ಖಟಕಚಿಂಚೋಳಿ: ನಾಲ್ಕು ನೂರರ ಗಡಿದಾಟುವ ಮೂಲಕ ಬೆಳ್ಳುಳ್ಳಿ, ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಜತೆಗೆ ನುಗ್ಗೇಕಾಯಿ ದರವೂ ₹ 140 ಗಡಿಯಲ್ಲಿದ್ದರೆ, ಉಳಿದಂತೆ ತರಕಾರಿ ದರವು ಗ್ರಾಹಕರಿಗೆ ಸಮಾಧಾನಕರ ಸಂಗತಿಯಾಗಿದೆ.
ಸದ್ಯದ ಋತುವಿನಲ್ಲಿ ಮಳೆಯ ಕೊರತೆಯಿಂದಾಗಿ ಬೆಳ್ಳುಳ್ಳಿಯುನ್ನು ಹೆಚ್ಚಾಗಿ ಬೆಳೆದಿಲ್ಲ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಆವಕವಿಲ್ಲದ್ದರಿಂದ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಬೆಳ್ಳುಳ್ಳಿ ಆವಕ ಹೆಚ್ಚಾದರೆ, ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ.
‘ಸದ್ಯ ಹೊಸ ಬೆಳೆ ಮಾರುಕಟ್ಟೆಗೆ ಬರುತ್ತಿಲ್ಲ. ಮುಂದಿನ ಹದಿನೈದು ದಿನಗಳ ನಂತರ ಹೊಸ ಬೆಳ್ಳುಳ್ಳಿ ಬರುತ್ತವೆ. ಅಲ್ಲಿವರೆಗೆ ಬೆಲೆಯಲ್ಲಿ ಇಳಿಕೆಯಾಗುವುದಿಲ್ಲ’ ಎಂದು ವ್ಯಾಪಾರಿ ಸುರೇಶ ಹೇಳಿದರು.
‘ಇನ್ನೂ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹140, ಚವಳೆಕಾಯಿ ₹60, ಟೊಮೆಟೊ ₹40, ಆಲೂಗಡ್ಡೆ ₹30, ಬದನೆಕಾಯಿ ₹40, ಹಿರೇಕಾಯಿ ₹50 ಮಾರಾಟವಾಗುತ್ತಿವೆ.
‘ಬೆಳ್ಳುಳ್ಳಿ ದರ ದುಬಾರಿಯಾಗಿರುವುದರಿಂದ ಬಹುತೇಕ ತರಕಾರಿ ವ್ಯಾಪಾರಿಗಳು ಮಾರಾಟಕ್ಕೆ ಇಡುತ್ತಿಲ್ಲ. ಇನ್ನೂ ಕೆಲವರು ಗ್ರಾಹಕರಲ್ಲಿ ಮುಂಗಡ ಹಣ ಪಡೆದುಕೊಂಡು ತಂದುಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವ್ಯಾಪಾರಿ ಶಿವಕುಮಾರ ಹೇಳಿದರು.
‘ಸೊಪ್ಪುಗಳ ದರದಲ್ಲಿ ಈ ವಾರ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಪಾಲಕ್ ₹20ಕ್ಕೆ 5 ಕಟ್ಟು, ಕೊತ್ತಂಬರಿ ₹10ಕ್ಕೆ 3ಕಟ್ಟು, ಮೆಂತೆ ಸೊಪ್ಪು ₹20ಕ್ಕೆ 4 ಕಟ್ಟು ಮಾರಾಟ ಮಾಡಲಾಗುತ್ತಿದೆ. ಬಹುತೇಕ ಎಲ್ಲ ಸೊಪ್ಪುಗಳ ದರವೂ ಕಡಿಮೆಯೇ ಇದೆ’ ಎಂದು ವ್ಯಾಪಾರಿ ಅಹಮ್ಮದ್ ಪಾಷಾ ಹೇಳುತ್ತಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ತರಕಾರಿಗಳು ಬೇರೆ ರಾಜ್ಯಗಳಿಂದ ಆವಕವಾಗುತ್ತಿರುವುದರಿಂದ ಬೆಲೆಯಲ್ಲಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ದರ ಕಡಿಮೆಯಾಗುತ್ತದೆ-ಸುರೇಶ ಗೌರೆ, ತರಕಾರಿ ವ್ಯಾಪಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.