ADVERTISEMENT

ಬ್ರಿಮ್ಸ್‌ಗೆ ಸಚಿವ ಈಶ್ವರ ಖಂಡ್ರೆ ಭೇಟಿ; ಡೆಂಗಿ ನಿಯಂತ್ರಿಸಲು ಸೂಚನೆ

‘ದಿನಕ್ಕೆ 600 ಡೆಂಗಿ ಪರೀಕ್ಷೆ ನಡೆಸಿ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 13:15 IST
Last Updated 10 ಜುಲೈ 2024, 13:15 IST
   

ಬೀದರ್‌: ‘ಡೆಂಗಿ ಪ್ರಕರಣಗಳು ಹೆಚ್ಚಾಗದಂತೆ ನಿಯಂತ್ರಿಸಬೇಕು. ದಿನಕ್ಕೆ ಕನಿಷ್ಠ 500ರಿಂದ 600 ಜನರನ್ನು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಬ್ರಿಮ್ಸ್‌) ಬುಧವಾರ ಸಂಜೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಬ್ರಿಮ್ಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಿದರು.

ತಾಲ್ಲೂಕು ಕೇಂದ್ರಗಳ ಖಾಸಗಿ ಆಸ್ಪತ್ರೆಯಲ್ಲಿ ಡೆಂಗಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ಅಂತಹವರ ಮಾಹಿತಿ ಸಂಗ್ರಹಿಸಬೇಕು. ಡೆಂಗಿ ಹರಡದಂತೆ ಎಚ್ಚರಿಕೆ ವಹಿಸಬೇಕು. ಗಪ್ಪಿ ಮೀನುಗಳ ಕೊರತೆ ಆಗದಂತೆ ನಿಗಾ ವಹಿಸಿ, ನೀರು ನಿಂತಿರುವ ಸ್ಥಳಗಳಲ್ಲಿ ಮೀನುಗಳನ್ನು ಬಿಡಬೇಕೆಂದು ಸೂಚಿಸಿದರು.

ADVERTISEMENT

ಜನವಸತಿ ಪ್ರದೇಶಗಳಲ್ಲಿ, ನೀರು ನಿಲ್ಲುವ ಕಡೆಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಕಂದಾಯ, ಪಂಚಾಯತ್ ರಾಜ್, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಎಲ್ಲ ಗ್ರಾಮಿಣ, ನಗರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಕೆಳಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಪಂ ಸಿಇಒ ಡಾ. ಗಿರೀಶ್‌ ಬದೋಲೆ ಅವರಿಗೆ ನಿರ್ದೇಶನ ಕೊಟ್ಟರು.

ಡೆಂಗಿಯಿಂದ ಯಾವುದೇ ಸಾವುನೋವುಗಳು ಆಗಬಾರದು. ಶೀಘ್ರ ಜಿಲ್ಲೆ ಡೆಂಗಿ ಮುಕ್ತ ಅಂತ ಘೋಷಿಸಬೇಕು. ನಗರಸಭೆ ಪೌರಾಯುಕ್ತರು ನಗರದಲ್ಲಿ ಪ್ರದಕ್ಷಿಣೆ ಹಾಕಿ ಪರಿಶೀಲಿಸಬೇಕೆಂದು ಶಿವರಾಜ್‌ ರಾಠೋಡ್‌ ಅವರಿಗೆ ಸೂಚಿಸಿದರು. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರದ ಅಂದಗೆಡಿಸುವ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಬೇಕು. ಮಾತಿಗೆ ಬಗ್ಗದಿದ್ದರೆ ಪರವಾನಗಿ ರದ್ದು ಪಡಿಸಲು ನೋಟಿಸ್ ಕೊಡಬೇಕು. ಕರಪತ್ರ ಹಂಚಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಉಪವಿಭಾಗಾಧಿಕಾರಿ ಎಲ್ಲ ತಾಲ್ಲೂಕುಗಳಿಗೆ ಭೇಟಿ ಕೊಡಬೇಕೆಂದು ಲವೀಶ್‌ ಒರ್ಡಿಯಾ ಅವರಿಗೆ ಸೂಚಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ, ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ ಮತ್ತಿತರರು ಹಾಜರಿದ್ದರು.

‘ಅಶುದ್ಧ ನೀರಿನಿಂದ ಏನಾದ್ರೂ ಆದ್ರೆ ತಲೆದಂಡ’

‘ಶುದ್ಧ‌ ಕುಡಿಯುವ ನೀರು ಪೂರೈಸಬೇಕು. ಯಾರಾದರೂ ಅಶುದ್ಧ ನೀರು ಕುಡಿದು ಏನಾದ್ರೂ ಆದ್ರೆ ನಿಮ್ಮ ತಲೆದಂಡ ಆಗುತ್ತದೆ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್‌ ಎಚ್ಚರಿಕೆ ನೀಡಿದರು.

ಯುಜಿಡಿ‌ ತ್ಯಾಜ್ಯ ಸೋರಿಕೆಯಾಗಿ ಕುಡಿಯುವ ನೀರಿನಲ್ಲಿ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಮೂರು ತಿಂಗಳಿಗೊಮ್ಮೆ ಕುಡಿಯುವ ನೀರಿನ ಟ್ಯಾಂಕ್ ಕಡ್ಡಾಯವಾಗಿ ಶುದ್ಧಗೊಳಿಸಬೇಕು. ಈ ವಿಷಯದಲ್ಲಿ ಗಂಭೀರವಾಗಿರಬೇಕು ಎಂದು ಹೇಳಿದರು.

ನಗರದ ಹಲವು ಕಡೆಗಳಲ್ಲಿ ನೀರಿನ ಪೈಪ್‌ ಒಡೆದು ಹೋಗಿದೆ. ಅದರೊಳಗೆ ಮಳೆ ನೀರು, ತ್ಯಾಜ್ಯ ಸೇರುತ್ತಿದೆ. ಒಡೆದಿರುವ ಪೈಪ್‌ಗಳನ್ನು ದುರಸ್ತಿಗೊಳಿಸಬೇಕು. ಚಿದ್ರಿ, ಶಹಾಪುರ ಗೇಟ್‌ ಸೇರಿದಂತೆ ಹಲವೆಡೆ 24X7 ಕುಡಿಯುವ ನೀರಿನ ಸಂಪರ್ಕ ನೀಡಿಲ್ಲ. ಆ ಕೆಲಸ ಬೇಗ ಮಾಡಬೇಕೆಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.