ADVERTISEMENT

ಶರಣರ ಬದುಕು ವಸ್ತುನಿಷ್ಠ ದಾಖಲಿಸಿದ್ದು ಜನಪದರು: ಮಹಾಮಠದ ಪ್ರಭುದೇವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2024, 4:58 IST
Last Updated 11 ಅಕ್ಟೋಬರ್ 2024, 4:58 IST
ಬೀದರ್‌ನ ಬಸವಗಿರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿದರು
ಬೀದರ್‌ನ ಬಸವಗಿರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿದರು   

ಬೀದರ್‌: ‘ಬಸವಾದಿ ಶರಣರ ಬದುಕು ಮತ್ತು ಸಂದೇಶವನ್ನು ವಸ್ತು ನಿಷ್ಠವಾಗಿ ದಾಖಲಿಸಿದವರು ಜನಪದರು’ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ತಿಳಿಸಿದರು.

ನಗರದ ಬಸವಗಿರಿಯಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಮರಣವೇ ಮಹಾನವಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರೆ ಇಷ್ಟಲಿಂಗ ಜನಕರೆಂಬ ಐತಿಹಾಸಿಕ ಸತ್ಯವನ್ನು ‘ಅರಹುದಕ್ಕೆ ಕುರಹೆಂದು ಕರಲಿಂಗ ನೀ ಕೊಟ್ಟೆ’ ಎಂದು ಜನಪದರು ಹಾಡಿದ್ದಾರೆ. ಬಸವಣ್ಣನವರ ತತ್ವಗಳಾದ ಕಾಯಕ – ದಾಸೋಹ – ಅನುಭಾವಗಳ ಬಗ್ಗೆಯೂ ಕೃತಜ್ಞತೆಯಿಂದ ನೆನೆದಿದ್ದಾರೆಂದು ತ್ರಿಪದಿಗಳ ಸಮೇತ ಉದಾಹರಿಸಿದರು. 

ADVERTISEMENT

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಎಲ್ಲ ಸಾಹಿತ್ಯಗಳ ತಾಯಿ ಬೇರು ಜನಪದ ಸಾಹಿತ್ಯ. ತಾವು ಕಂಡುಂಡ ನೋವು ನಲಿವು, ಹಬ್ಬ - ಹರಿದಿನ – ಜಾತ್ರೆ, ಪ್ರಭಾವ ಬೀರಿದ ವಿಭೂತಿ ಪುರುಷರು, ಶರಣರು ಮುಂತಾದವುಗಳ ಬಗ್ಗೆ ಪದಗಳನ್ನು ರಚಿಸಿ ಹಾಡಿದ್ದಾರೆ ಎಂದರು.

ಜನಪದರ ಮೇಲೆ ಬಸವಾದಿ ಶರಣರ ಪ್ರಭಾವ ಅಪಾರವಾಗಿತ್ತು. ಶರಣರ ಕಲ್ಯಾಣ ಕ್ರಾಂತಿಯನ್ನು ಹೃದಯ ತುಂಬಿ ನೆನೆದಿದ್ದಾರೆ. ಬಸವಣ್ಣ, ಚನ್ನಬಸವಣ್ಣ, ಮೇದಾರ ಕೇತಯ್ಯ, ಕುಂಬಾರ ಗುಂಡಯ್ಯನವರು ಸೇರಿದಂತೆ ನೂರಾರು ಶರಣರ ಕುರಿತು ವಸ್ತು ನಿಷ್ಠವಾಗಿ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಬಸವ ಸೇವಾ ಪ್ರತಿಷ್ಠಾನದ ಅಶೋಕ ಎಲಿ, ಉದ್ಯಮಿ ಅಶೋಕ ಉಪ್ಪೆ, ಅಷ್ಟೂರ್‌ ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಪಾಟೀಲ, ನಿವೃತ ಪೊಲೀಸ್‌ ಅಧಿಕಾರಿ ಮಾರುತಿ ಪಾಟೀಲ, ನೀಲಮ್ಮ ಬಳಗದ ಸಂಗೀತಾ ಗಣಚಾರಿ, ಶೋಭಾ ಕೂಡಂಬಲ, ಪ್ರೇಮಲತಾ ಕುಲಾಲ, ಕಂಟೆಪ್ಪ ಗಂದಿಗುಡ್ಡೆ, ರೇವಣಪ್ಪ ಮೂಲಗೆ, ಚಂದ್ರಕಾಂತ ಪಟ್ನೆ, ಸಚ್ಚಿದಾನಂದ ಮಠಪತಿ, ಸಂತೋಷಿ ವಿರೇಂದ್ರಕುಮಾರ  ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.