ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಶುಕ್ರವಾರ ಶ್ರದ್ಧಾ, ಭಕ್ತಿ ಹಾಗೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಜನರು ಭಕ್ತಿಯಿಂದ ಶಿವನಾಮ ಸ್ಮರಣೆ ಮಾಡಿ, ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿದರು. ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜದಿಂದ ನಗರದ ಬಸವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು.
ನಗರದ ಪಾಪನಾಶ ಶಿವಲಿಂಗ ದೇವಸ್ಥಾನದಲ್ಲಿ ಮಹಾಶಿವರಾತ್ರಿಗೆ ಗುರುವಾರವೇ ಸಿದ್ಧತೆ ಮಾಡಲಾಗಿತ್ತು. ತಾತ್ಕಾಲಿಕ ಅಂಗಡಿ ಮುಂಗಟ್ಟುಗಳು ತಲೆ ಎತ್ತಿದ್ದವು. ಶುಕ್ರವಾರ ಬೆಳಕು ಹರಿಯುತ್ತಿದ್ದಂತೆ ಭಕ್ತರ ದಂಡು ಪಾಪನಾಶ ಕಡೆಗೆ ಮುಖ ಮಾಡಿತ್ತು. ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಜನ ಕುಟುಂಬ ಸದಸ್ಯರೊಂದಿಗೆ ದೇಗುಲಕ್ಕೆ ಬಂದು, ಸರತಿಯಲ್ಲಿ ನಿಂತು ಶಿವಲಿಂಗದ ದರ್ಶನ ಪಡೆದರು.
ಇದಕ್ಕೂ ಮುನ್ನ ದೇವಸ್ಥಾನದ ಪೂಜಾರಿಗಳು ಶಿವಲಿಂಗಕ್ಕೆ ಅಭಿಷೇಕ ಮಾಡಿ, ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿದರು. ಬಳಿಕ ಭಕ್ತರು ಸಾಲಿನಲ್ಲಿ ಬಂದು ದರ್ಶನ ಪಡೆದರು. ಹೊತ್ತು ಏರುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗ ತೊಡಗಿತು. ಪೊಲೀಸ್ ಬಂದೋಬಸ್ತ್‌ನಲ್ಲಿ ಭಕ್ತರನ್ನು ದೇಗುಲದೊಳಗೆ ಬಿಡಲಾಯಿತು.
‘ಫ್ರೆಂಡ್ಸ್’ ಅಸೋಸಿಯೇಷನ್‌ನವರು ಭಕ್ತರಿಗೆ ಹಣ್ಣುಗಳನ್ನು ವಿತರಿಸಿದರು. ದೇವರ ದರ್ಶನ ಪಡೆದ ಬಳಿಕ ಭಕ್ತರು ಪಾಪನಾಶ ಕೆರೆಯ ಪರಿಸರದಲ್ಲಿ ಕುಟುಂಬ ಸದಸ್ಯರೊಂದಿಗೆ ಓಡಾಡಿ ಕಾಲ ಕಳೆದರು. ಸಂಜೆ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ದಿನವಿಡೀ ಜಾತ್ರೆಯ ವಾತಾವರಣ ಇತ್ತು.
ಇನ್ನು, ನಗರದ ಬಸವ ಮಂಟಪದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದಿಂದ ಸಾಮೂಹಿಕ ಇಷ್ಟಲಿಂಗ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮಾತೆ ಸತ್ಯಾದೇವಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ಪಾಪನಾಶ ಸಮೀಪದ ರಾಮಕೃಷ್ಣ ವಿವೇಕಾನಂದ ಆಶ್ರಮ, ಸಿದ್ದಾರೂಢ ಮಠ ಸೇರಿದಂತೆ ಜಿಲ್ಲೆಯಾದ್ಯಂತ ಶಿವರಾತ್ರಿಯನ್ನು ಭಕ್ತಿಯಿಂದ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.