ಬೀದರ್: ‘ಪರಿಶ್ರಮವೇ ಸಾಧನೆಯ ಮೆಟ್ಟಿಲು. ವ್ಯಕ್ತಿಯ ಪರಿಶ್ರಮ ಹಾಗೂ ಅನುಭವ ಜತೆಗೂಡಿದರೆ ಅದು ಸಾಧಕರ ಸಾಲಿನಲ್ಲಿ ಗುರುತಿಸುವಂತೆ ಮಾಡುತ್ತದೆ’ ಎಂದು ಅಕ್ಷರ ದಾಸೋಹ ಯೋಜನೆಯ ಬೀದರ್ ತಾಲ್ಲೂಕಿನ ಸಹಾಯಕ ನಿರ್ದೇಶಕಿ ಗೀತಾ ಜಿ. ಅಭಿಪ್ರಾಯಪಟ್ಟರು.
ಇಲ್ಲಿಯ ಬ್ರಹ್ಮಪುರದ ಸತ್ಯಮೂರ್ತಿ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ 34ನೇ ‘ಮನೆಯಂಗಳದಲಿ ಮಾತು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಧನೆ ವ್ಯಕ್ತಿಯನ್ನು ಹುಡಕಿಕೊಂಡು ಬರುವುದಿಲ್ಲ. ಸಾಧನೆಗಾಗಿ ವ್ಯಕ್ತಿ ಶ್ರಮ ವಹಿಸಬೇಕಾಗುತ್ತದೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ನಮ್ಮ ಮಧ್ಯೆ ಇರುವ ಸಾಧಕರನ್ನು ಹುಡುಕಿ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ’ ಎಂದರು.
ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿ, ‘ನನ್ನ ಹುಟ್ಟೂರು ಮಂಗಳೂರು ತಾಲ್ಲೂಕಿನ ಅಶೋಕನಗರ. ಲಕ್ಷ್ಮಿ ಹಾಗೂ ಬಿ. ನಾರಾಯಣರಾವ್ ದಂಪತಿಯ ಮಗಳಾಗಿ ಜನಿಸಿದೆ. ನನ್ನ ತಂದೆಗೆ ನಾಲ್ಕು ಮಕ್ಕಳು ನಾನೇ ಎರಡನೇಯವಳು. ಎರಡನೇ ತರಗತಿಯಲ್ಲಿ ಇದ್ದಾಗ ನೃತ್ಯ ಅಭ್ಯಾಸ ಆರಂಭಿಸಿದೆ. ಐಬಿಎ ಕಾಲೇಜು ಮುಗಿಸುವ ಸಂದರ್ಭದಲ್ಲಿ ನನ್ನನ್ನು ಸತ್ಯಮೂರ್ತಿ ಅವರಿಗೆ ಮದುವೆ ಮಾಡಿಕೊಡಲಾಯಿತು’ ಎಂದು ತಿಳಿಸಿದರು.
‘ಮದುವೆಯಾದ ನಂತರ ಬೀದರ್ ಬಂದು ನೆಲೆಸಿದೆ. ಹತ್ತು ವರ್ಷಗಳ ನಂತರ ಮತ್ತೆ ನಾನು ನೃತ್ಯಕಲೆಯಲ್ಲಿ ತೊಡಗಿಸಿಕೊಂಡೆ. ಶಿಕ್ಷಕಿಯಾಗಬೇಕೆ ಎನ್ನುವ ಬಯಕೆ ನನ್ನದಾಗಿತ್ತು. ಬೀದರ್ ಜಿಲ್ಲೆಗೆ ಶಾಸ್ತ್ರೀಯ ನೃತ್ಯ ಕಲೆಯನ್ನು ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಮಕ್ಕಳಿಗೆ ನೃತ್ಯ ಕಲಿಸಲು ಶುರು ಮಾಡಿದೆ. ಇದು ನನಗೆ ಶ್ರೇಯಸ್ಸು ತಂದು ಕೊಟ್ಟಿತು’ ಎಂದು ಹೇಳಿದರು.
‘2003ರಲ್ಲಿ ನಾಟ್ಯಶ್ರೀ ನೃತ್ಯಾಲಯವನ್ನು ಪ್ರಾರಂಭಿಸಿ ಉದಯೋನ್ಮುಖ ಪ್ರತಿಭಾವಂತ ಕಲಾವಿದರಿಗೆ ನೃತ್ಯ ಕಲಿಸಿದೆ, ಕರಾವಳಿಯ ಸಾಂಸ್ಕೃತಿಕ ಕಲೆಯನ್ನು ಕಲ್ಯಾಣ ನಾಡಿನ ಜನರಿಗೆ ಪರಿಚಯಿಸಿರುವ ಹೆಮ್ಮೆ ನನಗೆ ಇದೆ’ ಎಂದರು.
‘17 ವರ್ಷಗಳಿಂದ ಸಂಸ್ಥೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪದ, ವಚನ ಸಾಹಿತ್ಯ, ಭಕ್ತಸುಧೆ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯನ್ನು ಬಿತ್ತರಿಸುವ ಕಾರ್ಯದಲ್ಲಿ ತೊಗಿಸಿಕೊಂಡಿರುವೆ. ಅನೇಕ ಸಂಘ-ಸಂಸ್ಥೆ ಹಾಗೂ ಮಠಾಧೀಶರುಗಳು ನೃತ್ಯಕುಸುಮ, ಕಲಾರತ್ನ, ಜನಶ್ರೀ, ಬಸವಕಲಾರತ್ನ, ನೃತ್ಯಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ’ ಎಂದು ತಿಳಿಸಿದರು.
‘ಬೀದರ್‌ನಲ್ಲಿ ನೃತ್ಯ ಪರೀಕ್ಷಾ ಕೇಂದ್ರವನ್ನು ಆರಂಭಿಸಬೇಕು ಎನ್ನುವ ಹೆಬ್ಬಯಕೆ ನನ್ನದಾಗಿದೆ. ಚುನಾಯಿತ ಪ್ರತಿನಿಧಿಗಳ ಸಹಕಾರ ಹಾಗೂ ಜನರ ಬೆಂಬಲ ಇದ್ದರೆ ಒಳ್ಳೆಯ ದಿನಗಳು ಬರುವುದು ದೂರ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೈಲಜಾ ದಿವಾಕರ ಹಾಗೂ ಡಾ.ಶ್ರೇಯಾ ಮಹೇಂದ್ರಕರ್ ಸಂವಾದ ನಡೆಸಿಕೊಟ್ಟರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸಿದ್ದರು.
ಕೆ .ಸತ್ಯಮೂರ್ತಿ, ಭಾನುಪ್ರಿಯ ಅರಳಿ, ಭಾರತಿ ವಸ್ತ್ರದ, ರಾಮಕೃಷ್ಣ ಸಾಳೆ, ಓಂಪ್ರಕಾಶ ಧಡ್ಡೆ, ರಾಮಚಂದ್ರ ಗಣಾಪೂರ, ವೀರಶೆಟ್ಟಿ ಮೈಲೂರಕರ್, ಕೆ. ಗುರುಮೂರ್ತಿ, ರಾಘವೇಂದ್ರ ಅಡಿಗ, ಸಂತೋಷ ಮಂಗಳೂರೆ, ಗೋವಿಂದ ಪೂಜಾರಿ, ಊಮಾಕಾಂತ ಮೀಸೆ, ದೇವಿದಾಸ ಜೋಶಿ ಇದ್ದರು.
ಕಸಾಪ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎಂ.ಮಚ್ಛೆ ಹಾಗೂ ಕಸ್ತೂರಿ ಪಟಪಳ್ಳಿ ನಿರೂಪಿಸಿದರು, ಸಂಜೀವಕುಮಾರ ಅತಿವಾಳೆ ಸ್ವಾಗತಿಸಿದರು. ಶಂಭುಲಿಂಗ ವಾಲ್ದೊಡ್ಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.