ಹುಮನಾಬಾದ್: ಸಮೀಪದ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಸ್ವಚ್ಛತೆ ಸೇರಿದಂತೆ ಇತರ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಗ್ರಾಮದ ಎಲ್ಲೆಡೆ ಚರಂಡಿಗಳು ಕೊಳಚೆ ನೀರಿನಿಂದ ತುಂಬಿ ಗಬ್ಬುವಾಸನೆ ಬರುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ರೋಗ ಭೀತಿ ಎದುರಾಗಿದೆ.
ಗ್ರಾಮದ ಬಹುತೇಕ ಕಾಲೊನಿಗಳಲ್ಲಿ ನೈರ್ಮಲ್ಯ ಸಮಸ್ಯೆ ಎದ್ದು ಕಾಣುತ್ತಿದೆ. ಸ್ವಚ್ಛತೆ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹಲವಾರು ತಿಂಗಳಿನಿಂದ ಪಂಚಾಯಿತಿ ಅಧಿಕಾರಿಗಳಿಗೆ ಕಾಲೊನಿಯ ವಾಸ್ತವ ಸ್ಥಿತಿ ಪರಿಶೀಲನೆ ಮಾಡಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿಗಳ ಸ್ವಚ್ಛತೆಯ ಬಗ್ಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಜನರ ಸಮಸ್ಯೆ ಆಲಿಸುತ್ತಿಲ್ಲ ಎಂಬುದು ಜನರ ದೂರಾಗಿದೆ.
ಗ್ರಾಮದಲ್ಲಿ ಜಲ ಜೀವನ್ ಮಷಿನ್ ಯೋಜನೆ ಅಡಿ ಮನೆ ಮನೆಗೆ ನೀರಿನ ಸಂಪರ್ಕವನ್ನು ನೀಡಿದ್ದಾರೆ. ಆದರೆ ಅದರಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸರಿಯಾಗಿ ನೀರು ಬರುತ್ತಿಲ್ಲ.
ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಮನೆಗಳಿದ್ದು, 4ಸಾವಿರ ಜನ ಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಒಂದು ಶುದ್ಧ ನೀರಿನ ಘಟಕ ಇದೆ. ಇದು ಸುಮಾರು ತಿಂಗಳುಗಳಿಂದ ಹದಗೆಟ್ಟು ಹೋಗಿದೆ. ಚರಂಡಿಗಳು ಕಲುಷಿತಗೊಂಡಿದ್ದು, ಅನೇಕ ರೋಗ ರುಜಿನಗಳ ಹೆಚ್ಚಲು ಕಾರಣವಾಗುತ್ತಿದೆ. ಸುಮಾರು ದಿನಗಳಾದರೂ ಜನ ಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿಗಳಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಇಮ್ತಿಯಾಜ್ ಖಾನ್ ಪಟೇಲ್, ಪಪ್ಪು ಪಾಟೀಲ.
ನಾವು ಮೌಖಿಕವಾಗಿ ಹಾಗೂ ಅರ್ಜಿಗಳ ಮುಖಾಂತರ ಮನವಿ ಮಾಡಿಕೊಂಡರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡುವುದೊಂದು ಬಾಕಿ ಇದೆ ಎನ್ನುತ್ತಾರೆ ಅವರು.
ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ 65 ಹಾದು ಹೋಗಿದೆ. ಇದರ ಸರ್ವಿಸ್ ರಸ್ತೆಗಳ ಮೇಲೆ ರಾಶಿ ರಾಶಿ ಕಸ ಸಂಗ್ರಹಗೊಂಡು ಹಂದಿ ಬಿಡಾಡಿ ನಾಯಿಗಳ ತಾಣವಾಗಿ ಮಾರ್ಪಟ್ಟಿದೆ. ಈ ರಸ್ತೆಯ ಪಕ್ಕದ ಜನರು ಈ ರಸ್ತೆಯ ಮೇಲೆ ಓಡಾಡಬೇಕಾದರೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸಂಬಂಧಿಸಿದವರು ರಸ್ತೆ ಮೇಲೆ ಸಂಗ್ರಹಗೊಂಡ ಕಸ ವಿಲೇವಾರಿ ಮಾಡಬೇಕು ಎಂದು ಗ್ರಾಮಸ್ಥರ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಎದುರು ಹೈಮಾಸ್ಟ್ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅನೇಕ ದಿನಗಳಿಂದ ಹಾಳಾಗಿವೆ. ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಬೇಕು. ಪಪ್ಪು ಪಾಟೀಲಗ್ರಾಮದ ನಿವಾಸಿ
ಗ್ರಾಮ ಪಂಚಾಯಿತಿ ಎದುರು ಹೈಮಾಸ್ಟ್ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಅನೇಕ ದಿನಗಳಿಂದ ಹಾಳಾಗಿವೆ. ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಬೇಕು.ಪಪ್ಪು ಪಾಟೀಲ, ಗ್ರಾಮದ ನಿವಾಸಿ
ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದು ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸೊಳ್ಳೆ ಮತ್ತು ನೋಣಗಳ ಕಾಟ ಹೆಚ್ಚಾಗಿದ್ದು ಸಂಬಂಧಿತರು ಗಮನ ಹರಿಸಿ ಚರಂಡಿ ನಿರ್ಮಿಸಬೇಕು.ಇಮ್ತಿಯಾಜ್ ಖಾನ್ ಪಟೇಲ್ ಗ್ರಾ.ಪಂ.ಮಾಜಿ ಸದಸ್ಯ
ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವೆ. ಸದ್ಯ ಚರಂಡಿ ಸಮಸ್ಯೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು.ಲಕ್ಷ್ಮಿ ಬಿರಾದರ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ, ಚಿಟ್ಟಗುಪ್ಪ
24 ಗಂಟೆಯೂ ಇಲ್ಲಿ ಸಿಗುತ್ತದೆ ಮದ್ಯ!
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಸುಮಾರು 8ಕ್ಕೂ ಹೆಚ್ಚು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮದ ಹಿರಿಯ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ. ದಿನದ 24 ಗಂಟೆಯೂ ಈ ಗ್ರಾಮದಲ್ಲಿ ಮದ್ಯ ಸಿಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ಸಹಕಾರದಿಂದಾಗಿಯೇ ಯಾವುದೇ ಅನುಮತಿ ಇಲ್ಲದಿದ್ದರೂ ರಾಜಾರೋಷವಾಗಿ ಮಾರಾಟ ಮಾಡುತ್ತಾರೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.