ADVERTISEMENT

ಪೈಪೋಟಿಯಲ್ಲಿ ಸ್ಥಾನ ಗಿಟ್ಟಿಸಿದ ಮಾಲಾ, ಜಾಬಶೆಟ್ಟಿ

ನಿಗಮ ಮಂಡಳಿಗೆ ಮಾಜಿ ಶಾಸಕ ಬಿ. ನಾರಾಯಣರಾವ್‌ ಪತ್ನಿ ಮಾಲಾ, ಖಂಡ್ರೆ ಆಪ್ತ ಜಾಬಶೆಟ್ಟಿ ನೇಮಕ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಮಾರ್ಚ್ 2024, 1:57 IST
Last Updated 1 ಮಾರ್ಚ್ 2024, 1:57 IST
ಮಾಲಾ ಬಿ. ನಾರಾಯಣರಾವ್‌
ಮಾಲಾ ಬಿ. ನಾರಾಯಣರಾವ್‌   

ಬೀದರ್‌: ನಿಗಮ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಲು ಜಿಲ್ಲೆಯ ಕಾಂಗ್ರೆಸ್‌ ಮುಖಂಡರ ನಡುವೆ ಏರ್ಪಟ್ಟಿದ್ದ ತೀವ್ರ ಪೈಪೋಟಿಯಲ್ಲಿ ಬಸವರಾಜ ಜಾಬಶೆಟ್ಟಿ, ಮಾಲಾ ಬಿ. ನಾರಾಯಣರಾವ್‌ ಮೇಲುಗೈ ಸಾಧಿಸಿದ್ದಾರೆ.

ಬಸವರಾಜ ಜಾಬಶೆಟ್ಟಿ ಅವರನ್ನು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಬಸವರಾಜ ಜಾಬಶೆಟ್ಟಿ ಅವರು ಹಾಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿದ್ದಾರೆ. ಈ ಹಿಂದೆ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಉಪಾಧ್ಯಕ್ಷರಾಗಿ, ಎರಡು ಸಲ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆರಂಭದಿಂದಲೂ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯರಾಗಿದ್ದು, ಅವರ ಪಕ್ಷ ನಿಷ್ಠೆಗೆ ಈಗ ಅದೃಷ್ಟ ಖುಲಾಯಿಸಿದೆ. ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜಾಬಶೆಟ್ಟಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು.

ಬಸವಕಲ್ಯಾಣದ ಮಾಜಿ ಶಾಸಕ ಬಿ.ನಾರಾಯಣರಾವ್‌ ಅವರ ಪತ್ನಿ ಮಾಲಾ ಅವರಿಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಸರ್ಕಾರ ನೇಮಕ ಮಾಡಿದೆ. ಇವರು ಟೋಕರೆ ಕೋಳಿ (ಕಬ್ಬಲಿಗ) ಸಮುದಾಯದವರು.

ADVERTISEMENT

ನಾರಾಯಣರಾವ್‌ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಾರಾಯಣರಾವ್‌ ಅವರು ನಿಧನರಾದ ಬಳಿಕ 2021ರಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ‌ಚುನಾವಣೆಗೆ ಸ್ಪರ್ಧಿಸಿ 50,300 ಮತಗಳನ್ನು ಪಡೆದು, ಶರಣು ಸಲಗರ ವಿರುದ್ಧ ಪರಾಭವಗೊಂಡಿದ್ದರು. ಅದರ ನಂತರವೂ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಈಗ ಅವರಿಗೂ ಪಕ್ಷ ಮಣೆ ಹಾಕಿದೆ.

ಬಸವರಾಜ ಜಾಬಶೆಟ್ಟಿ

ಮುಖಂಡರಿಗೆ ನಿರಾಸೆ

ನಿಗಮ ಮಂಡಳಿಯ ಸ್ಥಾನದ ಮೇಲೆ ಜಿಲ್ಲೆಯ ಹಲವು ಮುಖಂಡರು ಕಣ್ಣು ಇಟ್ಟಿದ್ದರು. ಮುಖಂಡರಾದ ಬಾಬುರಾವ್‌ ಪಾಸ್ವಾನ್‌ ಆನಂದ್‌ ದೇವಪ್ಪ ಅಬ್ದುಲ್‌ ಮನ್ನಾನ್‌ ಸೇಠ್‌ ಸೇರಿದಂತೆ ಹಲವರು ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದ್ದು ನಿರಾಸೆಯಾಗಿದೆ. ‘ಪರಿಶಿಷ್ಟ ಜಾತಿ ಅಥವಾ ಅಲ್ಪಸಂಖ್ಯಾತರಿಗೆ ನಿಗಮ ಮಂಡಳಿಯಲ್ಲಿ ಆದ್ಯತೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಹುಸಿಯಾಗಿದೆ. ಪಕ್ಷದ ನಿರ್ಧಾರದಿಂದ ಬೇಜಾರಾಗಿದೆ. ಆದರೆ ಅದನ್ನು ಹೇಳಿಕೊಳ್ಳುವಂತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ ಮುಖಂಡರು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡರು.

‘ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸುವೆ’

ಬೆಳಿಗ್ಗೆಯಷ್ಟೇ ನನಗೆ ವಿಷಯ ಗೊತ್ತಾಯಿತು. ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಜಿಲ್ಲೆಯ ಸಚಿವರಾದ ಈಶ್ವರ ಬಿ. ಖಂಡ್ರೆ ರಹೀಂ ಖಾನ್‌ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದ ಸಮರ್ಪಿಸುತ್ತೇನೆ. ಪಕ್ಷ ಸಂಘಟನೆಗೆ ಬಹಳ ಕೆಲಸ ಮಾಡಿದ್ದೇನೆ. 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಬುಡಾ ಅಧ್ಯಕ್ಷನಾಗಿ ನೇಮಿಸಿದ್ದಾರೆ. ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸುತ್ತೇನೆ’ ಎಂದು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.