ADVERTISEMENT

ಮಲ್ಲಿಕಾರ್ಜುನ ಖರ್ಗೆ ಅವರಿಂದಲೇ ಕಾಂಗ್ರೆಸ್ ಸರ್ವನಾಶ: ಶಿವರಾಜ್ ಸಿಂಗ್ ಚೌಹಾಣ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:45 IST
Last Updated 21 ಫೆಬ್ರುವರಿ 2024, 15:45 IST
<div class="paragraphs"><p>ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು&nbsp;ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು.</p></div>

ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಶಿವರಾಜ್ ಸಿಂಗ್ ಚೌಹಾಣ್ ಉದ್ಘಾಟಿಸಿದರು.

   

ಹುಮನಾಬಾದ್ (ಬೀದರ್‌ ಜಿಲ್ಲೆ): ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷ ಸರ್ವನಾಶ ಮಾಡಲಿದ್ದಾರೆ’ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿಯೂ ಆದ ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದರು.

ಪಟ್ಟಣದ ತೇರು ಮೈದಾನದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿ ಅವರ ಕನಸು ನನಸಾಗಿಸಲು ಹೊರಟಿದ್ದಾರೆ ಎಂದರು.

ADVERTISEMENT

28 ಕ್ಷೇತ್ರಗಳಲ್ಲಿ ಗೆಲುವು: ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲ್ಲಲ್ಲಿದೆ. ಬೀದರ್ ಜಿಲ್ಲೆಯಿಂದಲೇ ಸಂಕಲ್ಪ ಮಾಡುತ್ತೇವೆ. ಬೀದರ್ ಜಿಲ್ಲೆಯಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಪರಿಶ್ರಮದಿಂದ ಇಲ್ಲಿನ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಬೇಕಾದರೆ ಬೂತ್ ಮಟ್ಟದ ಕಾರ್ಯಕರ್ತರ ಶ್ರಮ ಅಗತ್ಯ. ‘ಗಾಂವ್ ಚಲೋ’ ಅಭಿಯಾನದ ಮೂಲಕ ಗ್ರಾಮಸ್ಥರಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ತಿಳಿವಳಿಕೆ ಮೂಡಿಸಬೇಕು. ಬೀದರ್ ಮತ್ತು ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಸಲಕ್ಕಿಂತಲೂ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ತಿಳಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭಗವಂತ ಖೂಬಾ ಅವರ ಸಾಧನೆ ಏನೂ ಇಲ್ಲ ಎಂದು ಹೇಳಿದ್ದಾರೆ. ಈಶ್ವರ ಖಂಡ್ರೆ ಓಡಾಡುವ ಬೀದರ್ –ಭಾಲ್ಕಿ ರಸ್ತೆ ಮಾಡಿದ್ದು ಕೇಂದ್ರದ ಅನುದಾನದಿಂದ ಎಂಬುದನ್ನು ಮರೆಯಬಾರದು. ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿ ನನಗೆ ಅಭಿನಂದನೆ ಸಲ್ಲಿಸಬೇಕೆಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದರು.

ಶಾಸಕ ಪ್ರಭು ಚವಾಣ್ ಮಾತನಾಡಿ, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆದರೆ ಈ ದೇಶ ಹಿಂದೂ ರಾಷ್ಟ್ರವಾಗಿ ನಿರ್ಮಾಣ ಆಗಲಿದೆ. ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ಮೊದಲು ಪಕ್ಷವನ್ನು ಸಂಘಟಿಸಬೇಕು ಎಂದು ಹೇಳಿದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಜನರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಆ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು.

ಸಂಸದ ಉಮೇಶ್ ಜಾಧವ್, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ . ರಾಜೀವ್, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಶಾಸಕರಾದ ಶರಣು ಸಲಗರ್, ಅವಿನಾಶ್ ಜಾಧವ್, ಬಸವರಾಜ ಮುತ್ತಿಮೂಡ, ರಘುನಾಥರಾವ್ ಮಲ್ಕಾಪುರೆ, ಮುಖಂಡರಾದ ಶಿವರಾಜ ಪಾಟೀಲ, ಚಂದು ಪಾಟೀಲ, ಅಮೀನ್ ರೆಡ್ಡಿ, ಲಲಿತಾ, ಅಮರನಾಥ ಪಾಟೀಲ, ಅಪ್ಪು ಪಾಟೀಲ, ಸುಭಾಷ್ ಕಲ್ಲೂರ್, ಪ್ರಕಾಶ್ ಖಂಡ್ರೆ, ಶಿವಾನಂದ ಮಂಠಾಳಕರ್, ರಾಜಕುಮಾರ್ ಪಾಟೀಲ, ಗುಂಡಪ್ಪ ವಕೀಲ, ಮಾಲಿಕಯ್ಯ ಗುತ್ತೇದಾರ್, ಈಶ್ವರ ಸಿಂಗ್‌ ಠಾಕೂರ್‌, ಪದ್ಮಾಕರ ಪಾಟೀಲ, ಬಸವರಾಜ ಆರ್ಯ, ಪ್ರಭಾಕರ್ ನಾಗರಹಳೆ, ಸಂತೋಷ್ ಪಾಟೀಲ, ರಮೇಶ ಕಲ್ಲೂರ್, ರವಿ ಹೊಸಳ್ಳಿ, ಸಂಜು ವಾಡೇಕರ್, ಪ್ರಕಾಶ್ ಹಳಿಖೇಡ್ ಹಾಜರಿದ್ದರು.

‘ಕಾಂಗ್ರೆಸ್‌ನವರಿಗೆ ನಡುಕ’

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ಬೀದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ. ಯಾರೂ ಮುಂದೆ ಬರುತ್ತಿಲ್ಲ. ಮಂದಿರ ನಿರ್ಮಾಣಕ್ಕೂ ಮುನ್ನ ಕಾಂಗ್ರೆಸ್‌ನಲ್ಲಿ ಬಹಳ ಪೈಪೋಟಿ ಇತ್ತು. ಈಗ ಒಬ್ಬರು ಆಸಕ್ತಿ ತೋರಿಸುತ್ತಿಲ್ಲ. ಕಾಂಗ್ರೆಸ್‌ನವರಿಗೆ ಈಗ ನಡುಕ ಹುಟ್ಟಿದೆ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಕುಹಕವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.