ಬೀದರ್: ಹದಿನಾರು ವರ್ಷಗಳ ಹಿಂದೆ ಬೀದರ್ ತಾಲ್ಲೂಕಿನ ಕಮಠಾಣ ಬಳಿ ಆರಂಭಿಸಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇನ್ನೂ ಗಟ್ಟಿಯಾಗಿ ನೆಲೆಯೂರಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ ಶಿವಮೊಗ್ಗದಲ್ಲಿ ಇನ್ನೊಂದು ಪಶು ವಿಶ್ವವಿದ್ಯಾಲಯ ಆರಂಭಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಮುಖ್ಯ ಆಡಳಿತ ಕಚೇರಿ ನಿರ್ಮಿಸಲು ಸರ್ಕಾರ ಅನುದಾನನೀಡಿಲ್ಲ. ₹25 ಕೋಟಿ ವೆಚ್ಚದ ವಿಶ್ವವಿದ್ಯಾಲಯದ ಕಟ್ಟಡದ ಪ್ರಸ್ತಾವ ದೂಳು ತಿನ್ನುತ್ತಿದೆ. ಒಂದು ಸಾವಿರ ಹುದ್ದೆಗಳು ಮಂಜೂರಾದರೂ ಅಗತ್ಯ ಸಿಬ್ಬಂದಿ ನೇಮಕ ಮಾಡಿಲ್ಲ. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನುದಾನ ಕೊರತೆಯಿಂದ ಅವರಿಗೂ ಸಮಯಕ್ಕೆ ಸರಿಯಾಗಿ ವೇತನ ದೊರಕುತ್ತಿಲ್ಲ.
‘ರಾಜ್ಯ ಸರ್ಕಾರಕ್ಕೆ ಕಳೆದ ವರ್ಷ ₹ 738 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ ಕೇವಲ ₹167 ಕೋಟಿ ಬಿಡುಗಡೆ ಮಾಡಿದೆ. ಸಂಶೋಧನೆಗೆ ನೀಡಿದ್ದ ₹ 13 ಕೋಟಿ ವಾಪಸ್ ಪಡೆದುಕೊಂಡಿದೆ’ ಎನ್ನುವುದು ವಿವಿ ಮೂಲಗಳ ಮಾಹಿತಿ.
‘ಈ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ವಿಶ್ವವಿದ್ಯಾಲಯದ ಬಲವರ್ಧನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳುತ್ತಾರೆ.
‘ರಾಜ್ಯದಲ್ಲಿ ಮೂರು ಕೃಷಿ ವಿಶ್ವವಿದ್ಯಾಲಯ, ಒಂದು ತೋಟಗಾರಿಕೆ ವಿಶ್ವವಿದ್ಯಾಲಯ ಇದೆ. ಇನ್ನೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಪ್ರಸ್ತುತ ಸರ್ಕಾರ ನಮ್ಮಿಂದ ಯಾವುದೇ ಮಾಹಿತಿ ಕೇಳಿಲ್ಲ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ನಾರಾಯಣಸ್ವಾಮಿ.
‘ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ದೊಡ್ಡ ಕಾರ್ಯಕ್ರಮಗಳನ್ನುಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿಯೇ ನಡೆಸಲಾಗುತ್ತಿದೆ. ಈ ವರ್ಷದ ಪಶು ಮೇಳವೂ ಅಲ್ಲಿಯೇ ನಡೆಯಲಿದೆ. ಶಿವಮೊಗ್ಗದಲ್ಲಿಯೇ ಹೊಸ ವಿಶ್ವವಿದ್ಯಾಲಯ ಆರಂಭಗೊಳ್ಳಲಿದೆ ಎಂಬುದಕ್ಕೆ ಇವೆಲ್ಲವೂ ಪುಷ್ಟಿ ನೀಡುತ್ತಿವೆ’ ಎನ್ನುತ್ತಾರೆ ಸಿಬ್ಬಂದಿ.
‘ಇರುವ ವಿವಿಯೇ ಅನುದಾನ ಕೊರತೆಯಿಂದ ಬಳಲುತ್ತಿದೆ. ಇಂತಹದ್ದರಲ್ಲಿ ಹೊಸ ವಿವಿ ಆರಂಭ ಎಷ್ಟು ಸರಿ’ ಎಂದು ಪ್ರಶ್ನಿಸುತ್ತಾರೆಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೊಡಗೆ.
ನಂಜುಂಡಪ್ಪ ವರದಿಯ ಶಿಫಾರಸ್ಸಿನ ಆಧಾರದ ಮೇಲೆ ಬೀದರ್‌ನಲ್ಲಿ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. 2005ರ ಏಪ್ರಿಲ್ 1ರಂದು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಉದ್ಘಾಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.