ಬಸವಕಲ್ಯಾಣ: ‘ಶರಣರ ನಾಡಲ್ಲಿ ಪ್ರಥಮ ರಾಷ್ಟ್ರೀಯ ಮಹಾ ಅಧಿವೇಶನ ನಡೆಯುತ್ತಿದ್ದು, ಅದು ಯಶಸ್ವಿಯಾಗಲು ಎಲ್ಲರೂ ಶ್ರಮಿಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.
ನಗರದ ಹರಳಯ್ಯನವರ ಗವಿಯಲ್ಲಿ ಬುಧವಾರ ನಡೆದ ಅಧಿವೇಶನದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
‘ಮಾರ್ಚ್ 4 ಮತ್ತು 5 ರಂದು ಅಧಿವೇಶನ ನಡೆಯಲಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಒದಗಿಸುವುದು ಒಳಗೊಂಡು ಹಲವಾರು ಸಮಸ್ಯೆಗಳನ್ನು ಮಂಡಿಸಲಾಗುತ್ತದೆ. ವಿದೇಶದ ಹಾಗೂ ಎಂಟು ರಾಜ್ಯಗಳ ಲಕ್ಷಕ್ಕೂ ಅಧಿಕ ಬಸವಾನುಯಾಯಿಗಳು ಭಾಗವಹಿಸುವರು. ಅವರಿಗೆ ಊಟ, ವಸತಿ ಮತ್ತಿತರೆ ಸೌಲಭ್ಯ ದೊರಕಿಸಿ ಕೊಡುವುದು ಎಲ್ಲರ ಜವಾಬ್ದಾರಿ’ ಎಂದರು.
ಪ್ರೊ.ಶಿವಶರಣಪ್ಪ ಹುಗ್ಗೆ ಪಾಟೀಲ ಮಾತನಾಡಿ,‘ಬಸವಣ್ಣನವರು ಸಮಾನತೆಯ ತಳಹದಿಯ ಮೇಲೆ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಬ್ರಿಟಿಷರ ಕಾಲದಲ್ಲೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಇತ್ತು. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು’ ಎಂದರು.
ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಡಾ.ಗಂಗಾಂಬಿಕಾ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಡಾ.ಬಸವರಾಜ ಪಂಡಿತ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಡಾ.ಜಿ.ಎಸ್.ಭುರಳೆ, ರವಿ ಕೊಳಕೂರ, ನಿರ್ಮಲಾ ಶಿವಣಕರ ಹಾಗೂ ಹಣಮಂತ ಧನಶೆಟ್ಟಿ ಮಾತನಾಡಿದರು.
ಬಸವರಾಜ ತೊಂಡಾರೆ ಅವರನ್ನು ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಸತ್ಕರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ, ಮುಖಂಡ ಪ್ರದೀಪ ವಾತಡೆ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ಡಾ.ಎಸ್.ಬಿ.ದುರ್ಗೆ, ಡಾ.ಸೋಮನಾಥ ಯಾಳವಾರ, ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ಮಲ್ಲಿಕಾರ್ಜುನ ಚಿರಡೆ ಹಾಗೂ ವೀರಣ್ಣ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.