ADVERTISEMENT

‘ಲೋಕಸಭಾ ಚುನಾವಣೆಗೆ ಮರಾಠ ಅಭ್ಯರ್ಥಿ ಸ್ಪರ್ಧೆ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:07 IST
Last Updated 15 ಏಪ್ರಿಲ್ 2024, 16:07 IST
ಡಾ.ದಿನಕರ ಮೋರೆ
ಡಾ.ದಿನಕರ ಮೋರೆ   

ಬೀದರ್‌: ‘ಹೋದ ವರ್ಷ ನಡೆದ ವಿಧಾನಸಭಾ ಚುನಾವಣೆ ಹಾಗೂ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮರಾಠ ಸಮುದಾಯದವರಿಗೆ ಟಿಕೆಟ್‌ ನೀಡದಿರುವ ಕಾರಣ ಸಮುದಾಯದ ನಿರ್ಧಾರದಂತೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಲಾಗಿದೆ’ ಎಂದು ಪಕ್ಷೇತರ ಅಭ್ಯರ್ಥಿ ಡಾ. ದಿನಕರ ಮೋರೆ ತಿಳಿಸಿದರು.

ನಗರದಲ್ಲಿ ಸೋಮವಾರ ‘ಬೀದರ್‌ ಸ್ವಾಭಿಮಾನಿ ಆಘಾಡಿ’ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು,‘ಲೋಕಸಭಾ ಚುನಾವಣೆಗೆ ಮರಾಠ ಸಮಾಜದಿಂದ ಯಾರಾದರೂ ಒಬ್ಬರನ್ನು ಕಣಕ್ಕಿಳಿಸುವ ವಿಚಾರ ಮೊದಲಿನಿಂದಲೂ ಇತ್ತು. ಮರಾಠ ಸಮುದಾಯ ಹಾಗೂ ಎಲ್ಲ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಹಿರಿಯರ ಹಾಗೂ ಗಣ್ಯರ ಪ್ರೇರಣೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಏ.19ರಂದು ನಾಮಪತ್ರ ಸಲ್ಲಿಸಲಾಗುವುದು’ ಎಂದು ಹೇಳಿದರು.

ಮರಾಠ ಸಮುದಾಯದ ಮುಖಂಡ ಪದ್ಮಾಕರ ಪಾಟೀಲ ಮಾತನಾಡಿ,‘ಮರಾಠ ಸಮುದಾಯದವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಡಾ.ದಿನಕರ ಮಾಧವರಾವ ಮೋರೆ ಅವರನ್ನು ಸರ್ವಾನುಮತದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ’ ಎಂದರು.

ADVERTISEMENT

‌ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಜನಪ್ರಿಯತೆ ಕಳೆದುಕೊಂಡಿವೆ. ಅವುಗಳ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಇಲ್ಲ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡಾ.ಬಾಲಾಜಿ ಸಾವಳೆಕರ್, ಜನರ್ದನ ಬಿರಾದಾರ, ರಾಮರಾವ ರಾವಣಗಾಂವೆ, ರಾವು ಸಾಹೇಬ ಬಿರಾದಾರ, ಯುವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಜೆಪಿಗೆ ಮರಾಠ ಮುಖಂಡರ ರಾಜೀನಾಮೆ

‘ಮರಾಠ ಸಮುದಾಯದಿಂದ ಚುನಾವಣೆಗೆ ಒಟ್ಟು ನಾಲ್ವರು ನಾಮಪತ್ರ ಸಲ್ಲಿಸುವರು. ಮುಖಂಡರಾದ ಪರಮೇಶ್ವರ ಕಿಶನರಾವ ಪಾಟೀಲ ರಾಮರಾವ ರಾವಣಗಾಂವೆ ನರೇಶ ಭೋಸ್ಲೆ ಹಾಗೂ ಡಾ. ದಿನಕರ ಮೋರೆ. ಈ ಪೈಕಿ ಮೂವರು ನಾಮಪತ್ರಗಳನ್ನು ವಾಪಸ್ ಪಡೆಯುವರು. ಡಾ. ದಿನಕರ ಮೋರೆ ಕಣದಲ್ಲಿ ಉಳಿದುಕೊಳ್ಳುವರು. ನಾಮಪತ್ರ ಸಲ್ಲಿಸಿದ ಬಳಿಕವೇ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದೇನೆ. ನನ್ನೊಂದಿಗೆ ಸುಮಾರು 25ಕ್ಕೂ ಹೆಚ್ಚು ಮರಾಠ ಮುಖಂಡರು ರಾಜೀನಾಮೆ ಸಲ್ಲಿಸುವರು. ರಾಷ್ಟ್ರೀಯ ಪಕ್ಷಗಳ ಅಹಂಕಾರ ಮುರಿದು ಮರಾಠ ಸಮಾಜಕ್ಕೆ ನ್ಯಾಯ ಒದಗಿಸುವುದು ನಮ್ಮ ಮೂಲ ಧ್ಯೇಯವಾಗಿದೆ’ ಎಂದು ಪದ್ಮಾಕರ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.