ADVERTISEMENT

ಬೀದರ್‌: ಬದುಕಿನ ವಿಷಯಗಳೇ ರಸವತ್ತಾದ ಚುಟುಕುಗಳಾಗಲಿ

ಸಾಹಿತ್ಯ - ಸಂವಾದ ಕಾರ್ಯಕ್ರಮದಲ್ಲಿ ಎಚ್. ಡುಂಡಿರಾಜ್ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 15:58 IST
Last Updated 14 ಅಕ್ಟೋಬರ್ 2023, 15:58 IST
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೀದರ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚುಟುಕು ಸಾಹಿತಿ ಎಚ್‌.ಡುಂಡಿರಾಜ್‌ ಹಾಗೂ ಗಣ್ಯರು ಭಾವಗೀತೆಗಳ ಧ್ವನಿಮುದ್ರಿತ ಥಂಬ್ಲೈನ್ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬೀದರ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚುಟುಕು ಸಾಹಿತಿ ಎಚ್‌.ಡುಂಡಿರಾಜ್‌ ಹಾಗೂ ಗಣ್ಯರು ಭಾವಗೀತೆಗಳ ಧ್ವನಿಮುದ್ರಿತ ಥಂಬ್ಲೈನ್ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು   

ಬೀದರ್‌: ‘ಬದುಕಿನ ಅನೇಕ ವಿಷಯಗಳನ್ನು ರಸವತ್ತಾದ ಚುಟುಕುಗಳಾಗಿ ಮೂಡಿ ಬರಲಿ’ ಎಂದು ಚುಟುಕು ಬರಹಗಾರ ಎಚ್. ಡುಂಡಿರಾಜ್ ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಾಹಿತ್ಯ - ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನ ಪದ್ದತಿಯಿಂದ ಮನುಷ್ಯ ಯಾಂತ್ರಿಕ ಬದುಕು ನಡೆಸುತ್ತಿದ್ದಾನೆ.  ಸಾಹಿತಿಗಳಾದವರು ಬದುಕಿನ ಅನೇಕ ವಿಷಯಗಳಿಗೆ ರಸವತ್ತಾಗಿ ಚುಟುಕುಗಳಾಗಿ ಬರೆಯಬಹುದು ಎಂದು ತಿಳಿಸಿದರು.

ADVERTISEMENT

ಅತಿ ಕಡಿಮೆ ಶಬ್ದಗಳನ್ನು ಬಳಸಿ, ವಿಶೇಷ ಅರ್ಥ ಬರುವ ಹಾಗೆ ಕೊನೆಯಲ್ಲಿ ಪಂಚ್‌ನೊಂದಿಗೆ ಚುಟುಕು ಮೂಡಿ ಬರಬೇಕು. ಆಗ ಅದು ಎಲ್ಲರನ್ನೂ ಓದಿಸುತ್ತದೆ. ಗಮನ ಸೆಳೆಯುತ್ತದೆ ಎಂದು ಹೇಳಿದರು.

ಹಾಸ್ಯ ಬರಹಗಾರರು ಪುರುಷರಾಗಿರುವುದರಿಂದ ಹೆಣ್ಣಿನ ಬಗ್ಗೆ ಬರೆಯುವುದು ವಾಡಿಕೆ. ಹೆಣ್ಣು ಮಕ್ಕಳು ಗಂಡಿನ ಬಗ್ಗೆ ಬರೆಯಲಿ. ಆದರೆ, ಹೆಣ್ಣನ್ನು ಹಾಸ್ಯಕ್ಕಾಗಿ ಪದಪ್ರಯೋಗ ಮಾಡುತ್ತೇನೆಯೇ ಹೊರತು ಕೀಳಾಗಿ ಭಾವಿಸುವುದಿಲ್ಲ, ಅವರನ್ನು ಗೌರವದಿಂದ ಕಾಣುತ್ತೇನೆ ಎಂದು ಪಾರ್ವತಿ ಸೋನಾರೆ ಅವರ ಪ್ರಶ್ನೆಗೆ ಸಂವಾದದಲ್ಲಿ ಉತ್ತರಿಸಿದರು.

ಸಂವಾದದಲ್ಲಿ ಶ್ರೇಯಾ ಮಹೇಂದ್ರಕರ್, ಕೇಶವ ದಡ್ಡೆ, ಎಸ್.ಎಸ್.ಹೊಡಮನಿ, ಉಮಾದೇವಿ ಬಾಪೂರೆ ಅವರು ಭಾಗವಹಿಸಿದ್ದರು. 

ಹಾಸ್ಯ ಬರಹಗಾರ ಎಂ.ಎಸ್.ನರಸಿಂಹಮೂರ್ತಿ ಮಾತನಾಡಿ, ಎಲ್ಲರೂ ಶಿಕ್ಷಕರಿಗೆ ಗೌರವ ಕೊಡಬೇಕು. ಶಿಕ್ಷಕರಿಂದಲೇ ನಾವೆಲ್ಲ ಉನ್ನತ ಸ್ಥಾನಕ್ಕೆ ಬಂದಿದ್ದೇವೆ. ಜೀವನದ ಪ್ರತಿ ಹೆಜ್ಜೆಯಲ್ಲೂ ಹಾಸ್ಯವನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆಯಿಂದಲೂ ಹಾಸ್ಯ ಬರಹಗಾರರು ಉದಯಿಸಬೇಕೆಂದು ಹೇಳಿದರು. 

ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ ಮಾತನಾಡಿ, ಬೀದರ್‌ ಜಿಲ್ಲೆಯ ಭಾಷೆ ಸೊಗಡು ವಿಶಿಷ್ಟವಾಗಿದೆ. ಅನಾರೋಗ್ಯಕ್ಕೀಡಾದ ವ್ಯಕ್ತಿ ಹೇಗಿದ್ದಾರೆ ಎಂದು ಕೇಳಿದರೆ ಬೀದರ್‌ ಭಾಗದಲ್ಲಿ ಸರಿ ಹೋಗಿದ್ದಾರೆಂದು ಹೇಳುತ್ತಾರೆ. ಇಲ್ಲಿಯ ಭಾಷೆಯ ಸೊಗಡು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಇಲ್ಲಿ ಪ್ರತಿಪದಕ್ಕೂ ಬಳಸುವ ‘ಬೀ’ ಎನ್ನುವ ಪ್ರತ್ಯಯ ಬೀದರ್‌ ಸೂಚಿಸುವಂತಿದೆ ಎಂದರು.

ಬೆಂಗಳೂರಿನ ಸೈಸೆಕ್ ಸಂಸ್ಥೆಯ ಕಾರ್ಯಕ್ರಮದ ವ್ಯವಸ್ಥಾಪಕಿ ಬಿ.ಎಚ್. ವನಜಾಕ್ಷಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಜಯದೇವಿ ಯದಲಾಪುರೆ, ಬಸವರಾಜ ಬಲ್ಲೂರು, ಲೇಖಕಿ ಭಾರತಿ ವಸ್ತ್ರದ್‌ ಹಾಜರಿದ್ದರು. 

ಇದೇ ವೇಳೆ ಶಿವಕುಮಾರ ಕಟ್ಟೆ ಅವರು ರಚಿಸಿರುವ, ಶಂಭುಲಿಂಗ ವಾಲದೊಡ್ಡಿ ಅವರು ಹಾಡಿರುವ ಮತ್ತು ದಿಲೀಪ್ ಕಾಡವಾದ ಸಂಗೀತ ಸಂಯೋಜನೆ ಮಾಡಿರುವ 'ಅನಂತಕಾಲ ಉರುಳಿದವು... ಹಾಗೂ ‘ಭಾವಸಾಗರಿ' ಎನ್ನುವ ಎರಡು ಭಾವಗೀತೆಗಳ ಧ್ವನಿಮುದ್ರಿತ ಥಂಬ್ಲೈನ್ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂಜೀವಕುಮಾರ ಅತಿವಾಳೆ ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.