ಜನವಾಡ: ಬೀದರ್ ತಾಲ್ಲೂಕಿನ ಕಂಗನಕೋಟ ಶಿವಾರದಲ್ಲಿ ದನಗಳ ಮೂಳೆಗಳಿಂದ ಪೌಡರ್ ತಯಾರಿಸುವ ದಂದೆ ನಡೆದಿರುವುದು ಗೊತ್ತಾಗಿದೆ. ಗ್ರಾಮಸ್ಥರ ಪ್ರಕಾರ, ಗ್ರಾಮದ ಹೊಲವೊಂದರ ಎರಡು ಎಕರೆ ಪ್ರದೇಶದಲ್ಲಿ ಸುಮಾರು ಒಂದು ತಿಂಗಳಿಂದ ಈ ಚಟುವಟಿಕೆ ನಡೆದಿದೆ.
ಪೌಡರ್ ತಯಾರಿಕೆಗಾಗಿ ನೆರೆ ರಾಜ್ಯದ ಕಸಾಯಿಖಾನೆಗಳಿಂದ ದನಗಳ ಮೂಳೆಗಳನ್ನು ತಂದು ಸುರಿಯುತ್ತಿರುವ ಕಾರಣ ದುರ್ವಾಸನೆ ಹರಡುತ್ತಿದೆ. ಇದರಿಂದಾಗಿ ಕಂಗನಕೋಟ, ಮಂದಕನಳ್ಳಿ, ಶಮಶೇರನಗರ, ಮರ್ಜಾಪುರ, ಬಕ್ಕಚೌಡಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
‘ಗ್ರಾಮದ ಹೊಲವೊಂದರಲ್ಲಿ ದನದ ಮೂಳೆಗಳನ್ನು ಸುಟ್ಟು ಪೌಡರ್ ತಯಾರಿಸಿ ಸಾಗಣೆ ಮಾಡಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ಶಂಭು ಆರೋಪಿಸಿದ್ದಾರೆ.
‘ಜಾನುವಾರುಗಳ ಮೂಳೆ ಹಾಗೂ ಬುರುಡೆಗಳನ್ನು ಹೊಲದಲ್ಲಿ ಹರಡಿಸಿ ಒಣಗಿಸಲಾಗುತ್ತಿದೆ. ನಂತರ ಬುರುಡೆ ಹಾಗೂ ಮೂಳೆಗಳನ್ನು ಪ್ರತ್ಯೇಕಿಸಿ ಗುಡ್ಡೆ ಹಾಕಲಾಗುತ್ತಿದೆ. ಒಣಗಿದ ಮೂಳೆಗಳನ್ನು ಸುಟ್ಟು ಪೌಡರ್ ತಯಾರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಗ್ರಾಮಸ್ಥರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 20 ರಿಂದ 25 ಟ್ರಕ್‌ಗಳಷ್ಟು ಮೂಳೆಗಳು ಕಂಡವು. ಒಂದು ಕಡೆ ಮೂಳೆಗಳನ್ನು ಗುಡ್ಡೆ ಹಾಕಿ ಸುಡಲಾಗಿತ್ತು. ಮತ್ತೊಂದು ಕಡೆ ಬುರುಡೆಗಳನ್ನು ಹಾಕಲಾಗಿತ್ತು. 50 ಚೀಲಗಳಲ್ಲಿ ಪೌಡರ್ ತುಂಬಲಾಗಿತ್ತು. ಮೂವರು ಪೌಡರ್ ಅನ್ನು ಚೀಲದಲ್ಲಿ ತುಂಬುತ್ತಿದ್ದರು. ಜನರನ್ನು ಕಂಡು ಅವರು ಬೈಕ್‌ಗಳಲ್ಲಿ ಹೊರಟು ಹೋದರು’ ಎಂದು ತಿಳಿಸಿದರು.
‘ಮೂಳೆಗಳಿಂದ ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳು ಕೆಲವೊಮ್ಮೆ ಮೂಳೆಗಳನ್ನು ಗ್ರಾಮದಲ್ಲೂ ತಂದು ಬಿಡುತ್ತಿವೆ’ ಎಂದು ಹೇಳಿದರು.
‘ವರ್ಷದ ಹಿಂದೆ ಇಲ್ಲಿ ಶೆಡ್ ಒಂದನ್ನು ನಿರ್ಮಿಸಲಾಗಿತ್ತು. ಅದರೊಳಗೆ ಬೇರೆಡೆಯಿಂದ ತಂದ ಜಾನುವಾರುಗಳ ಮೂಳೆಗಳನ್ನು ಕುದಿಸಲಾಗುತ್ತಿತ್ತು. ಗ್ರಾಮಸ್ಥರು ಪ್ರತಿರೋಧ ಒಡ್ಡಿದಾಗ, ಶೆಡ್ ತೆಗೆದು ಹಾಕಲಾಗಿತ್ತು. ಈಗ ಒಂದು ತಿಂಗಳಿಂದ ದನಗಳ ಮೂಳೆಗಳನ್ನು ಸುಟ್ಟು ಪೌಡರ್ ತಯಾರಿಸುವ ದಂದೆ ನಡೆದಿದೆ’ ಎಂದು ಆಪಾದಿಸಿದರು.
‘ಮೂಳೆಗಳನ್ನು ಯಾವಾಗ ತಂದು ಹಾಕುತ್ತಾರೆ, ಎಲ್ಲಿಂದ ತರುತ್ತಾರೆ, ಪೌಡರ್ ತಯಾರಿಸಿ ಎಲ್ಲಿಗೆ ಸಾಗಿಸುತ್ತಾರೆ ಎನ್ನುವುದು ತಿಳಿದಿಲ್ಲ. ಆದರೆ, ಇದರ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದೆ’ ಎಂದು ತಿಳಿಸಿದರು.
ಒಬ್ಬ ವ್ಯಕ್ತಿಯ ಗುರುತು ಪತ್ತೆ
ಬೀದರ್: ‘ನೆರೆಯ ತೆಲಂಗಾಣದ ಜಹೀರಾಬಾದ್‌ನಲ್ಲಿ ಇರುವ ಕಸಾಯಿಖಾನೆಯಿಂದ ಜಾನುವಾರುಗಳ ಮೂಳೆಗಳನ್ನು ತಂದು ಸುಟ್ಟಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಈಗಾಗಲೇ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ತಿಳಿಸಿದ್ದಾರೆ.
‘ಪ್ರಾಥಮಿಕ ಮಾಹಿತಿಯ ಪ್ರಕಾರ ಮೂಳೆಗಳ ಬೂದಿಯನ್ನು ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ. ಇಲ್ಲಿಯ ಬೂದಿಯನ್ನು ಎಲ್ಲಿಗೆ ಕಳಿಸಲಾಗುತ್ತಿದೆ ಎನ್ನುವ ನಿಖರ ಮಾಹಿತಿ ತನಿಖೆಯ ನಂತರ ಗೊತ್ತಾಗಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.