ADVERTISEMENT

ಬಸವಕಲ್ಯಾಣ: ಮದಾರಸಾಹೇಬ್ ಉರುಸ್‌ಗೆ ಹಿಂದೂಗಳ ಸಾರಥ್ಯ

ಕೊಹಿನೂರ ಪಹಾಡ್‌ನಲ್ಲಿ ನಾಳೆಯಿಂದ ಕಾರ್ಯಕ್ರಮ

ಮಾಣಿಕ ಆರ್ ಭುರೆ
Published 19 ನವೆಂಬರ್ 2024, 7:30 IST
Last Updated 19 ನವೆಂಬರ್ 2024, 7:30 IST
<div class="paragraphs"><p>ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ ಪಹಾಡ್‌ನ ಜಿಂದಾಶಾ ಮದಾರಸಾಹೇಬ್ ದರ್ಗಾ</p></div>

ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ ಪಹಾಡ್‌ನ ಜಿಂದಾಶಾ ಮದಾರಸಾಹೇಬ್ ದರ್ಗಾ

   

ಬಸವಕಲ್ಯಾಣ (ಬೀದರ್‌): ತಾಲ್ಲೂಕಿನ ಕೊಹಿನೂರ ಪಹಾಡ್ ಗ್ರಾಮದ ಜಿಂದಾಶಾ ಮದಾರಸಾಹೇಬ್ ದರ್ಗಾದ 608ನೇ ಉರುಸ್ ನವೆಂಬರ್ 20 ರಿಂದ ನಡೆಯಲಿದ್ದು, ಸಮಾಧಿಗೆ ಹಿಂದೂಗಳ ಮನೆಯಿಂದಲೇ ಗಂಧ, ಎಣ್ಣೆದೀಪ ತಂದು ಅರ್ಪಿಸುವ ಸಂಪ್ರದಾಯವಿದೆ. ಇಲ್ಲಿನ ಬಹುತೇಕ ಚಟುವಟಿಕೆಗಳಿಗೆ ಮುಸ್ಮಿಮೇತರರೇ ಸಾರಥ್ಯ ವಹಿಸುವುದು ವಿಶೇಷ.

ಕೊಹಿನೂರನಿಂದ 2 ಕಿ.ಮೀ ಅಂತರದಲ್ಲಿ ದರ್ಗಾ ಇದೆ. ಇದು ಸುತ್ತಲಿನ ಹತ್ತು ಊರುಗಳು ಕಾಣುವಷ್ಟು ಎತ್ತರದ ಗುಡ್ಡದ ಮೇಲಿರುವ ಕಾರಣ ಈ ಸ್ಥಳಕ್ಕೆ ಮುಸ್ಲಿಂ ಸಮುದಾಯದವರು ಪಹಾಡ್ ಎಂದು ಕರೆಯುತ್ತಾರೆ. ಇತರರಿಗೂ ಅದೇ ರೂಢಿಯಾಗಿ ಈಗ ಈ ಜಾಗ `ಕೊಹಿನೂರ ಪಹಾಡ' ಎಂದೇ ಹೆಸರಾಗಿದೆ. ದರ್ಗಾ ವ್ಯವಸ್ಥೆಗಾಗಿ ಕೊಹಿನೂರನಿಂದ ಒಂದು ಮುಸ್ಲಿಂ ಕುಟುಂಬ ಇಲ್ಲಿ ಬಂದು ನೆಲೆಸಿತ್ತು. ನೂರಾರು ವರ್ಷಗಳ ನಂತರ ಈಗ ಈ ಸ್ಥಳ ಗ್ರಾಮವಾಗಿ ಬೆಳೆದಿದೆ.

ADVERTISEMENT

ಜಾತ್ರೆಯನ್ನು ಕೊಹಿನೂರ ಗ್ರಾಮದವರೇ ಆಯೋಜಿಸುತ್ತಾರೆ. ಗ್ರಾಮದ ಶಿವಶರಣಪ್ಪ ಅಕ್ಕಾ ಮತ್ತು ಯುಸೂಫ್ ಸಾಬ್ ಬೇಸವಾಲೆ ಮನೆಯಿಂದ ಮೆರವಣಿಗೆಯೊಂದಿಗೆ ಗಂಧ ತರಲಾಗುತ್ತದೆ. ಬಸವರಾಜ ಮಹಾಜನ ಅವರ ಮನೆಯಿಂದ ದೀಪ ತರಲಾಗುತ್ತದೆ. ಕೊನೆಯ ದಿನದಂದು ಕೊಹಿನೂರನ ಗ್ರಾಮಸ್ಥರ ಪರವಾಗಿ ಊರ ದೀಪ ತಂದು ಅರ್ಪಿಸಲಾಗುತ್ತದೆ.

’ಮದಾರಸಾಹೇಬ್ ಸೂಫಿ ಸಂತರು ಆಯುರ್ವೇದ ವೈದ್ಯರಾಗಿದ್ದರು. ಜೊತೆಗೆ ಜಾತಿ ಬೇಧವಿಲ್ಲದೆ ಎಲ್ಲರೊಡನೆ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ಇವರ ಕೀರ್ತಿ ಎಲ್ಲೆಡೆ ಹರಡಿತು. ಈ ಗ್ರಾಮದ ಅನುಭಾವಿ ಕವಿಗಳ ಪದ್ಯಗಳನ್ನು ಪ್ರೊ.ಸರಸ್ವತಿ ಪಾಟೀಲ ಸಂಗ್ರಹಿಸಿದ್ದು, ಈ ಕವಿಗಳಲ್ಲಿ ಅನೇಕರು ತಮ್ಮ ಪದ್ಯಗಳಲ್ಲಿ ಮದಾರಸಾಬೇಬ್ ಹೆಸರು ಪ್ರಸ್ತಾಪಿಸಿರುವುದು ಕಂಡು ಬರುತ್ತದೆ‘ ಎಂದು ಜಾನಪದ ಹಾಡುಗಾರ ರೇವಣಸಿದ್ದಪ್ಪ ಸುಗೂರೆ ವಿವರಿಸಿದರು.

ದರ್ಗಾದ ಪೂರ್ವ ಮತ್ತು ಪಶ್ಚಿಮಕ್ಕೆ ಹಳೆಯ ಶೈಲಿಯ ಮಹಾದ್ವರಗಳಿವೆ. ಪೂರ್ವಾಭಿಮುಖವಾದ ದ್ವಾರದಿಂದ ಹೋಗುವುದಕ್ಕೆ 70ಕ್ಕೂ ಅಧಿಕ ಮೆಟ್ಟಿಲುಗಳಿವೆ. ಪಕ್ಕದಲ್ಲಿಯೇ ಆಕರ್ಷಕ ಶೈಲಿಯ ಮಸೀದಿಯೂ ಇದ್ದು ಮನಸೊರೆಗೊಳ್ಳುವ ಪ್ರವಾಸಿ ತಾಣವಾಗಿಯೂ ಇದು ಮಾರ್ಪಟ್ಟಿದೆ. ಪ್ರತಿ ಗುರುವಾರ, ಅಮಾವಾಸ್ಯೆ, ಹುಣ್ಣಿಮೆ ಹಾಗೂ ಉರೂಸ್‌ಗೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣಾದ ಭಕ್ತರು ಬರುತ್ತಾರೆ.

`ನವೆಂಬರ್ 20 ರಂದು ರಾತ್ರಿ 11 ಗಂಟೆಗೆ ಗಂಧ(ಸಂದಲ್) ದ ಮೆರವಣಿಗೆ ನಡೆಯುವುದು. ನವೆಂಬರ್ 21 ರಂದು ರಾತ್ರಿ 10 ಗಂಟೆಗೆ ದೀಪ (ಚಿರಾಗ್) ಅರ್ಪಿಸಲಾಗುತ್ತದೆ. ನವೆಂಬರ್ 22 ರಂದು ಮಧ್ಯಾಹ್ನ 2 ಗಂಟೆಗೆ ಜಂಗಿ ಪೈಲ್ವಾನರ ಕುಸ್ತಿ ಪಂದ್ಯ, ರಾತ್ರಿ 10 ಗಂಟೆಗೆ ಗ್ರಾಮ ದೀಪದ ಅರ್ಪಣೆ ನಡೆಯಲಿದೆ. ಪ್ರಸಿದ್ಧ ಹಾಡುಗಾರರಿಂದ ಗೀಗೀಪದ ಕಲಾಮೇಳವೂ ಆಯೋಜಿಸಲಾಗುತ್ತದೆ’ ಎಂದು ಜಾತ್ರಾ ಸಮಿತಿ ಕಾರ್ಯದರ್ಶಿ ರತಿಕಾಂತ ಕೊಹಿನೂರ ತಿಳಿಸಿದ್ದಾರೆ.

ಹೋಬಳಿ ಕೇಂದ್ರ ಕೊಹಿನೂರನ ಪ್ರತಿ ಮನೆಯವರು ಕೌಟುಂಬಿಕ ಕಾರ್ಯಕ್ರಮವಿದ್ದಾಗ ಪ್ರಥಮವಾಗಿ ಮದಾರಸಾಹೇಬ್‌ಗೆ ನೈವೇದ್ಯ ಅರ್ಪಿಸುತ್ತಾರೆ
-ರತಿಕಾಂತ ಕೊಹಿನೂರ, ಕಾರ್ಯದರ್ಶಿ ಜಾತ್ರಾ ಸಮಿತಿ
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ ಪಹಾಡ್‌ನ ಜಿಂದಾಶಾ ಮದಾರಸಾಹೇಬ್ ದರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.