ADVERTISEMENT

ಲೋಕಸಭಾ ಚುನಾವಣೆ | ಬಿಜೆಪಿ ಒಂದಂಕಿ ದಾಟಲ್ಲ: ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ಮೇ 2024, 6:31 IST
Last Updated 5 ಮೇ 2024, 6:31 IST
   

ಬೀದರ್: ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಈ ಸಲ ಒಂದಂಕಿ ಸಂಖ್ಯೆ‌ ದಾಟುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಈ ಸಲ ಕಾಂಗ್ರೆಸ್ ಪಕ್ಷವು ಯುವಕರು, ಮಹಿಳೆಯರಿಗೆ ಟಿಕೆಟ್ ನೀಡಿದೆ‌. ಈ ಹಿಂದೆ ಬಿಜೆಪಿಯವರು ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ಗೆಲ್ಲಲ್ಲಿದ್ದೇವೆ ಎಂದು ಹೇಳುತ್ತಿದ್ದರು. ಗೃಹಸಚಿವ ಅಮಿತ್ ಶಾ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಇದೇ ಮಾತು ಎಲ್ಲ ಕಡೆ ಹೇಳುತ್ತಿದ್ದರು‌. ಈಗ ಎಂಟು ಸ್ಥಾನಗಳಲ್ಲಿಯೂ ಅವರಿಗೆ ಭರವಸೆ ಉಳಿದಿಲ್ಲ‌. ಬಿಜೆಪಿ ಈ ಸಲ ರಾಜ್ಯದಲ್ಲಿ ಒಂದಂಕಿ ದಾಟುವುದಿಲ್ಲ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಹನ್ನೊಂದು ತಿಂಗಳಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆ ಸಂದರ್ಭದಲ್ಲಷ್ಟೇ ರಾಜ್ಯಕ್ಕೆ ಬರುತ್ತಾರೆ. ಏಳು ತಿಂಗಳಾದರೂ ಬರ ಪರಿಹಾರ ಕೊಟ್ಟಿರಲಿಲ್ಲ. ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿರಲಿಲ್ಲ‌‌. 26 ಜನ ರಾಜ್ಯದ ಬಿಜೆಪಿ ಸಂಸದರು ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮಾತ್ರ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರು ಎಂದು ಹೇಳಿದರು.

ADVERTISEMENT

ವಿವಿಧ ತೆರಿಗೆಗಳಿಂದ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ₹4.36 ಲಕ್ಷ ಕೋಟಿ ಹೋಗುತ್ತದೆ. ಆದರೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ₹44 ಸಾವಿರ ಕೋಟಿಯಷ್ಟೇ ನೀಡಿದೆ. ನಮಗಿಂತ ಕಡಿಮೆ ತೆರಿಗೆ ತುಂಬುವ ಉತ್ತರ ಪ್ರದೇಶಕ್ಕೆ ₹2 ಲಕ್ಷ ಕೋಟಿ ನೀಡಿದೆ. ನಮ್ಮ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಶೇ 13ರಷ್ಟು ಕೊಟ್ಟಿದ್ದಾರೆ. ಕೇಂದ್ರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೆ ಗೊತ್ತಾಗಿದೆ. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸುವರು ಎಂದರು.

ನಮ್ಮ ನೆಲ, ಜಲ, ಭಾಷೆಗೆ ಧಕ್ಕೆಯಾದರೆ ರಾಜ್ಯದ ಸಂಸದರು ಅದರ ಬಗ್ಗೆ ಮಾತಾಡಬೇಕು. ಆದರೆ, ಬಿಜೆಪಿ ಒಬ್ಬ ಸಂಸದರೂ ಮಾತಾಡಿಲ್ಲ. ಈ ಸಲ ಇವರೆಲ್ಲರೂ ಮನೆಗೆ ಹೋಗುವರು. ಹೊಸ ಸಂಸದರು ಸಂಸತ್ತಿಗೆ ಪ್ರವೇಶಿಸುವರು ಎಂದು ಹೇಳಿದರು.

ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ‌. ಒಂದೇ ಒಂದು ಸ್ಮಾರ್ಟ್ ಸಿಟಿ ಆಗಲಿಲ್ಲ. ಬುಲೆಟ್ ರೈಲು ಓಡಲಿಲ್ಲ‌. ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಸರ್ಕಾರಿ ಸ್ವಾಮದ್ಯ ವಿಮಾನ ನಿಲ್ದಾಣ, ಬಂದರು, ರಾಷ್ಟ್ರೀಯ ಹೆದ್ದಾರಿ, ವಿದ್ಯುತ್‌ ಟ್ರಾನ್ಸಮಿಷನ್ ಗಳನ್ನು ಖಾಸಗೀಕರಣಗೊಳಿಸಿದ್ದಾರೆ. ದೇಶದ ಎಲ್ಲ ಪ್ರಧಾನಿಗಳು ₹54 ಲಕ್ಷ ಕೋಟಿ ಸಾಲ ಮಾಡಿದ್ದರು. ಮೋದಿ ಒಬ್ಬರೇ ₹130 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲ ಮಾಡಿದ್ದು ಬಿಟ್ಟರೆ ಅವರ ಸಾಧನೆ ಶೂನ್ಯ ಎಂದು ತಿಳಿಸಿದರು.

ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದರೆ, ದೇಶದ ಪ್ರಧಾನಿ ಆಗಿರಲಿಲ್ಲವೇ? ನಮ್ಮ ಇಂಡಿಯಾ ಒಕ್ಕೂಟ ಪ್ರಧಾನಿ ಯಾರಾಗಬೇಕೆಂಬುದು ನಿರ್ಧರಿಸುತ್ತದೆ. ಪ್ರಧಾನಿ ಅಭ್ಯರ್ಥಿಯೇ ಇಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರಿಗೆ ಮಾತಿಗೆ ಕಿಮ್ಮತ್ತಿಲ್ಲ. ಸುಳ್ಳು ಹೇಳುವುದೇ ಬಿಜೆಪಿಯ ಕೆಲಸ. ಒಂದು ಸಲ ಸುಳ್ಳನ್ನು ಹತ್ತು ಸಲ ಹೇಳಿ ಸತ್ಯವೆಂದು ನಂಬಿಸುತ್ತಾರೆ. ಹಿಟ್ಲರ್ ಬಳಿಯಿದ್ದ ಗೊಬೆಲ್ಸ್ ಎಂಬಾತ ಸುಳ್ಳನ್ನು ನೂರು ಸಲ ಹೇಳಿ ಸತ್ಯವೆಂದು ನಂಬಿಸುತ್ತಿದ್ದ‌. ಆ ಗೊಬೆಲ್ಸ್ ವಂಶಸ್ಥರು ಬಿಜೆಪಿಯವರು ಎಂದು ಟೀಕಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಹೊಸ ಬಸ್ ಖರೀದಿಸಿರಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಒಟ್ಟು 5,800 ಬಸ್ ಗಳ ಖರೀದಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಮೂರು ಸಾವಿರ ಬಸ್ ಗಳು ಬಂದಿವೆ. ಮಿಕ್ಕುಳಿದವು ಇಷ್ಟರಲ್ಲೇ ಬರಲಿವೆ. ಪ್ರತಿ ವರ್ಷ ಹತ್ತು ಸಾವಿರ ನೌಕರರು ಇಲಾಖೆಯಲ್ಲಿ ನಿವೃತ್ತರಾಗುತ್ತಾರೆ. ಕಾಲಕಾಲಕ್ಕೆ ನೇಮಕಾತಿ ಮಾಡಬೇಕು. ಬಿಜೆಪಿ ಈ ಕೆಲಸ ಮಾಡಿರಲಿಲ್ಲ‌. ಈಗ ಪುನಃ ಖಾಲಿ‌ ಹುದ್ದೆಗಳನ್ನು ತುಂಬಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಅಬ್ಸುಲ್ ಮನ್ನಾನ್ ಸೇಠ್, ಮುರಳೀಧರ ಏಕಲಾರಕರ್, ಪುಂಡಲೀಕರಾವ್, ಗುರಮ್ಮ ಸಿದ್ದಾರೆಡ್ಡಿ, ಜಾರ್ಜ್ ಫರ್ನಾಂಡೀಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.