಕಾರಿ ಕಿಷನರಾವ್ ಬಿರಾದಾರ ಹೇಳಿದರು.
12 ಸಾವಿರ ಜಾನುವಾರುಗಳಿವೆ. ಇದರಲ್ಲಿ ಆಕಳು 4 ಸಾವಿರ, ಎಮ್ಮೆ 3 ಸಾವಿರ, ಕುರಿಗಳು 5 ಸಾವಿರ, ಮೇಕೆಗಳು 5 ಸಾವಿರ, ಹಂದಿಗಳು 700 ಇವೆ. 10 ಸಾವಿರ ಕೋಳಿಗಳಿವೆ ಎಂದು ಮಾಹಿತಿ ನೀಡಿದರು.
’ರೋಗಗ್ರಸ್ತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮೃತಪಟ್ಟ ಜಾನುವಾರುಗಳ ಮಾಹಿತಿ ಸಂಗ್ರಹ ಮಾಡುವಲ್ಲಿ ವೈದ್ಯರು ಪ್ರಯತ್ನಿಸಿಲ್ಲ . ಬೆಲೆ ಬಾಳುವ ಜಾನುವಾರುಗಳು ಕಾಯಿಲೆಯಿಂದ ಬಳಲುತ್ತಿರುವುದರಿಂದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಮೆಹಕರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಜ್ಞಾನೇಶ್ವರ್ ಕಾಂಬ್ಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.