ADVERTISEMENT

₹10 ಲಕ್ಷ ಲಂಚದೊಂದಿಗೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಬುಡಾ ಆಯುಕ್ತ

ಕೃಷಿಯೇತರ ಜಮೀನಿನ ನಿವೇಶನಗಳ ಮಾರಾಟ ಅನುಮತಿಗೆ ₹50 ಲಕ್ಷ ಲಂಚಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 12:48 IST
Last Updated 22 ನವೆಂಬರ್ 2024, 12:48 IST
<div class="paragraphs"><p>ಶ್ರೀಕಾಂತ ಚಿಮಕೋಡೆ,&nbsp;ಚಂದ್ರಕಾಂತ ರೆಡ್ಡಿ,&nbsp;ಸಿದ್ದು ಹೂಗಾರ</p></div>

ಶ್ರೀಕಾಂತ ಚಿಮಕೋಡೆ, ಚಂದ್ರಕಾಂತ ರೆಡ್ಡಿ, ಸಿದ್ದು ಹೂಗಾರ

   

ಬೀದರ್‌: ಕೃಷಿಯೇತರ ಜಮೀನಿನ (ಎನ್‌.ಎ) ನಿವೇಶನಗಳ ಮಾರಾಟದ ಅನುಮತಿಗಾಗಿ ₹10 ಲಕ್ಷ ನಗದು ಲಂಚ ಪಡೆಯುತ್ತಿದ್ದಾಗ ಇಲ್ಲಿನ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಆಯುಕ್ತ ಸೇರಿದಂತೆ ಮೂವರು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಪ್ರಾಧಿಕಾರದ ಆಯುಕ್ತ ಶ್ರೀಕಾಂತ ಚಿಮಕೋಡೆ, ಸದಸ್ಯ ಚಂದ್ರಕಾಂತ ರೆಡ್ಡಿ ಹಾಗೂ ಇವರ ಆಪ್ತ ಸಿದ್ದು ಹೂಗಾರ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ಬೀದರ್ ನಗರದ ಚಿಕ್ಕಪೇಟೆಯಲ್ಲಿ ಸರ್ವೇ ನಂಬರ್‌ 26ರಲ್ಲಿ ಕೃಷಿಯೇತರ ಜಮೀನಿನ ಶೇ 60ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿ, ಅವುಗಳ ಮಾರಾಟಕ್ಕೆ ಅನುಮತಿ ಕೊಡಲು ಶ್ರೀಕಾಂತ ಹಾಗೂ ಚಂದ್ರಕಾಂತ ಅವರು ₹50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರನ್ವಯ ₹10 ಲಕ್ಷ ಮುಂಗಡ ಕೊಡುವುದರ ಬಗ್ಗೆ ಮಾತುಕತೆಯಾಗಿತ್ತು. ಬೀದರ್‌ನ ಪ್ರತಾಪ ನಗರದ ದಾಲ್‌ಮಿಲ್‌ ಸಮೀಪ ಶ್ರೀಕಾಂತ ಹಾಗೂ ಚಂದ್ರಕಾಂತ ಅವರ ಆಪ್ತ ಸಿದ್ದು ಹೂಗಾರ ಎಂಬಾತ ₹10 ಲಕ್ಷ ನಗದು ಪಡೆಯುತ್ತಿದ್ದಾಗ ದಾಳಿ ನಡೆಸಿ, ವಶಕ್ಕೆ ಪಡೆಯಲಾಯಿತು. ಆನಂತರ ಶ್ರೀಕಾಂತ ಹಾಗೂ ಚಂದ್ರಕಾಂತ ಅವರನ್ನೂ ವಶಕ್ಕೆ ಪಡೆದಿದ್ದೇವೆ’ ಎಂದು ಲೋಕಾಯುಕ್ತ ಎಸ್ಪಿ ಉಮೇಶ ಬಿ.ಕೆ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶ್ರೀಕಾಂತ ಚಿಮಕೋಡೆ ಅವರು ಬಿಜೆಪಿ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ ಅವರ ಅಳಿಯ.

ರಿಯಲ್‌ ಎಸ್ಟೇಟ್‌ ಉದ್ಯಮಿ ಸತೀಶ ನೌಬಾದೆ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಎಸ್ಪಿ ಉಮೇಶ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಹಣಮಂತರಾಯ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಸಂತೋಷ ರಾಠೋಡ್‌, ಬಾಬಾಸಾಹೇಬ್‌ ಪಾಟೀಲ, ಅರ್ಜುನಪ್ಪ, ಸಿಬ್ಬಂದಿ ವಿಷ್ಣುರಡ್ಡಿ, ಶ್ರೀಕಾಂತ, ಶಾಂತಲಿಂಗಪ್ಪ, ವಿಜಯಶೇಖರ, ಅಡೆಪ್ಪ, ಕಿಶೋರಕುಮಾರ, ಕುಶಾಲ, ಭರತ, ಶುಕ್ಲೋಧನ, ಸುವರ್ಣಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.