ಬೀದರ್: ಹೈದರಾಬಾದ್-ಪುಣೆ ರಾಷ್ಟ್ರೀಯ ಹೆದ್ದಾರಿ 65ರಲ್ಲಿರುವ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಮೊಳಕೇರಾ ಗ್ರಾಮ ಸಮೀಪದ ಆರ್.ಟಿ.ಒ. ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ಸೋಮವಾರ ತಡರಾತ್ರಿ ದಾಳಿ ನಡೆಸಿ, ದಾಖಲೆಯಿಲ್ಲದ ₹40 ಸಾವಿರ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.
‘ವಾಹನ ಸವಾರರು ಹಾಗೂ ಸರಕು ಸಾಗಣೆ ವಾಹನಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ಈ ದಾಳಿ ನಡೆದಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
‘ಸೋಮವಾರ ತಡರಾತ್ರಿ ಮೂರು ಗಂಟೆಗೆ ದಾಳಿ ನಡೆಸಿ, ಬುಧವಾರ ಮಧ್ಯಾಹ್ನದ ವರೆಗೆ ಶೋಧ ಕಾರ್ಯ ನಡೆಸಲಾಯಿತು. ದಾಖಲೆಯಿಲ್ಲದ ಒಟ್ಟು ₹40 ಸಾವಿರ ಜಪ್ತಿ ಮಾಡಿ, ಕೇಂದ್ರ ಕಚೇರಿಗೆ ಮಾಹಿತಿ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್ ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳು ಹಾಗೂ ಬೀದರ್‌ನ ಲೋಕಾಯುಕ್ತ ಡಿವೈಎಸ್ಪಿಗಳಾದ ಹನುಮಂತರಾಯ, ಗೀತಾ ಬೆನಾಳ, ಇನ್‌ಸ್ಪೆಕ್ಟರ್ಗಳಾದ ಅರುಣ್ ಕುಮಾರ್, ಅಕ್ಕಮಹಾದೇವಿ, ಸಿಬ್ಬಂದಿ ಪ್ರದೀಪ್, ಮಸೂದ್, ಬಸವರಾಜ, ಶರಣು, ಯಮನೂರಪ್ಪ, ರಾಜೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.