ADVERTISEMENT

ಉಪನ್ಯಾಸಕರ ಕೊರತೆ: ದಾಖಲಾತಿ ಕುಸಿತ

ನಾನಾ ಸಮಸ್ಯೆಗಳಿಂದ ಬಡವಾಗಿರುವ ಸರ್ಕಾರಿ ಪಿಯು ಕಾಲೇಜು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 4:59 IST
Last Updated 19 ಜೂನ್ 2024, 4:59 IST
<div class="paragraphs"><p>ಭಾಲ್ಕಿಯ ಸರ್ಕಾರಿ ಪಿಯು ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು</p></div>

ಭಾಲ್ಕಿಯ ಸರ್ಕಾರಿ ಪಿಯು ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು

   

ಭಾಲ್ಕಿ: ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಕಲಾ, ವಿಜ್ಞಾನ, ವಾಣಿಜ್ಯ ಪಿಯು ಕಾಲೇಜಿನಲ್ಲಿ ಗ್ರಂಥಾಲಯ, ಅಂತರ್ಜಾಲ ಮಾಹಿತಿ ಪಡೆಯಲು ಪೂರಕವಾಗಿರುವ ಕಂಪ್ಯೂಟರ್‌ ಲ್ಯಾಬ್‌ಗೆ ಗಣಕಯಂತ್ರ ಉಪನ್ಯಾಸಕರ ಕೊರತೆ ಇದೆ. ಇದು ಶೈಕ್ಷಣಿಕ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ.

2001ರಲ್ಲಿ ಆರಂಭವಾಗಿರುವ ಕಾಲೇಜಿಗೆ ಉತ್ತಮ ಕಟ್ಟಡ, ಸಾಕಾಗುವಷ್ಟು ಕೋಣೆಗಳು, ಆಟದ ಮೈದಾನ ಇದೆ. ಆದರೆ, ವಿವಿಧ ವಿಷಯಗಳ ಉಪನ್ಯಾಸಕರ ಕೊರತೆ ಸೇರಿದಂತೆ ಇತರ ಸಮಸ್ಯೆಗಳು ವಿದ್ಯಾರ್ಥಿಗಳನ್ನು, ಪಾಲಕರನ್ನು ಕಾಡುತ್ತಿದೆ. ಇದು ದಾಖಲಾತಿ ಇಳಿಕೆಗೆ ತೊಡಕಾಗಿ ಪರಿಣಮಿಸಿದೆ.

ADVERTISEMENT

‘ವಾಣಿಜ್ಯ, ಕಲಾ ವಿಭಾಗದ ಪ್ರಮುಖ ವಿಷಯಗಳಾಗಿರುವ ಬ್ಯುಸಿನೆಸ್‌ ಸ್ಟಡೀಸ್‌, ಅಕೌಂಟನ್ಸಿ, ಎಕಾನಮಿಕ್ಸ್‌ ವಿಷಯಗಳ ಉಪನ್ಯಾಸಕರ ಕೊರತೆಯಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ಖಾಲಿ ಇರುವ ಕಾಯಂ ಹುದ್ದೆಗಳ ಬದಲಿಗೆ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತದೆ. ಆದರೆ, ಅವರ ನೇಮಕಕ್ಕೆ ಹಲವಾರು ತಿಂಗಳುಗಳು ಹಿಡಿಯುತ್ತವೆ. ಇದರಿಂದ ಕೆಲವೊಮ್ಮೆ ಕಾಲೇಜಿನತ್ತ ಮುಖ ಮಾಡಲು ಮನಸ್ಸು ಆಗುವುದಿಲ್ಲ’ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಬಹು ಅವಶ್ಯವಾಗಿ ಬೇಕಾಗಿರುವ ಗ್ರಂಥಾಲಯ ಕೊರತೆ ಇದೆ. ಕಂಪ್ಯೂಟರ್‌ ಉಪನ್ಯಾಸಕರ ಕೊರತೆಯು ಕಂಪ್ಯೂಟರ್‌ ದೂಳು ಹಿಡಿಸಿದೆ. ದೈಹಿಕ ಉಪನ್ಯಾಸಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳ ದೈಹಿಕ ಸದೃಢತೆ, ಮನೋರಂಜನೆಗೆ ಅಡ್ಡಿ ಉಂಟಾಗಿದೆ. ಇನ್ನು ವಿಜ್ಞಾನದ ಪ್ರಯೋಗಾಲಯ ಇದ್ದರೂ ಹೆಚ್ಚಿನ ಬಳಕೆಗೆ ಸಂಬಂಧಪಟ್ಟ ಉಪನ್ಯಾಸಕರು ಮುಂದಾಗುವುದಿಲ್ಲ’ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿಗಳು ದೂರಿದರು.

‘ಕಾಲೇಜಿನಲ್ಲಿ ದಾಖಲಾತಿ ಹೆಚ್ಚಳಕ್ಕೆ ಹತ್ತನೇ ತರಗತಿಯ ಪರೀಕ್ಷೆಗೂ ಮೊದಲು ವಿವಿಧ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಇರುವ ಎಲ್ಲ ಉಪನ್ಯಾಸಕರು ಅವಿರತವಾಗಿ ಶ್ರಮಿಸುತ್ತಿದ್ದೇವೆ. ಸಂಜೆ 4 ಗಂಟೆ ನಂತರ ವಿವಿಧ ಯುವಕರ ಕೂಟ ಕಾಲೇಜಿನ ಮೈದಾನದಲ್ಲಿ ಕ್ರಿಕೆಟ್‌ ಸೇರಿದಂತೆ ಇತರ ಕ್ರೀಡೆಗಳನ್ನು ಆಡುವುದುರಿಂದ ಹೆಚ್ಚುವರಿ ಕಾರ್ಯ ಮತ್ತು ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲ ಪುಂಡರು ಕಾಲೇಜಿನ ಕಿಟಕಿ ಗಾಜು, ಬಾಗಿಲುಗಳನ್ನು ಒಡೆದಿದ್ದಾರೆ. ಹಾಗಾಗಿ, ಕಾಲೇಜಿನ ಕಟ್ಟಡಕ್ಕೆ ಗ್ರಿಲ್‌ ವ್ಯವಸ್ಥೆ ಆಗಬೇಕು. ಜೊತೆಗೆ ಸುಣ್ಣ, ಬಣ್ಣದಿಂದ ಕಟ್ಟಡದ ಕಳೆ ಹೆಚ್ಚಿಸಬೇಕಿದೆ’ ಎಂದು ಪ್ರಭಾರ ಪ್ರಾಚಾರ್ಯ ಸುಖದೇವ ಬಿರಾದರ ತಿಳಿಸಿದರು.

ಉಪನ್ಯಾಸಕರ ಕೊರತೆ, ದಾಖಲಾತಿ ಕುಸಿತ: ತಾಲ್ಲೂಕಿನ ಹಲಬರ್ಗಾ ಗ್ರಾಮದ ಸರ್ಕಾರಿ ಕಲಾ, ವಿಜ್ಞಾನ ಪಿಯು ಕಾಲೇಜಿನಲ್ಲಿನ ಉಪನ್ಯಾಸಕರ ಕೊರತೆ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ರಾಜ್ಯಶಾಸ್ತ್ರ, ಇತಿಹಾಸ, ಹಿಂದಿ, ಇಂಗ್ಲಿಷ್‌ ವಿಷಯಗಳ ಉಪನ್ಯಾಕರ ಕೊರತೆಯಿಂದ ಕಲಾ ವಿಭಾಗವೂ ಸೊರಗಿದೆ. ಇದರ ಪರಿಣಾಮ ಈ ವರ್ಷ ಕೇವಲ 10 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷ 29 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.

‘ವಿದ್ಯಾರ್ಥಿಗಳಿಗೆ ಅವಶ್ಯಕ ವಾಗಿರುವ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌, ದೈಹಿಕ ಶಿಕ್ಷಣ ಉಪನ್ಯಾಸಕರ ಅಲಭ್ಯತೆ ಇದೆ. ಇದು ದಾಖಲಾತಿಗೆ ತೊಡಕಾಗಿದೆ. ಈ ವರ್ಷದ ಕಲಾ, ವಿಜ್ಞಾನ ವಿಭಾಗದ ಪ್ರಥಮ, ದ್ವಿತೀಯ ವರ್ಷದಲ್ಲಿ ಕ್ರಮವಾಗಿ 10, 29, 10, 13 ಸೇರಿ ದಂತೆ ಒಟ್ಟು 62 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ’ ಎಂದು ಪ್ರಾಚಾರ್ಯ ಶಿವರಾಜ ಬೋರೊಳೆ ತಿಳಿಸಿದರು.

ಕಾಲೇಜಿನಲ್ಲಿ ಬ್ಯುಸಿನೆಸ್‌ ಸ್ಟಡೀಸ್‌, ಅಕೌಂಟೆನ್ಸಿ ವಿಷಯದ ಉಪನ್ಯಾಸಕರ ಕೊರತೆಯಿಂದ ಕಲಿಕೆಯಲ್ಲಿ ತೊಂದರೆ ಉಂಟಾಗುತ್ತಿದೆ

-ದೀಪಾಲಿ ಖುದಾವಂದಪೂರ, ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.