ADVERTISEMENT

ಬೀದರ್‌: ಮೆಥೋಡಿಸ್ಟ್‌ ಚರ್ಚ್‌ ಬೆಳ್ಳಿ ಮಹೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 16:23 IST
Last Updated 8 ಜುಲೈ 2024, 16:23 IST
ಬೀದರ್‌ನ ವಿದ್ಯಾನಗರದ ಮೆಥೋಡಿಸ್ಟ್‌ ಚರ್ಚ್‌ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಕ್ರೈಸ್ತರು ಭಕ್ತಿ ಭಾವದಿಂದ ಹೆಜ್ಜೆ ಹಾಕಿದರು
ಬೀದರ್‌ನ ವಿದ್ಯಾನಗರದ ಮೆಥೋಡಿಸ್ಟ್‌ ಚರ್ಚ್‌ ಬೆಳ್ಳಿ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಕ್ರೈಸ್ತರು ಭಕ್ತಿ ಭಾವದಿಂದ ಹೆಜ್ಜೆ ಹಾಕಿದರು   

ಬೀದರ್‌: ಇಲ್ಲಿನ ವಿದ್ಯಾನಗರದ ಮೆಥೋಡಿಸ್ಟ್‌ ಚರ್ಚ್‌ ಬೆಳ್ಳಿ ಮಹೋತ್ಸವದ ಎರಡು ದಿನಗಳ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿ ತೆರೆ ಬಿತ್ತು.

ವಿದ್ಯುತ್‌ ದೀಪಗಳಿಂದ ಅಲಂಕರಿಸಿದ ಚರ್ಚ್‌ ಆವರಣದಲ್ಲಿ ಎರಡು ದಿನ ಜಾತ್ರೆಯ ವಾತಾವರಣ ಇತ್ತು. ವಿವಿಧ ಭಾಗಗಳ ಕ್ರೈಸ್ತರು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎರಡು ದಿನ ದೈವ ಸಂದೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಭಾನುವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು. ಇಲ್ಲಿನ ಮೈಲೂರ್‌ ಕ್ರಾಸ್‍ನಿಂದ ವಿದ್ಯಾನಗರ ಚರ್ಚ್ ವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಭಾಗವಹಿಸಿ ಮೈಮರೆತು ಹೆಜ್ಜೆ ಹಾಕಿದರು. ಸಾರೋಟಿನಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್. ಕರಕರೆ ಅವರ ಮೆರವಣಿಗೆ ಮಾಡಲಾಯಿತು. 

ADVERTISEMENT

ರಾತ್ರಿ ನಡೆದ ಕಾರ್ಯಕ್ರಮದಲ್ಲಿ ದೈವ ಸಂದೇಶ ನೀಡಿದ ಬಿಷಪ್ ಎನ್.ಎಲ್. ಕರಕರೆ, ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯಿಂದ ಇರಬೇಕು. ಎಲ್ಲ ಧರ್ಮಗಳ ಮಧ್ಯೆ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು. 

ಕಳೆದ 25 ವರ್ಷಗಳ ಹಿಂದೆ ವಿದ್ಯಾನಗರದಲ್ಲಿ ಚರ್ಚ್ ಸ್ಥಾಪಿಸಲಾಗಿತ್ತು. ಇದೀಗ ದೊಡ್ಡಮಟ್ಟದಲ್ಲಿ ಬೆಳೆದಿರುವುದು ಖುಷಿ ತಂದಿದೆ. ಇಲ್ಲಿನ ಎಲ್ಲ ಜನರು ಒಗ್ಗಟ್ಟಿನಿಂದ ಇದ್ದು ಚರ್ಚ್ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮೆಥೋಡಿಸ್ಟ್ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ, ರೆವರೆಂಡ್‌ ಸೈಮನ್ ಮಾರ್ಕ್, ಎಸ್.ಎಲ್. ತುಕರಾಮ, ಆಲ್ಬರ್ಟ್ ಕೋಟೆ, ಡಾ.ಸತೀಶಕುಮಾರ ಎಂ. ಡೇವಿಡ್, ಬಿ.ಜೆ. ಸ್ಯಾಮುವೆಲ್, ಸ್ವಾಮಿದಾಸ ಬೇಂದ್ರೆ, ಎಂ.ಎಚ್. ಡೇವಿಡ್, ಸುಧಾಕರ ಕಟ್ಟಿ, ಸಾಲೋಮನ್, ಅರುಣ, ಸುಭದ್ರಾ ಡೇವಿಡ್, ಸರೋಜನಿ ಶಿರೋಮಣಿ, ಚರ್ಚ್ ಸಭಾ ಪಾಲಕಿ ನಿರ್ಮಲಾ ಸೈಮನ್ ಮಾರ್ಕ್, ಸಂಪತಕುಮಾರ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.