ADVERTISEMENT

ಖಟಕಚಿಂಚೋಳಿ: ಯುವ ರೈತನ ಬಾಳು ಬೆಳಗಿದ ಹಿರೇಕಾಯಿ

ಗಿರಿರಾಜ ಎಸ್ ವಾಲೆ
Published 11 ಜುಲೈ 2024, 3:16 IST
Last Updated 11 ಜುಲೈ 2024, 3:16 IST
ಖಟಕಚಿಂಚೋಳಿ ಸಮೀಪದ ಮಲ್ಕಾಪುರ ವಾಡಿ ಗ್ರಾಮದ ರೈತ ರವಿ ಪ್ರಭಾನೋರ್ ಬೆಳೆದ ಹಿರೇಕಾಯಿ ಬೆಳೆಯೊಂದಿಗೆ
ಖಟಕಚಿಂಚೋಳಿ ಸಮೀಪದ ಮಲ್ಕಾಪುರ ವಾಡಿ ಗ್ರಾಮದ ರೈತ ರವಿ ಪ್ರಭಾನೋರ್ ಬೆಳೆದ ಹಿರೇಕಾಯಿ ಬೆಳೆಯೊಂದಿಗೆ   

ಖಟಕಚಿಂಚೋಳಿ: ಸಮೀಪದ ಮಲ್ಕಾಪುರ ವಾಡಿ ಗ್ರಾಮದ ರೈತ ರವಿ ಪ್ರಭಾನೋರ್ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಹಿರೇಕಾಯಿ ಬೆಳೆದಿದ್ದಾರೆ. ಬೆಳೆ ಹುಲುಸಾಗಿ ಬೆಳೆದಿದ್ದು ಅದಕ್ಕೆ ತಕ್ಕಂತೆ ಬೆಲೆಯೂ ಸಿಗುತ್ತಿದೆ. 

ಪದವಿ ಮಾಡಿರುವ ರವಿ ಅವರು ಹಿರಿಯರಿಂದ ಬಂದ 8 ಎಕರೆ ಜಮೀನಿನಲ್ಲಿ ಸಾಂಪ್ರಾದಾಯಿಕ ಬೆಳೆಯೊಂದಿಗೆ ವಿವಿಧ ಬಗೆಯ ತರಕಾರಿ, ಪಪ್ಪಾಯಿ ಕೂಡ ಬೆಳೆದಿದ್ದಾರೆ.

ಸದ್ಯ ಒಂದು ಎಕರೆಯಲ್ಲಿ ಬೆಳೆದ ಹಿರೇಕಾಯಿ ಬೆಳೆ ತುಂಬಾ ಹುಲುಸಾಗಿ ಬೆಳೆದಿದೆ. ಕೇವಲ 45-50 ದಿನಗಳಲ್ಲಿ ಕಟಾವಿಗೆ ಬರುವ ಹಿರೇಕಾಯಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಹಿರೇಕಾಯಿ ಪ್ರತಿ ಕೆ.ಜಿಗೆ ₹50 ರಂತೆ ಮಾರಾಟ ಆಗುತ್ತಿದೆ.

ADVERTISEMENT

ಹೊಲ ಹದ ಮಾಡುವುದು, ಬಿತ್ತನೆ ಬೀಜ, ರಸಗೊಬ್ಬರ ಔಷಧ ಸಿಂಪಡಣೆ ಸೇರಿ ಸುಮಾರು ₹20 ಸಾವಿರ ಖರ್ಚಾಗಿದೆ.

‘ಹೀರೆಕಾಯಿ ಬೆಳೆಯಲು ಸುಮಾರು ₹20 ಸಾವಿರ ಖರ್ಚು ಮಾಡಿದ್ದೇನೆ. 45 ದಿನಗಳ ನಂತರ ಪ್ರತಿ ಎರಡು ದಿನಗಳಿಗೊಮ್ಮೆ ಫಸಲನ್ನು ಕಟಾವು ಮಾಡುತ್ತೇನೆ. ಪ್ರತಿ ಬಾರಿ ಸುಮಾರು 300 ಕೆ.ಜಿ ಇಳುವರಿ ಬರುತ್ತಿದೆ’ ಎನ್ನುತ್ತಾರೆ.

‘ಮಾರುಕಟ್ಟೆಯಲ್ಲಿ ಹೀರೆಕಾಯಿ ಕ್ವಿಂಟಲ್‌ಗೆ ₹5,000 ದಿಂದ ₹5,500ನಂತೆ ಮಾರಾಟ ಆಗುತ್ತಿದೆ. ಸದ್ಯ ನಾಲ್ಕು ಬಾರಿ ಕಟಾವು ಮಾಡಿದ್ದು ಖರ್ಚು ಮಾಡಿದ ಹಣ ಲಭಿಸಿದೆ. ಮುಂದೆ ಬರುವ ಹಣವೆಲ್ಲಾ ಲಾಭ’ ಎಂದು ಸಂತಸ ವ್ಯಕ್ತಪಡಿಸಿದ ರವಿ, ‘ಸ್ವಂತ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುವುದರೊಂದಿಗೆ ಗ್ರಾಮದ ಇತರ ರೈತರ ಜಮೀನು ಲಾವಣಿ ಮಾಡಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತೇನೆ. ಇದರಿಂದ ಹೆಚ್ಚಿನ ಆದಾಯ ಬರುತ್ತಿದೆ’ ಎಂದರು. 

‘ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾಗದೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಪಡೆಯಬಹುದು. ಸದ್ಯ ಹಿರೇಕಾಯಿ ಬೆಳೆಯಿಂದ ಹೆಚ್ಚಿನ ಲಾಭ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೇ ಮೂರು ಎಕರೆ ಪ್ರದೇಶದಲ್ಲಿ ಹಿರೇಕಾಯಿ ಬೆಳೆಯುವ ಇಚ್ಛೆ ಹೊಂದಿದ್ದೇನೆ’ ಎಂದು ರವಿ ಹುಮ್ಮಸ್ಸಿನಿಂದ ಹೇಳಿದರು.

ಖಟಕಚಿಂಚೋಳಿ ಸಮೀಪದ ಮಲ್ಕಾಪುರ ವಾಡಿ ಗ್ರಾಮದ ರೈತ ರವಿ ಪ್ರಭಾನೋರ್ ಬೆಳೆದ ಹಿರೇಕಾಯಿ ಬೆಳೆಯೊಂದಿಗೆ
ಯುವಕರು ಕೆಲಸಕ್ಕಾಗಿ ಪಟ್ಟಣಕ್ಕೆ ಹೋಗುವ ಬದಲು ಇದ್ದ ಜಮೀನಿನಲ್ಲೇ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ಸು ಕಾಣಬೇಕು
ರವಿ ಪ್ರಭಾನೋರ್ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.